ಧರ್ಮಸ್ಥಳ ಕೇಸ್ ತನಿಖೆ ಬಳಿಕ ಎಲ್ಲರ ಹೆಸರು, ಫೋಟೋ ಆಚೆ ಬರುತ್ತೆ: ಡಿಕೆ ಶಿವಕುಮಾರ್
ಧರ್ಮಸ್ಥಳ ವಿಚಾರದಲ್ಲಿ ಸರಿತಪ್ಪುಗಳಿವೆಯೋ, ಷಡ್ಯಂತ್ರವಿದೆಯೋ ಎಂಬುದು ತನಿಖೆ ಮುಗಿದ ನಂತರ ತಿಳಿಯುತ್ತದೆ. ಧರ್ಮಸ್ಥಳದ ಬಗ್ಗೆ ಸುಳ್ಳು ಆಪಾದನೆ ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕಾಂಗ ಸಭೆಯಲ್ಲಿ ಸಿಎಂ ಅವರೇ ಭರವಸೆ ನೀಡಿದ್ದಾರೆ. ಷಡ್ಯಂತ್ರ ಮಾಡಿದವರ ಹೆಸರು, ಫೋಟೋ ಎಲ್ಲವೂ ತನಿಖೆ ಮುಗಿದ ನಂತರ ನೂರಕ್ಕೆ ನೂರರಷ್ಟು ಆಚೆ ಬರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸಭೆ ಕಲಾಪದ ವೇಳೆ ಹೇಳಿದ್ದಾರೆ.
ಜವಾಬ್ದಾರಿಯುತ ದಕ್ಷ ಹಿರಿಯ ಅಧಿಕಾರಿಗಳಿಗೆ ಇದರ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿ ಪ್ರತಿ ವರ್ಷ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಅವರಿಗೂ ಆ ಕ್ಷೇತ್ರದ ಮೇಲೆ ಅಪಾರ ನಂಬಿಕೆಯಿದೆ. ಧರ್ಮಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿದ್ದು ಯಾರಿಗೆ ಯಾವ ಕಾನೂನು ಬಳಸಬೇಕೋ ಅದನ್ನು ಮಾಡಲಾಗುತ್ತೆ. ಗೃಹಸಚಿವರು ಕೂಡ ಇದಕ್ಕೆ ಬದ್ಧವಾಗಿದ್ದಾರೆ. ಈ ವಿಚಾರದಲ್ಲಿ ಒಂದೆರಡು ದಿನ ಸುಮ್ಮನಿರಿ. ನೀವೆಲ್ಲರೂ ತಾಳ್ಮೆವಹಿಸಿ ಎಂದು ವಿಪಕ್ಷಗಳಿಗೆ ಕೋರಿದ್ದಾರೆ.

ತನಿಖೆ ಯಾವ ಕಾರಣಕ್ಕೆ ಪ್ರಾರಂಭವಾಗುತ್ತದೆ ಎಂಬುದು ಪ್ರತಿಪಕ್ಷಗಳಿಗೂ ತಿಳಿದಿದೆ. ವಿಪಕ್ಷದವರು ಮೊದಲೇ ಎಸ್‌ಐಟಿ ರಚನೆ ಬೇಡ ಎಂದು ಹೇಳಬೇಕಿತ್ತು. ಆದರೆ ಹದಿನೈದು ದಿನ ಕಳೆದ ನಂತರ ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಮೊದಲು ನೀವು ಮಾತನಾಡಲಿಲ್ಲ. ದಿನಬೆಳಗಾದರೆ ಮುಖ್ಯಮಂತ್ರಿಗಳ ಮೇಲೆ, ನನ್ನ ಮೇಲೆ ಯಾರೋ ಒಬ್ಬ ಆಪಾದನೆ ಮಾಡಿದ್ದಾರೆ. ಇದರಲ್ಲಿ ಷಡ್ಯಂತ್ರವೂ ಇರಬಹುದು. ಇದೆಲ್ಲವೂ ಆಚೆ ಬರಬೇಕು. ಅದಕ್ಕಾಗಿ ಗೃಹಸಚಿವರು ಕಾನೂನಿನಡಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಯಾವುದೇ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಗೃಹಸಚಿವರು ಹೇಳಿದ್ದಾರೆ. ವಿರೋಧ ಪಕ್ಷದಲ್ಲಿ ಇರುವ ನೀವುಗಳು ಸಹ ಅಧಿಕಾರದಲ್ಲಿದ್ದವರು. ತನಿಖೆ ವಿಚಾರವನ್ನು ಬಹಿರಂಗಪಡಿಸುವ ಮೊದಲು ಎಲ್ಲರೂ ತಾಳ್ಮೆಯಿಂದ ಇರಿ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದರಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.
ವ್ಯಕ್ತಿಯೊಬ್ಬ ತಲೆಬುರುಡೆ ಹಿಡಿದುಕೊಂಡು ನ್ಯಾಯಲಯದ ಮುಂದೆ ಹೇಳಿಕೆ ನೀಡಿದ ಮೇಲೆ ಇದನ್ನು ಇಡೀ ದೇಶ ನೋಡಿತು. ಜೊತೆಗೆ ಎಲ್ಲಾ ಮಾಧ್ಯಮಗಳು ಇದರ ಬಗ್ಗೆ ಗಮನ ಸೆಳೆಯಿತು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗುತ್ತದೆ. ಸೌಜನ್ಯ ಕೇಸ್‌ನಲ್ಲಿ ಯಾವುದೇ ತನಿಖೆ ನಡೆಯಲಿ ಎಂದು ವಿಪಕ್ಷಗಳು ಹೇಳಿದವು. ನಾವು ಅದನ್ನು ಗೌರವಿಸಿದೆವು. ಕೊನೆಗೆ ನ್ಯಾಯಾಲಯ ಹಾಗೂ ಸಿಬಿಐನವರು ಅಂತಿಮ ತೀರ್ಪು ನೀಡಿದಾಗ ಏನೂ ಇಲ್ಲ ಎಂದು ತಿಳಿಯಿತು ಎಂದು ಹೇಳಿದ್ದಾರೆ.












Click it and Unblock the Notifications