ರಾಜಕೀಯ ಪಕ್ಷಗಳ ವಿರುದ್ಧವೂ ಮಾನಹಾನಿ ಕೇಸ್ ಹೂಡಬಹುದು
ಬೆಂಗಳೂರು, ಫೆಬ್ರವರಿ 25: ರಾಜಕೀಯ ಪಕ್ಷಗಳ ವಿರುದ್ಧವೂ ಮಾನಹಾನಿ ಪ್ರಕರಣ ದಾಖಲಿಸಬಹುದು ಎಂದು ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಬಿಜೆಪಿ ವಿರುದ್ಧ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಹೂಡಿದ್ದ ಮಾನಹಾನಿ ಕೇಸ್ ರದ್ದುಗೊಳಿಸಲು ನಿರಾಕರಿಸಿದೆ.
ಬಿಜೆಪಿ ವಿರುದ್ಧ ರಿಜ್ವಾನ್ ಅರ್ಷದ್ ಹೂಡಿರುವ ಮಾನನಷ್ಟ ಮೊಕದ್ದಮೆ ಮುಂದುವರಿಯಲಿದ್ದು, ಈ ಕಾನೂನು ಹೋರಾಟದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. 2019ರಲ್ಲಿ ರಿಜ್ವಾನ್ ಅರ್ಷದ್ ಬಿಜೆಪಿ ವಿರುದ್ಧ ಹೂಡಿದ್ದ ಮಾನಹಾನಿ ಪ್ರಕರಣ ರದ್ದು ಕೋರಿ ಬಿಜೆಪಿ ರಾಜ್ಯ ಘಟಕ ಹಾಗೂ ಅದರ ಹಿಂದಿನ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

"ನಮ್ಮ ದೇಶದಲ್ಲಿರುವಂತಹ ಸಕ್ರಿಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಅಗತ್ಯವಿದೆ. ಆದ್ದರಿಂದ ಮಾನಹಾನಿ ಅಪರಾಧ ಅಷ್ಟೊಂದು ಕಠಿಣವಲ್ಲ ಎನ್ನುವ ಕಾರಣಕ್ಕೆ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, "ಅಪರಾಧ ದಂಡ ಸಂಹಿತೆ ಸೆಕ್ಷನ್ 499 ಹಾಗೂ 500 ರ ಅನ್ವಯ ಅರ್ಜಿದಾರರಂತಹ ವ್ಯಕ್ತಿಗಳ ಒಕ್ಕೂಟವನ್ನು ಇಂತಹ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಪಕ್ಷಗಾರರನ್ನಾಗಿ ಮಾಡಬಹುದು" ಎಂದು ಆದೇಶ ನೀಡಿದೆ. ಇದು ರಾಜ್ಯ ಬಿಜೆಪಿ ಘಟಕಕ್ಕೆ ತೀವ್ರ ಹಿನ್ನಡೆಯಾಗಿದೆ.
ಈ ಸಂಬಂಧ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವಿಶೇಷ ನ್ಯಾಯಾಲಯದ ಮುಂದೆ ಇರುವ ಮಾನಹಾನಿ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ. ಬಿಜೆಪಿ ಪರ ವಕೀಲರು, ಅಪರಾಧ ದಂಡ ಸಂಹಿತೆ ಸೆಕ್ಷನ್ 499 ಹಾಗೂ 500 ರ ಅನ್ವಯ ಪಕ್ಷವನ್ನು ವ್ಯಕ್ತಿ ಎಂದು ಪರಿಗಿಸಲಾಗದು ಎಂದು ಹೇಳಿದ್ದರು.
ಆದರೆ ರಿಜ್ವಾನ್ ಅರ್ಷದ್ ಪರ ವಕೀಲರು, ಐಪಿಸಿ ಸೆಕ್ಷನ್ 11ರಲ್ಲಿ ವ್ಯಕ್ತಿ ಎಂಬುದನ್ನು ವ್ಯಾಖ್ಯಾನಿಸಿರುವಂತೆ, ಹಲವು ವ್ಯಕ್ತಿಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಅದು ನೋಂದಾಯಿಸಿರಬಹುದು ಅಥವಾ ಇಲ್ಲವೇ ಇರಬಹುದು. ಆದರೂ ಸರಕಾರಗಳು, ಕಂಪನಿಗಳು, ಟ್ರೇಡ್ ಯುನಿಯನ್‌ಗಳು ಸೇರಿ ಎಲ್ಲಾ ವ್ಯಕ್ತಿಗಳಿಗೂ ತಮ್ಮದೇ ಆದ ಗೌರವವಿದೆ. ಹಾಗಾಗಿ ಈ ಪ್ರಕರಣದಲ್ಲಿ ಮೂಲ ದೂರುದಾರರ ಘನತೆಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾನಹಾನಿ ಹೂಡಲಾಗಿದ್ದು. ಅದರ ವಿರುದ್ಧ ವಿಶೇಷ ನ್ಯಾಯಾಲಯ ಕ್ರಮ ಜರುಗಿಸುತ್ತಿರುವುದು ಸರಿಯಾಗಿದೆ ಎಂದು ಹೇಳಿದ್ದರು.
ಪ್ರಕರಣದ ಹಿನ್ನೆಲೆ: 2019ರಲ್ಲಿ ಬಿಜೆಪಿ ಆಗ ವಿಧಾನಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಹಲವು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂದು, ಚುನಾವಣಾ ಗುರುತಿನ ಚೀಟಿಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ತನ್ನ ಸಾಮಾಜಿಕ ಜಾಲತಾಣಗಳಲ್ಲಿಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಿಜ್ವಾನ್ ಅರ್ಷದ್, ಬಿಜೆಪಿ ಪೋಸ್ಟ್‌ಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗಿದೆ ಎಂದು ಬಿಜೆಪಿ ಮತ್ತು ಬಾಲಾಜಿ ಅಶ್ವಿನ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ಪಕ್ಷ ಹಾಗೂ ಅದರ ಅಧ್ಯಕ್ಷರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅದನ್ನು ಬಿಜೆಪಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿತ್ತು.












Click it and Unblock the Notifications