ಯದುವೀರ್ VS ಪ್ರತಾಪ್ ಸಿಂಹ: ಏನಿದು ‘ಎಸಿ ರೂಂ’ ಗಲಾಟೆ?
ಮೈಸೂರು ಕ್ಷೇತ್ರದ ಟಿಕೆಟ್ ಕಳೆದುಕೊಂಡ ನಂತರ ಪ್ರತಾಪ್ ಸಿಂಹ ಕೋಪಗೊಂಡಿದ್ದಾರೆ. ಒಂದು ಕಡೆ ಕೇಂದ್ರದ ವರಿಷ್ಠರ ಮೇಲಿನ ಮುನಿಸು ಬೇರೆ ರೀತಿಯಲ್ಲಿ ಹೊರ ಬರುತ್ತಿದ್ದು, ಇದು ಮೈಸೂರು ಕ್ಷೇತ್ರದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಪ್ರತಾಪ್ ಸಿಂಹ 'ಎಸಿ ರೂಂ' ಹೇಳಿಕೆಯ ಬಗ್ಗೆ ಮೈಸೂರು ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೂಡ ರೊಚ್ಚಿಗೆದ್ದಿದ್ದಾರೆ.
ಹೌದು ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಮಿಸ್ ಆಗಲು ಕಾರಣ ಯಡಿಯೂರಪ್ಪ ಅವರು ಅನ್ನೋ ಆರೋಪವನ್ನು ಈ ಮೊದಲು ಮಾಡಲಾಗಿತ್ತು. ಆದರೆ ಅಸಲಿ ಕಾರಣ ರಾಜಸ್ಥಾನ ಅನ್ನೋದು ಆಮೇಲೆ ಗೊತ್ತಾಗಿತ್ತು. ಯದುವೀರ ಕೃಷ್ಣದತ್ತ ಒಡೆಯರ್ ಮಾವ ಅಂದ್ರೆ ಇದೇ ಯದುವೀರ ಅವರ ಧರ್ಮಪತ್ನಿಯ ತಂದೆ ಮೈಸೂರು & ಕೊಡಗು ಕ್ಷೇತ್ರ ಟಿಕೆಟ್ ತರಲು, ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು ಎಂಬ ಸತ್ಯ ಈಗ ಜಗತ್ತಿಗೆ ಗೊತ್ತಾಗುತ್ತಿದೆ. ಇವರು ರಾಜಸ್ಥಾನ ಮೂಲದವರು. ಹೀಗಿದ್ದಾಗ ತಮ್ಮ ವಿರುದ್ಧ ಪ್ರತಾಪ್ ಸಿಂಹ ನೀಡಿದ್ದ 'ಎಸಿ ರೂಂ' ಹೇಳಿಕೆಗೂ ಯದುವೀರ್ ಇದೀಗ ಸರಿಯಾಗೇ ತಿರುಗೇಟು ನೀಡಿದ್ದಾರೆ. ಹಾಗೇ ತಮ್ಮ ರಾಜಕೀಯ ಭವಿಷ್ಯವನ್ನೂ ಸ್ಪಷ್ಟವಾಗಿ ಹೊರ ಜಗತ್ತಿಗೆ ತಿಳಿಸಿದ್ದಾರೆ.

ನಾನು ಜನರ ನಡುವೆಯೇ ಬೆಳೆದಿದ್ದೇನೆ!
ಕನ್ನಡದ ಖಾಸಗಿ ನ್ಯೂಸ್ ಚಾನೆಲ್‌ಗಳಿಗೆ ಸಂದರ್ಶನ ನೀಡಿರುವ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್, ಪ್ರತಾಪ್ ಸಿಂಹ ತಮ್ಮ ವಿರುದ್ಧ ನೀಡಿದ್ದ ಒಂದೊಂದು ಹೇಳಿಕೆಗೂ ಕಡ್ಡಿ ತುಂಡು ಮಾಡಿದಂತೆ ಉತ್ತರ ನೀಡಿದ್ದಾರೆ. ತಾವು ಎಸಿ ರೂಂನಲ್ಲಿ ಇದ್ದು ಹೊರಗೆ ಬರುತ್ತಿರುವವರು ಎಂಬ ಮಾತಿಗೆ ತಿರುಗೇಟು ನೀಡಿರುವ ಯದುವೀರ್, ಹಲವಾರು ವರ್ಷಗಳಿಂದ ನಾನು ಜನರ ನಡುವೆಯೇ ಇದ್ದೇನೆ ಎಂದು ಉತ್ತರಿಸಿದ್ದಾರೆ. ಹಾಗೇ ಇನ್ನೂ ಒಂದು ಮಾತನ್ನ ಸ್ಪಷ್ಟವಾಗಿ ಹೇಳಿದ ಯದುವೀರ್, ನನ್ನ ಸಾಮರ್ಥ್ಯವನ್ನ ಬೇರೆಯವರಿಗೆ ಸಾಬೀತು ಮಾಡುವ ಅಗತ್ಯತೆ ಇಲ್ಲ ಎಂಬ ಅರ್ಥದಲ್ಲಿ ತಿರುಗೇಟು ನೀಡಿದ್ದಾರೆ.
ಏನ್ ಇದು ಹೊಸ ಟೆನ್ಷನ್?
ಹೀಗೆ ಲೋಕಸಭೆ ಚುನಾವಣೆ 2024ರ ಟಿಕೆಟ್ ಮಿಸ್ ಆದ ನಂತರ ಯದುವೀರ್ & ಪ್ರತಾಪ್ ಸಿಂಹ ನಡುವೆ ದೊಡ್ಡ ಬೆಂಕಿ ಹೊತ್ತಿಕೊಂಡಿದೆ, ಇದರಿಂದ ಕಾಂಗ್ರೆಸ್‌ಗೆ ಲಾಭ ಎನ್ನುವಂತೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೆಲ್ಲದರ ಹೊರತಾಗಿ, ಮೈಸೂರು ಕ್ಷೇತ್ರಕ್ಕೆ ರಾಜವಂಶಸ್ಥನಿಗೆ ಟಿಕೆಟ್ ಕೊಟ್ಟಿರುವ ಬಿಜೆಪಿ ಹೈಕಮಾಂಡ್ ನಾಯಕರಿಗೆ ಇದೀಗ ಹೊಸ ಟೆನ್ಷನ್ ಶುರುವಾಗಿದೆ.
ಯಾಕಂದ್ರೆ ಚುನಾವಣೆಯಲ್ಲಿ ಇದೇ ಅಸ್ತ್ರ ಬಳಸಿ ಕಾಂಗ್ರೆಸ್ ಗೆದ್ದುಬಿಟ್ಟರೆ? ಎನ್ನುವ ಚಿಂತೆ ಕೂಡ ಶುರುವಾದಂತೆ ಕಾಣುತ್ತಿದೆ. ಇನ್ನೊಂದು ಕಡೆಯಲ್ಲಿ ಈ ಅಸಮಾಧಾನ ತಣ್ಣಗೆ ಮಾಡಲು ಕೂಡ ದೊಡ್ಡ ಪ್ರಯತ್ನಗಳು ಸಾಗಿದಂತೆ ಕಾಣ್ತಿವೆ.
ಪತ್ರಕರ್ತ ಸಿಂಹ ಟು ಸಂಸದ ಸಿಂಹ!
ನಿಮಗೆಲ್ಲಾ ಗೊತ್ತಿರುವಂತೆ ಪ್ರತಾಪ್ ಸಿಂಹ ಈ ಹಿಂದೆ ಕನ್ನಡದ ಪ್ರತಿಷ್ಠಿತ ಸುದ್ದಿ ಪತ್ರಿಕೆಯ ಅಂಕಣಕಾರನಾಗಿ ಗುರುತಿಸಿಕೊಂಡಿದ್ದವರು. ಬೆತ್ತಲೆ ಜಗತ್ತು & ಬೆತ್ತಲೆ ಪ್ರಪಂಚ ಕಾಲಂಗಳ ಮೂಲಕ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರನ್ನು ನೇರವಾಗಿ ಟೀಕಿಸಿ ಬರೆದು ಫೇಮಸ್ ಆದರು. ಆದರೆ ಇದೇ ಸಿಂಹ ಮುಂದೆ ಬಿಜೆಪಿ ಪಕ್ಷವನ್ನು ಸೇರಿ, ತಾವು ಟೀಕೆ ಮಾಡಿದ್ದ ನಾಯಕರ ಜೊತೆಯಲ್ಲೇ ವೇದಿಕೆಯನ್ನೂ ಹಂಚಿಕೊಂಡರು.
ಅದು ಮುಂದೆ ದೊಡ್ಡ ಚರ್ಚೆಗೆ ಕೂಡ ವೇದಿಕೆ ಒದಗಿಸಿತ್ತು. ಹೀಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮೈಸೂರು & ಕೊಡಗು ಕ್ಷೇತ್ರದಲ್ಲಿ ಟಿಕೆಟ್ ಮಿಸ್ ಆದ ನಂತರ, ದೊಡ್ಡ ಅಸಮಾಧಾನ ಭುಗಿಲೆದ್ದಂತೆ ಕಾಣುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಮೈಸೂರು ಕ್ಷೇತ್ರದಲ್ಲಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡ, ಬಿಜೆಪಿ ಹೈಕಮಾಂಡ್‌ಗೆ ಈಗ ಹೊಸ ಟೆನ್ಷನ್ ಶುರುವಾಗಿದೆ. ಹೀಗಾಗಿ ಪ್ರತಾಪ್ ಸಿಂಹ ಅವರ ಕೋಪ ತಣ್ಣಗಾಗಿಸಲು ಬಿಜೆಪಿ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಅಥವಾ ತಮ್ಮ ಬತ್ತಳಿಕೆಯಲ್ಲಿ ಇರುವ ಹೊಸ ಬಾಣವನ್ನು ಪ್ರಯೋಗ ಮಾಡ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ. ಇದೆಲ್ಲಾ ಏನೇ ಇದ್ರೂ ಬಿಜೆಪಿ ಹೈಕಮಾಂಡ್ ಮಾತ್ರ ತುಂಬಾನೆ ಸ್ಟ್ರಾಂಗ್ ಅನ್ನೋದನ್ನ ಮತ್ತೊಮ್ಮೆ ನಾವು ಮನವರಿಕೆ ಮಾಡಿಕೊಳ್ಳಬೇಕಿದೆ!












Click it and Unblock the Notifications