ಸಿಎಂ ಸಿದ್ದರಾಮಯ್ಯ ವಿರುದ್ಧ ಫ್ಯಾಕ್ಸ್ ವೇಗದಲ್ಲಿ ಪತ್ರ
ಬೆಳಗಾವಿ, ನ.28: ಹೈಸ್ಪೀಡಿನಲ್ಲಿದ್ದ ನಾಡಿನ ದೊರೆ ಸಿದ್ದರಾಮಯ್ಯ ನಿಜಕ್ಕೂ ಹೈರಾಣಗೊಂಡಿದ್ದಾರೆ. ಒಂದೆಡೆ ಸ್ವಪಕ್ಷೀಯರ ಕಾಟ ಮತ್ತೊಂದೆಡೆ ಎದುರಿಗೇ ವಿರೋಧ ಪಕ್ಷಗಳ ದಾಳಿ. ಈ ಮಧ್ಯೆ ಒಂದಾದನಂತರ ಮತ್ತೊಂದು ತಾವೇ ಮಾಡಿಕೊಂಡ ಎಡವಟ್ಟುಗಳು.
ಇದರ ಪರಿಣಾಮವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಬೀರಲಿದೆ ಎಂದು ಅಂದುಕೊಂಡಿದ್ದವರಿಗೆ ಅಲ್ಲಿಯವರೆಗೂ ಕಾಯುವ ಜರೂರತ್ತೇ ಇಲ್ಲ. ಶುಭಸ್ಯ ಶೀಘ್ರಂ ಅನ್ನುವಂತಹ ಬೆಳವಣಿಗೆಗಳು ಗೋಚರಿಸುತ್ತಿವೆ. ಪಕ್ಷವನ್ನೂ ಗಣನೆಗೆ ತೆಗೆದುಕೊಳ್ಳದೇ ತಮ್ಮ ಸುತ್ತಮುತ್ತ ನೆರೆದಿದ್ದ ಪಟಾಲಮ್ಮಿನ ಮಾತು ಕೇಳಿಕೊಂಡು ಏಕಪಕ್ಷೀಯವಾಗಿ ನಿಂತ ನಿಲುವಿನಲ್ಲೇ ನೀತಿನಿಲುವುಗಳನ್ನು ಹೊರಡಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂಬ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. [ನಡುಕ ಹುಟ್ಟಿಸಿದ ಮೋದಿ ಅಲೆ]

ಅದರಲ್ಲೂ ಕಬ್ಬು ಬೆಂಬಲ ಬೆಲೆ ನಿಗದಿ ಹೋರಾಟಾರ್ಥ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಿದ್ದರಾಮಯ್ಯ ಅವರನ್ನು ಮತ್ತೆ ಖೆಡ್ಡಾಗೆ ಕೆಡವಿದೆ. ಇಂತಹುದೇ ಶುಭಕಾಲಕ್ಕೆ ಕಾಯುತ್ತಿದ್ದವರಂತೆ ಪಕ್ಷದ 20ಕ್ಕೂ ಹೆಚ್ಚು ಶಾಸಕರು ಸಿದ್ದು ಮಂತ್ರಿಮಂಡಲದ ಕಾರ್ಯವೈಖರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಫ್ಯಾಕ್ಸ್ ವೇಗದಲ್ಲಿ ಪತ್ರ ಬರೆದಿದ್ದಾರೆ.
ಈ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಸಂಪುಟದ ಹಲವು ಸಚಿವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾವಣೆ ಮಾಡಿ ಇಲ್ಲವೇ ಬೇರೆಯವರನ್ನು ನೇಮಿಸುವಂತೆ ಹೈಕಮಾಂಡಿಗೆ ಮನವರಿಕೆ ಮಾಡಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ರಾಜ್ಯ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಬೆಳಗಾವಿಯಿಂದ ಫ್ಯಾಕ್ಸ್ ಮೂಲಕ ನಿನ್ನೆ ಸಂಜೆ ಪತ್ರ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಶಾಸಕರ ಮಾತಿಗೆ ಕಿಮ್ಮತ್ತು ನೀಡುವುದಿಲ್ಲ. ಯಾವುದೇ ಕೆಲಸಗಳನ್ನು ಮಾಡಿಕೊಡುವುದಿಲ್ಲ. ಇದರಿಂದ ಕ್ಷೇತ್ರಗಳಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲ, ಸಚಿವರ ಉದಾಸೀನ ಧೋರಣೆಯಿಂದ ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸ್ವಪಕ್ಷದವರೇ ಆದರೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆಯಾಗಲಿ, ಇಲಾಖೆಗಳ ಬಗ್ಗೆಯಾಗಲಿ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದೆ ಉಡಾಫೆಯಾಗಿ ವರ್ತಿಸುತ್ತಾರೆ' ಈ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಅಲವತ್ತುಕೊಂಡಿದ್ದಾರೆ.
ಮುಖ್ಯವಾಗಿ ಸಚಿವರಾದ ಎಚ್ ಸಿ ಮಹದೇವಪ್ಪ, ಶ್ರೀನಿವಾಸಪ್ರಸಾದ್, ಮಹದೇವ ಪ್ರಸಾದ್, ಖಮುರುಲ್ ಇಸ್ಲಾಂ, ಅಂಬರೀಷ್, ಬಾಬುರಾವ್ ಚಿಂಚನಸೂರ್, ಆರ್ ವಿ ದೇಶಪಾಂಡೆ ಮುಂತಾದ ಪ್ರಮುಖ ಖಾತೆದಾರರು ಯಾವುದೇ ತಮಗೆ ರೀತಿ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದೇವೆ.
ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವರಿಗೆ ಸೂಚನೆ ನೀಡಿದ್ದಾರೆ. ಆದರೂ ಸಚಿವರು ಕ್ಯಾರೆ ಅನ್ನುತ್ತಿಲ್ಲ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇವರ ಖಾತೆಗಳನ್ನು ಬದಲಿಸಬೇಕು' ಎಂದು ಈ ಇಪ್ಪತ್ತಕ್ಕೂ ಹೆಚ್ಚು ಶಾಸಕರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications