ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಕೇಸರಿ ಪಡೆ ಹೋರಾಟ ! ಯಡಿಯೂರಪ್ಪ ಎಚ್ಚರಿಕೆ ಏನು?
ಬೆಂಗಳೂರು, ಜುಲೈ 04: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದ ಗ್ಯಾರಂಟಿ ಯೋಜನೆಗಳನ್ನ ಮೊದಲ ಕ್ಯಾಬಿನೆಟ್ ನಲ್ಲಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿದ್ದು, ಸರ್ಕಾರ ರಚನೆಯ ಬಳಿಕ ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬವಾಗಿದ್ದು, ಸರ್ಕಾರದ ವಿರುದ್ದ ಕೇಸರಿ ಪಡೆಯ ಕಲಿಗಳು ಪ್ರತಿಭಟನೆ ನಡೆಸಿದ್ದಾರೆ.
ಜುಲೈ 3 ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿದ್ದು, ಸದನದ ಒಳಗು ಹಾಗೂ ಹೊರಗು ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಹೇಳಿದ್ದು, ಅದರಂತೆ. ಇಂದು( ಮಂಗಳವಾರ) ನಗರದ ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನೂ ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಮಾಜಿ ಸಚಿವರು , ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿ ಗಳ ಪೈಕಿ ಶಕ್ತಿ ಯೋಜನೆ ಮಾತ್ರ ಜಾರಿಗೊಂಡಿದೆ. ಇನ್ನು ಅನ್ನಭಾಗ್ಯ ಯೋಜನೆ ಕುರಿತು ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ವಾಕ್ಸಮರ ನಡೆದಿದ್ದು, ಅಕ್ಕಿ ಸಮಕರ್ಪಕವಾಗಪಿ ಸಿಗದ ಹಿನ್ನಲೆ ಅಕ್ಕಿ ಬದಲಾಗಿ ಫಲಾನುಭವಿಗಳಿಗೆ ಹಣ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಹೊರತಾಗಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಹತ್ತು ಕೆಜಿ ಅಕ್ಕಿಯ ಹಣ ಕೊಡಬೇಕು ಎಂಬುದು ಬಿಜೆಪಿ ಬೇಡಿಕೆ ಇಟ್ಟಿದ್ದು, ಪ್ರತಿಭಟನೆ ನಡೆಸುತ್ತಿದೆ.
ಇನ್ನು ಸದನದಲ್ಲೂ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ನಿರ್ಧಾರ ಮಾಡಿದೆ. ವಿಪಕ್ಷ ನಾಯಕ ಘೋಷಣೆ ಆಗದೆ ಇದ್ದರೂ ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಬಿಜೆಪಿ ಸಿದ್ದಗೊಳ್ಳುತ್ತಿದೆ. ಇಂದು ಪ್ರಶ್ನೋತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಕಲಾಪದಲ್ಲಿ ಗದ್ದಲವನ್ನ ಉಂಟುಮಾಡಿದ್ದು, ಕುಮಾರಸ್ವಾಮಿ ಆರೋಪ ಮಾಡಿರುವ ಭ್ರಷ್ಟಾಚಾರದ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು.
ಇನ್ನೂ ಪ್ರತಿಭಟನೆ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಷರತ್ತಿಲ್ಲದೇ ಜಾರಿ ಮಾಡಬೇಕು. ಮಹಿಳಾ ಸಂಘಗಳ ಸಾಲ ಮನ್ನಾ ಮಾಡಬೇಕು. ಮತಾಂತರ ತಡೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬಾರದೆಂದು ಆಗ್ರಹ ಮಾಡುತ್ತೇವೆ. ಕಾಂಗ್ರೆಸ್ ನವರು ಕೊಟ್ಟ ಐದು ಭರವಸೆಗಳನ್ನು ಷರತ್ತಿಲ್ಲದೇ ಕಾರ್ಯರೂಪಕ್ಕೆ ತರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸಹಿ ಮಾಡಿಕೊಟ್ಟ ಗ್ಯಾರಂಟಿ ಜಾರಿ ಮಾಡಲಿ, ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದು ಸರ್ಕಾರವನ್ನ ಎಚ್ಚರಿಸಿದರು.












Click it and Unblock the Notifications