ವಾಯುಭಾರ ಕುಸಿತ: ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭರ್ಜರಿ ಮಳೆ ನಿರೀಕ್ಷೆ: IMD ಮುನ್ಸೂಚನೆ
ಬೆಂಗಳೂರು, ನವೆಂಬರ್ 26: ಕರ್ನಾಟಕದಲ್ಲಿ ಇನ್ನೇನು ಮಳೆ ಕಡಿಮೆ ಆಯಿತು, ಚಳಿ ಹೆಚ್ಚಾಗುತ್ತಿದೆ ಎನ್ನುವಷ್ಟರದಲ್ಲಿ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ಮಹತ್ವದ ಮುನ್ಸೂಚನೆ ನೀಡಿದೆ. ಮರೆಯಾಗಿದ್ದ ಮಳೆ ಧಾರಾಕಾರವಾಗಿ ಸುರಿಯಲು ಸಜ್ಜಾಗಿದೆ. ಸಮುದ್ರಮಟ್ಟದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ ಕೆಲವು ದಿವಸಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಎಚ್ಚರಿಕೆ ಇದೆ ಎಂದು ತಿಳಿಸಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಅದು ಮಂಗಳವಾರ ಬೆಳಗ್ಗೆ ಹೊತ್ತಿಗೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಂಗಳವಾರ ಬೆಳಗ್ಗೆಯ 6 ಗಂಟೆಗಳಲ್ಲಿ ಪ್ರತಿ ಗಂಟೆಗೆ 12 ಕಿಮೀ ವೇಗದಲ್ಲಿ ಕೇಂದ್ರ ಸ್ಥಾನದಿಂದ ವಾಯುವ್ಯ ದಿಕ್ಕಿನತ್ತ ಚಲಿಸಿದೆ. ವಿಶೇಷವೆಂದರೆ ಈ ವಾಯುಭಾರ ಕುಸಿತ ಚಲಿಸುವಾಗಲೇ ತೀವ್ರಗೊಂಡಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥರು ಮತ್ತು ವಿಜ್ಞಾನಿ ಡಾ.ಎನ್.ಪುವಿಯರಸನ್ ಮಾಹಿತಿ ನೀಡಿದ್ದಾರೆ.

ನ.27 ರಂದು ವಾಯುಭಾರ ಮತ್ತಷ್ಟು ತೀವ್ರ
ಇಂದಿನಿಂದ ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ತೀವ್ರಗೊಳ್ಳಲಿರುವ ಈ ವಾಯುಭಾರ ಕುಸಿತವು ನವೆಂಬರ್ 27 ರಂದು ಸಂಜೆ ಹೊತ್ತಿಗೆ ಸ್ಪಷ್ಟ ಚಂಡಮಾರುತ ಪರಿಚಲನೆ ಆಗಿ ಬದಲಾಗಲಿದೆ. ಆಗ ಗಾಳಿಯ ವೇಗವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಾರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಲ್ಲಿ ಡಿಸೆಂಬರ್ 4ರವರೆಗೆ ಭರ್ಜರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಜಿಲ್ಲೆಗಳಿಗೆ ಮಳೆ ಬರಲಿದೆ ಎಂಬ ಮಾಹಿತಿ ಇಲ್ಲಿದೆ.
ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಕೆಲವು ಪ್ರದೇಶಗಳಲ್ಲಿ ಮಬ್ಬು ವಾತಾವರಣ ಕಂಡು ಬಂದು ಚಳಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳ ಕಾಲ ಅಂದರೆ ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಜೊತೆಗೆ ಚಳಿ ಉಂಟಾಗಲಿದ್ದು, ತಾಪಮಾನ ಗರಿಷ್ಠ 28 ಮತ್ತು ಕನಿಷ್ಟ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ಡಿಸೆಂಬರ್ 4ರವರೆಗೆ ಭಾರೀ ಮಳೆ ಲಕ್ಷಣಗಳು
ನವೆಂಬರ್ 27ರಂದು ಚಂಡಮಾರುತ ಪರಿಚಲನೆಯಾಗಿ ಬದಲಾಗುವ ಇದೇ ವಾಯುಭಾರ ಕುಸಿತವು ನವೆಂಬರ್ 28ರಿಂದ ಡಿಸೆಂಬರ್ 4ರವರೆಗೆ ಭರ್ಜರಿ ಮಳೆ ಸುರಿಸುವ ಲಕ್ಷಣಗಳು ಇವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು ಇನ್ನಿತರ ಜಿಲ್ಲೆಗಳಿಗೆ ಸಾಧಾರಣೆ ಭಾರೀ ಮಳೆ ಆಗಬಹದು ಎನ್ನಲಾಗಿದೆ.
ಈ ವೇಳೆ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಅಲ್ಲಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ.
ವಿವಿಧ ರಾಜ್ಯಗಳಿಗೆ ಭಾರೀ ಮಳೆ, ಪ್ರವಾಹ ಭೀತಿ
ಇನ್ನೂ ಕರ್ನಾಟಕ ಮಾತ್ರವಲ್ಲದೇ ನೆರೆಯ ತಮಿಳುನಾಡು, ಆಂಧ್ರ ಕರಾವಳಿ, ಕೇರಳ ರಾಜ್ಯದ ವಿವಿಧ ಕಡೆಗಳಲ್ಲಿ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಮುಂದೆ ಬುಧವಾರ ಈ ಚಂಡಮಾರುತದ ಪ್ರಭಾವ ತೀವ್ರ ರೂಪದಲ್ಲಿ ಹೆಚ್ಚಾಗಲಿದೆ. ಶ್ರೀಲಂಕ ದೇಶ ಈ ಚಂಡಮಾರುತ ವೈಪರಿತ್ಯದಿಂದ ಅಕರಶಃ ನಲುಗುವ ನಿರೀಕ್ಷೆ ಇದೆ. ದಕ್ಷಿಣ ಭಾರತದ ಕರಾವಳಿ ರಾಜ್ಯಗಳು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಈ ವಾರ ಪೂರ್ತಿ ಮುಂದುವರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications