Tomato Price: ಟೊಮೆಟೊ ಬೆಳೆದ ರೈತರ ಬದುಕು ಬೀದಿಪಾಲು?
ರೈತನ ಬದುಕು ಅತಂತ್ರ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದ್ದು, ದೇಶದಲ್ಲಿ ಕೃಷಿಕರಿಗೆ ನಷ್ಟ ಗ್ಯಾರಂಟಿ ಅನ್ನೋ ಆರೋಪ ಇದೆ. ಈಗ 'ಟೊಮೆಟೊ' ಬೆಳೆಗಾರರ ವಿಚಾರದಲ್ಲೂ ಇಂತಹದ್ದೇ ಸ್ಥಿತಿ ಸೃಷ್ಟಿಯಾಗಿದೆ. ಕೇವಲ ಒಂದು ತಿಂಗಳ ಹಿಂದಷ್ಟೇ ಲಕ್ಷಲಕ್ಷ ರೂಪಾಯಿ ಲಾಭ ಎಣಿಸಿದ್ದ ಟೊಮೆಟೊ ರೈತರು, ಈಗ ಚಿಲ್ಲರೆ ಕಾಸಿಗೆ ಟೊಮೆಟೊ ಬೆಳೆ ಮಾರುವ ಸ್ಥಿತಿ ಎದುರಾಗಿದೆ. ಹಾಗಾದರೆ ಟೊಮೆಟೊ ಬೆಲೆ ಎಷ್ಟಕ್ಕೆ ಕುಸಿದಿದೆ? ಬನ್ನಿ ತಿಳಿಯೋಣ.
ಜೂನ್ & ಜುಲೈ ತಿಂಗಳಲ್ಲಿ ಟೊಮೆಟೊ ಬೆಲೆ ದೇಶಾದ್ಯಂತ ಮುಗಿಲು ಮುಟ್ಟಿತ್ತು. ಹೀಗೆ ಟೊಮೆಟೊ ಬೆಳೆದ ರೈತರು ಕೈತುಂಬಾ ಕಾಸು ನೋಡಿದ್ದರು. ಆದರೆ ಆಗಸ್ಟ್ ಆರಂಭದಲ್ಲಿ ಮತ್ತೆ ಕುಸಿಯಲು ಆರಂಭಿಸಿದ್ದ ಟೊಮೆಟೊ ರೇಟ್, ಈಗ ಪಾತಾಳ ಸೇರಿದೆ. ಲಕ್ಷಾಂತರ ರೂಪಾಯಿ ಲಾಭ ನೋಡಿದ್ದ ರೈತರು ಈಗ ತಾವು ಹಾಕಿದ ಬಂಡವಾಳ ಬಂದರೆ ಸಾಕಪ್ಪ ದೇವರೆ ಅಂತಿದ್ದಾರೆ. ಮಳೆ ಕೊರತೆ ಹಾಗೂ ಟೊಮೆಟೊ ಬೆಳೆ ಮಾರುಕಟ್ಟೆಗೆ ಬರುವುದು ತಡವಾಗಿದ್ದ ಹಿನ್ನೆಲೆಯಲ್ಲಿ ಟೊಮೆಟೊ ರೇಟ್ ಹೆಚ್ಚಾಗಿತ್ತು. ಇದರ ಜೊತೆ ನೆರೆ ದೇಶಗಳ ಟೊಮೆಟೊ ಕೂಡ ಭಾರತಕ್ಕೆ ಬಂದಿರಲಿಲ್ಲ. ಆದ್ರೆ ಈಗ ಟೊಮೆಟೊ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರ್ತಿದೆ ಎನ್ನಲಾಗಿದ್ದು ಟೊಮೆಟೊ ಬೆಳೆದ ರೈತರಿಗೆ ಆಂತಕ ಎದುರಾಗಿದೆ.

ಏನ್ ಗುರೂ ಇದು ಟೊಮೆಟೊ ರೇಟ್...
ಆಗಸ್ಟ್ ಆರಂಭದಲ್ಲಿ ಕರ್ನಾಟಕದ ಕೋಲಾರ ಟೊಮೆಟೊ ಮಾರುಕಟ್ಟೆಯಲ್ಲಿ 14 ಕೆಜಿಯ ತೂಕದ ಬಾಕ್ಸ್‌ಗೆ ಸರಾಸರಿ ₹700 ಇತ್ತು. ಆದ್ರೆ ಅದಕ್ಕೂ ಮುನ್ನ ಅಂದರೆ ಜುಲೈ ತಿಂಗಳಲ್ಲಿ 14 ಕೆಜಿ ತೂಕದ ಬಾಕ್ಸ್‌ಗೆ 2500 ರೂಪಾಯಿ ಬೆಲೆ ಬಂದಿತ್ತು. ಹೀಗೆ ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ ಕಾರಣ ಟೊಮೆಟೊ ಬೆಳೆಯುವ ರೈತರು ಕೂಡ ಹೆಚ್ಚಾಗಿದ್ದರು. ಆದರೆ ಈ ಬೆಲೆ ದಿಢೀರ್ ಕುಸಿತದ ಹಾದಿ ಹಿಡಿದು, ₹1700.. ₹1500.. ₹1200.. ಅಂತಾ ಕೊನೆಗೆ ಸಾವಿರ ರೂಪಾಯಿ ಒಳಗೆ ಕುಸಿದಿತ್ತು. ಈಗ ನೋಡಿದರೆ ಟೊಮೆಟೊಗೆ ₹500 ರೂಪಾಯಿ ಕೂಡ ಸಿಗುತ್ತಿಲ್ಲ. ಅದರಲ್ಲೂ ನಿನ್ನೆ ಅತಿಹೆಚ್ಚು ಅಂದರೆ 380 ರೂಪಾಯಿಗೆ ಟೊಮೆಟೊ ಮಾರಾಟವಾಗಿತ್ತು. ಈ ಮೂಲಕ ರೈತರು ಒತ್ತಡಕ್ಕೆ ಸಿಲುಕಿದ್ದಾರೆ.
ದೇಶದ ವಿವಿಧೆಡೆ ಕರ್ನಾಟಕ & ದಕ್ಷಿಣ ಭಾರತದ ಟೊಮೆಟೊಗೆ ಭಾರಿ ಬೇಡಿಕೆ ಇದೆ, ಬೆಲೆಯ ಕುಸಿತ ಸಂಕಷ್ಟ ತಂದಿದೆ. ಲಕ್ಷಾಂತರ ರೂಪಾಯಿ ಸುರಿದು ಟೊಮೆಟೊ ಬೆಳೆದಿರುವ ರೈತರಿಗೆ ಮತ್ತೆ ಟೊಮೆಟೊ ಕೈಹಿಡಿವ ನಿರೀಕ್ಷೆ ಇತ್ತು. ಆದರೆ ಬೆಲೆ ಕುಸಿತ ಭಯ ಮೂಡಿಸಿದೆ. ಕೆಲವು ತಿಂಗಳು ಟೊಮೆಟೊಗೆ ಚಿನ್ನದ ದರ ಇತ್ತು. ಉತ್ತರ ಭಾರತದಲ್ಲಿ ಟೊಮೆಟೊ ಆಮದಿಗೆ ಭಾರಿ ಬೇಡಿಕೆ ಬಂದಿತ್ತು. ಹೀಗಾಗಿ ಸಾಕಷ್ಟು ಪ್ರಮಾಣದ ಟೊಮೆಟೊ ರಫ್ತಾಗಿ, ರೈತರು ಒಳ್ಳೇ ಲಾಭ ಗಳಿಸಿದ್ರು. ಈಗ ನೋಡಿದ್ರೆ ಟೊಮೆಟೊ ರೇಟ್ ಪಾತಾಳದತ್ತ ಮುಖ ಮಾಡುತ್ತಿದೆ. ಇದೇ ಸ್ಥಿತಿ ಹೀಗೆ ಮುಂದುವರಿದರೆ ರೈತರು ರಸ್ತೆಗೆ ಟೊಮೆಟೊ ಸುರಿದು ಹೋರಾಟ ನಡೆಸುತ್ತಾರೆಂದು ಈಗಾಗಲೇ ರೈತ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಟ್ನಲ್ಲಿ ಬೆಲೆ ಬಂದಾಗ ಬೆಳೆ ಬರೋದಿಲ್ಲ, ಬೆಳೆ ಇದ್ರೆ ಅನ್ನದಾತ ರೈತನಿಗೆ ಬೆಲೆ ಸಿಗಲ್ಲ. ಈ ಪರಿಸ್ಥಿತಿ ಕಳೆದ ಹಲವು ದಶಕದಿಂದಲೂ ಮುಂದುವರಿದಿದೆ. ಆದರೆ ಇದಕ್ಕೆ ಸರಿಯಾದ ಕ್ರಮ ಮಾತ್ರ ಜರುಗಿಸಲಾಗಿಲ್ಲ. ರೈತರ ಬೆಳೆಗಳಿಗೆ & ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಎಂಬುದು ರೈತ ಮುಖಂಡರ ಆರೋಪ. ಇದನ್ನೆಲ್ಲಾ ಸರ್ಕಾರಗಳು ಗಮನಿಸಿ, ರೈತರಿಗೆ ಸರಿಯಾದ ಸೌಲಭ್ಯ ಒದಗಿಸಬೇಕು. ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗಬೇಕು ಎಂಬ ಆಗ್ರಹ ಕೇಳಿಬಂದಿದೆ. ಹಾಗೇ ಟೊಮೆಟೊ ಬೆಳೆದ ರೈತರು ಲಾಭದ ಕಥೆ ಬಿಡಿ ಈಗ ಸಾಲದ ಸುಳಿಗೆ ಸಿಲುಕುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ.












Click it and Unblock the Notifications