ಕನ್ನಡ ಮಾತನಾಡುವ ವಿಚಾರವಾಗಿ ಟ್ರೋಲ್‌ಗೆ ಒಳಗಾದ ಸಿದ್ದರಾಮಯ್ಯ ಮೊಮ್ಮಗ ಓದಿದ್ದೆಲ್ಲಿ? ಆತನ ಹಿನ್ನೆಲೆ ಏನು ತಿಳಿಯಿರಿ
ಬೆಂಗಳೂರು, ಏಪ್ರಿಲ್ 26: ಮಾಜಿ ಸಿಎಂ ಸಿದ್ದರಾಮಯ್ಯಗೆ ಕನ್ನಡ ಭಾಷೆಯ ಮೇಲಿರುವ ಹಿಡಿತ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ವಚನ ಸಾಹಿತ್ಯದಲ್ಲಿ ಆಸಕ್ತಿ ಇರುವ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಶಾಸಕರಿಗೆ ಸಂಧಿ ಹಾಗೂ ಸಮಾಸಗಳ ಬಗ್ಗೆಯೂ ಅವರು ಪಾಠ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ಸಿದ್ದರಾಮಯ್ಯನವರ ಮೊಮ್ಮಗ ಇದೇ ಕನ್ನಡದ ವಿಚಾರವಾಗಿ ಟ್ರೋಲ್ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಾರ ವರುಣಾದಲ್ಲಿ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಸಿದರು. ಆ ವೇಳೆ, ತಮ್ಮ ಹಿರಿಯ ಪುತ್ರ, ದಿವಂಗತ ರಾಕೇಶ್ ಅವರ ಮಗನನ್ನು ಸಾರ್ವಜನಿಕರಿಗೆ ಪರಿಚಯಿಸಿದರು. ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಮೊಮ್ಮಗನ ಕಡೆಗೆ ಎಲ್ಲರ ಗಮನ ನೆಟ್ಟಿತ್ತು. ಅಲ್ಲಿ ನೆರೆದಿದ್ದ ಜನರು ದವನ್ ರಾಕೇಶ್ ಅವರ ಹೆಸರು ಹೇಳುತ್ತಿದ್ದಂತೆ ಹರ್ಷೋದ್ಗಾರ ಮೊಳಗಿಸಿದರು.

ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, 'ನನ್ನ ಮೊಮ್ಮಗನಿಗೆ ಇನ್ನೂ 17 ವರ್ಷ ವಯಸ್ಸಾಗಿದೆ. ಈತ 25 ವರ್ಷಕ್ಕೆ ಕಾಲಿಡಲು ಇನ್ನೂ ಎಂಟು ವರ್ಷ ಬಾಕಿ ಉಳಿದಿವೆ. ಎಂಟು ವರ್ಷಗಳ ಬಳಿಕ ಚುನಾವಣೆಗೆ ಸ್ಪರ್ಧಿಸಲು ಈತ ಅರ್ಹನಾಗುತ್ತಾನೆ' ಎಂದು ಹೇಳಿದ್ದಾರೆ.
'ಅವನು ಇನ್ನೂ ತನ್ನ ಅಧ್ಯಯನವನ್ನು ಮುಗಿಸಿಲ್ಲ. ವಿದ್ಯಾಭ್ಯಾಸ ಮುಗಿಸಿದ ನಂತರವೇ ರಾಜಕೀಯಕ್ಕೆ ಬರಲು ಸಾಧ್ಯ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ತಮ್ಮ ಮೊಮ್ಮಗನಿಗೆ ಜನ ಮನ್ನಣೆ ಸಿಗಲಿ ಎಂದು ಇದೇ ವೇಳೆ ಹಾರೈಸಿದ್ದಾರೆ.

ಜನಮಾನಸದಲ್ಲಿ ಜನಪ್ರಿಯತೆ ಹೊಂದಿದ್ದರೂ ಅಕಾಲಿಕ ಮರಣಕ್ಕೆ ತುತ್ತಾದ ರಾಕೇಶ್ ಮೇಲೆ ಪ್ರೀತಿ ಹಾಗೂ ಅಭಿಮಾನವನ್ನು ಜನತೆ ಹೊಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಭೆಯ ಬಳಿಕ ಟಿವಿ ಚಾನೆಲ್ ಜೊತೆ ಮಾತನಾಡಿದ ಧವನ್, 'ನಾನು ಪಿಯುಸಿ ಓದುತ್ತಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಕಾನೂನಿನ ಅಭ್ಯಾಸ ಮಾಡಲು ಬಯಸುತ್ತೇನೆ. ನನಗೆ ಡಾ ಬಿ ಆರ್ ಅಂಬೇಡ್ಕರ್ ಆದರ್ಶಪ್ರಿಯರು. ನನ್ನ ತಾತನಂತೆ ರಾಜಕೀಯ ಪ್ರವೇಶಿಸಿ ಜನರ ಸೇವೆ ಮಾಡಲು ಬಯಸುತ್ತೇನೆ' ಎಂದು ಹೇಳಿದ್ದಾನೆ.
ಆದರೆ, ಆತ ಕನ್ನಡ ಮಾತನಾಡುವ ಶೈಲಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾನೆ. ಕನ್ನಡ ಮಾತನಾಡುವಾಗ ಇಂಗ್ಲಿಷಿನ ಪ್ರಭಾವ ಹೆಚ್ಚಿರುವುದು ಆತನ ಮಾತುಗಳಲ್ಲಿ ಕಂಡಿಬಂದಿದೆ.

ಇದನ್ನೇ ಟ್ರೋಲ್ ಮಾಡಿರುವ ನೆಟ್ಟಿಗರು, ಊರೆಗೆಲ್ಲಾ ಕನ್ನಡ ಪಾಠ ಮಾಡುವ ಸಿದ್ದರಾಮಯ್ಯ ಮೊಮ್ಮನಿಗೆ ಕನ್ನಡ ಬರುವುದಿಲ್ಲವೆಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಮೊಮ್ಮಗನ ವಿದ್ಯಾಬ್ಯಾಸದ ಹಿನ್ನೆಲೆ
ಸಿದ್ದರಾಮಯ್ಯ ಮೊಮ್ಮಗ ದವನ್ ರಾಕೇಶ್ ಅವರು ಯುರೋಪ್ ಖಂಡದ ಜರ್ಮನಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾನೆ. ಪ್ರಸ್ತುತ ಅವರಿಗೆ 17 ವರ್ಷ ವಯಸ್ಸಾಗಿದ್ದು, 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬೆಲ್ಜಿಯಂನ ಕಾಲೇಜಿನಲ್ಲಿ ಓದುತ್ತಿರುವ ಅವರು ಅರ್ಥ ಶಾಸ್ತ್ರವನ್ನು ಆಯ್ಕೆಯ ವಿಷಯವನ್ನಾಗಿ ಆರಿಸಿಕೊಂಡಿದ್ದಾನೆ. ಮುಂದೆ, ಕಾನೂನು ವ್ಯಾಸಂಗ ಮಾಡಬೇಕೆನ್ನುವುದು ಆತನ ಅಭಿಲಾಸೆಯಾಗಿದೆ.
ವರುಣಾದಲ್ಲಿ ಸಕ್ರಿಯರಾಗಿದ್ದ ರಾಕೇಶ್
ದವನ್ ಅವರ ತಂದೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅವರು ಅಪಾರ ಜನಪ್ರಿಯತೆಯನ್ನು ಹೊಂದಿದ್ದರು. ಅವರ ಮರಣದ ನಂತರ ಸಿದ್ದರಾಮಯ್ಯನವರ ಕಿರಿಯ ಪುತ್ರ ಡಾ ಯತೀಂದ್ರ ಅವರು ವರಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರಣಾದಿಂದ ಕಣಕ್ಕಿಳಿದಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ದವನ್ ಅವರು ವರುಣಾ ಕ್ಷೇತ್ರದಲ್ಲಿ ಸಕ್ರಿಯರಾಗುವ ಸಾಧ್ಯತೆ ಇದೆ.












Click it and Unblock the Notifications