MM Hills: ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ!
ಚಾಮರಾಜನಗರ ನವೆಂಬರ್ 2: ನಾಡಿನ ಪುಣ್ಯಕ್ಷೇತ್ರಗಳಲ್ಲಿ ದೀಪಾವಳಿಯ ಪೂಜೆ, ಉತ್ಸವ, ಜಾತ್ರೆ ಇತರೆ ಧಾರ್ಮಿಕ ಕಾರ್ಯಗಳು ಅತ್ಯಂತ ಸಡಗರದಿಂದ ನಡೆಯುತ್ತಿವೆ. ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲೂ ಇಂದು ವಿಜೃಂಭಣೆಯಿಂದ ದೀಪಾವಳಿ ರಥೋತ್ಸವ ಜರುಗಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶನಿವಾರ ಬೆಳಗ್ಗೆ 7.15 ರಿಂದ 9ರ ವರೆಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಸಾಲೂರು ಮಠದ ಶ್ರೀ, ಪ್ರಾಧಿಕಾರದ ಕಾರ್ಯದರ್ಶಿ ರಘು, ಶಾಸಕ ಎಂ.ಆರ್. ಮಂಜುನಾಥ್ ಭಾಗವಹಿಸಿದ್ದರು. ಈ ಬಾರಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿದೆ. ತಮಿಳುನಾಡಿನಿಂದಲೂ ಭಕ್ತಸಮೂಹ ಅತ್ಯುತ್ಸಾಹದಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ.

ಪಾದಯಾತ್ರೆ, ವಿಶೇಷ ಬಸ್ ಗಳ ಮೂಲಕ ಇಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು. ರಥೋತ್ಸವಕ್ಕಂತಲೇ 3.5 ಲಕ್ಷಕ್ಕೂ ಅಧಿಕ ಲಾಡುಗಳನ್ನು ತಯಾರಿಸಿಡಲಾಗಿತ್ತು. ಭಕ್ತರು ಇಂದು ಮಾದಪ್ಪನ ದರ್ಶನ ಪಡೆದು ಸಂತೋಷಗೊಂಡರು.
ಮಲೆ ಮಹದೇಶ್ವರ ಬೆಟ್ಟ
ಮಲೆ ಮಹದೇಶ್ವರ ಬೆಟ್ಟಗಳು ದಟ್ಟವಾದ ಕಾಡಿನಿಂದ ಆವೃತವಾಗಿವೆ. ಈ ಪ್ರಾಚೀನ ಮತ್ತು ಪವಿತ್ರ ದೇವಾಲಯ ಅತ್ಯಂತ ಜನಪ್ರಿಯ ಶೈವ ಯಾತ್ರಾ ಕೇಂದ್ರವಾಗಿದೆ. ಮೈಸೂರಿನಿಂದ 135 ಕಿ.ಮೀ ದೂರದಲ್ಲಿದೆ. ಹೊಗೆನಕಲ್‌ನಿಂದ 89 ಕಿ.ಮೀ, ಕೊಳ್ಳೆಗಾಲದಿಂದ 72 ಕಿ.ಮೀ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟವನ್ನು ಎಂಎಂ ಹಿಲ್ಸ್ ಎಂದೂ ಕರೆಯುವುದುಂಟು.
ಇದು ಪೂರ್ವ ಘಟ್ಟದ 77 ಬೆಟ್ಟಗಳಿಂದ ಆವೃತವಾಗಿದ್ದು 7 ಬೆಟ್ಟಗಳ ನಡುವೆ ಇದೆ. ಈ ದೇವಾಲಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಯಾತ್ರಿಕರನ್ನು ಸೆಳೆಯುತ್ತದೆ. ಜಾತ್ರೆ ಹಾಗೂ ರಥೋತ್ಸವ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಮಾದಪ್ಪನ ದರ್ಶನ ಪಡೆದು ತೆರಳುತ್ತಾರೆ. ಪ್ರತೀ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಭವ್ಯ ಸಂಭ್ರಮವನ್ನು ಕಾಣಬಹುದು.

ಕಾವೇರಿ ಮತ್ತು ಪಾಲಾರ್ ನದಿಗಳಿಂದ ಆವೃತವಾದ ದಟ್ಟದ ಕಾಡಿನಲ್ಲಿ ಈ ಸ್ಥಳವಿದ್ದು ಸುಂದರವಾದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಕಾಡಿನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳು ಮತ್ತು ಸರೀಸೃಪಗಳು ವಾಸಿಸುತ್ತವೆ. ಅಲ್ಲದೆ ಎಂಎಂ ಹಿಲ್ಸ್ ಚಾರಣಕ್ಕೂ ಪ್ರಮುಖ ಸ್ಥಳವಾಗಿದೆ.
ಅವುಗಳೆಂದರೆ ಒಂದು ನಾಗಮಲೆ ಇನ್ನೊಂದು ಪಾಲಾರ್. ನಾಗಮಲೆಯಲ್ಲಿ ಶಿವನಿಗೆ ಅರ್ಪಿತವಾದ ದೇವಾಲಯವಿದ್ದು ಚಾರಣ ಮಾಡುವವರು ಬೆಟ್ಟದ ತುದಿಯಲ್ಲಿರುವ ಶಿವನ ದೇವಸ್ಥಾನಕ್ಕೆ ತೆರಳು ಪೂಜೆ ಸಲ್ಲಿಸುತ್ತಾರೆ. ನಾಗಮಲೆ ಎಂಎಂ ಹಿಲ್ಸ್‌ನಿಂದ ಏಳು ಕಿಮೀ ದೂರದಲ್ಲಿದೆ. ಇನ್ನೂ ಪಾಲಾರ್ ನಾಗಮಲೆಯಿಂದ ಎಂಟು ಕಿ.ಮೀ ಚಾರಣವಾಗಿದೆ. ಇಲ್ಲಿ ವಿಶ್ರಾಂತಿ ಮನೆಯಲ್ಲಿ ರಾತ್ರಿಯ ತಂಗುವಿಕೆಯೊಂದಿಗೆ ಎರಡು ದಿನಗಳ ಚಾರಣ ಮಾಡಲಾಗುತ್ತದೆ. ಚಾರಣದುದ್ದಕ್ಕೂ ಸುಂದರ ಅನುಭವ ಈ ಸ್ಥಳ ನೀಡುತ್ತದೆ.
ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಎಂಎಂ ಹಿಲ್ಸ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಈ ದೇವಾಲಯದ ಮುಖ್ಯ ಹಬ್ಬ ಮಹಾಶಿವರಾತ್ರಿಯಾಗಿದೆ. ದೀಪಾವಳಿ ಹಬ್ಬದಲ್ಲಿ ಎಂಎಂ ಹಿಲ್ಸ್‌ನಲ್ಲಿ ಭವ್ಯ ಆಚರಣೆಯನ್ನು ಜನ ಸಾಗರೋಪಾದಿಯಲ್ಲಿ ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.












Click it and Unblock the Notifications