ಧರ್ಮಸ್ಥಳ ಎಸ್‌ಐಟಿ ತನಿಖೆ: ಮಹತ್ವದ ಮಾಹಿತಿ ಹಂಚಿಕೊಂಡ ಕರ್ನಾಟಕ ಸರ್ಕಾರ!
Dharmasthala SIT Investigation: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ತೀವ್ರವಾಗಿ ಮುಂದುವರಿದಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಂಚಿಕೊಂಡಿದೆ. ಧರ್ಮಸ್ಥಳ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಷಯದಲ್ಲಿ ಬಹಳ ಗಂಭೀರವಾದ ತನಿಖೆ ನಡೆದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದು, ಕೆಲವೊಂದು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಧರ್ಮಸ್ಥಳ ಪ್ರಕರಣ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ಕೋಟ್ಯಾಂತರ ಭಕ್ತರು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ, ಸತ್ಯಾಸತ್ಯತೆ ಹೊರಗೆ ಬರಬೇಕು ಎಂಬುದು ಇದೆ. ಈ ವಿಚಾರದಲ್ಲಿ ಎಸ್ಐಟಿ ಅವರ ಮೇಲೆ ಮಹತ್ವದ ಜವಾಬ್ದಾರಿ ಇದೆ. ಚಿನ್ನಯ್ಯ ಬಂಧನ ಆದ ಮೇಲೆ ಅದರ ಫಾಲೋಅಪ್ ಕೂಡ ಆಗುತ್ತಿದೆ. ಆದಷ್ಟು ಬೇಗ ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿದೆ. ತನಿಖೆ ಬೇಗ ಮುಗಿಸಬೇಕು ಅಂತ ಎಸ್‌ಐಟಿ ಅವರೂ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಮಹೇಶ್ ತಿಮರೋಡಿ ಮನೆ ಮೇಲೆ ಎಸ್‌ಐಟಿ ರೇಡ್ ವಿಚಾರವಾಗಿ ಮಾತನಾಡಿರುವ ಅವರು, ಸರ್ಕಾರ ಎಸ್ಐಟಿಗೆ ಯಾವುದೇ ನಿರ್ದೇಶನ ಕೊಡುವುದಿಲ್ಲ. ನಾವು ಆದೇಶದಲ್ಲಿ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ. ಎಸ್ಐಟಿ ಅವರದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ಅವರು ಯಾರನ್ನು ವಿಚಾರಣೆ ಕರೆಯುತ್ತಾರೆ ಯಾರ ಮೇಲೆ ರೇಡ್ ಮಾಡ್ತಾರೆ ಅದನ್ನೆಲ್ಲ ನಮಗೆ ಹೇಳಿ ಕೇಳಿ ಮಾಡುವುದಿಲ್ಲ. ಅವರು ತನಿಖೆಯ ಆಧಾರದ ಮೇಲೆ ಮಾಹಿತಿ ಆಧಾರದ ಮೇಲೆ ಮಾಡುತ್ತಾರೆ ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಸರ್ಕಾರ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಎನ್‌ಐಎಗೆ ಕೊಡಬೇಕಾದ ಅವಶ್ಯಕತೆ ಇಲ್ಲ. ನಮ್ಮ ಎಸ್ಐಟಿ ಅಧಿಕಾರಿಗಳು ಸಮರ್ಪಕವಾಗಿ ತನಿಖೆ ಮಾಡುತ್ತಿದ್ದಾರೆ. ಅದರಲ್ಲಿ ಲೋಪ ಇದೆ ಎಂದು ಕಂಡು ಬಂದರೆ ಅದು ಬೇರೆ ವಿಚಾರ. ಅವರು ತನಿಖೆ ಮಾಡಿ ವರದಿ ಕೊಡುವ ಮುನ್ನ ತನಿಖೆ ಸರಿ ಇಲ್ಲ ಎಂದು ಹೇಗೆ ಹೇಳುವುದಕ್ಕೆ ಸಾಧ್ಯವಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಾತನಾಡುವಾಗ ಏನಾದರೂ ಮಾನದಂಡ ಇರಬೇಕು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಎನ್ಐಎಗೆ ಕೊಡುವ ಅಗತ್ಯತೆ ಇಲ್ಲ. ವರದಿ ಬಂದ ನಂತರ ಪರ ವಿರೋಧ ಚರ್ಚೆ ಆಗುತ್ತದೆ. ಆ ನಂತರ ಸರ್ಕಾರದ ಹಂತದಲ್ಲಿ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ. ಯಾವ ಆಧಾರದ ಮೇಲೆ ಸರ್ಕಾರವನ್ನು ತಪ್ಪಿತಸ್ಥರು ಎಂದು ಹೇಳ್ತಾರೆ. ನಾವು ಎಲ್ಲಾ ರೀತಿಯ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಜಿ. ಪರಮೇಶ್ವರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಎಸ್‌ಐಟಿ ಮಾಡಿರುವುದೇ ಷಡ್ಯಂತ್ರ ಎಂದರೆ, ವಿಪರ್ಯಾಸ ಎಂದು ಹೇಳಬೇಕಾಗುತ್ತದೆ ಎಂದಿದ್ದು. ಒಳ ಮೀಸಲಾತಿ ಅಧಿಕೃತ ಆದೇಶ ವಿಚಾರವಾಗಿ ಇವತ್ತಿನಿಂದ ಒಳ ಮೀಸಲಾತಿ ಜಾರಿಯಾಗುತ್ತದೆ. 6%, 6%, 5% ಮೀಸಲಾತಿ ಆದೇಶ ಆಗಿದೆ. ಅದರ ಆದೇಶದಂತೆ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications