ದೀಪಾವಳಿ; ಮುಜರಾಯಿ ದೇವಾಲಯದಲ್ಲಿ ನ.14ರಂದು ಗೋ ಪೂಜೆ
ಬೆಂಗಳೂರು, ನವೆಂಬರ್ 13; ದೀಪಾವಳಿ ಹಬ್ಬ 2023ರ ಅಂಗವಾಗಿ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಗೋ ಪೂಜೆ ನಡೆಸಲಾಗುತ್ತದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 14ರ ಮಂಗಳವಾರ ಗೋ ಪೂಜೆ ನಡೆಯಲಿದೆ.
ನವೆಂಬರ್ 14ರ ಮಂಗಳವಾರ ಸಂಜೆ 5.30 ರಿಂದ 6.30ರ ಗೋಧೂಳಿ ಲಗ್ನದಲ್ಲಿ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋ ಪೂಜೆ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಗೋವುಗಳನ್ನು ಪೂಜಿಸುವ ಸಲುವಾಗಿ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತರಬೇಕು. ನಂತರ ಅರಿಶಿಣ, ಕುಂಕುಮ ಹಚ್ಚಿ, ಹೂಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ನೀಡುವ ಮೂಲಕ ಗೋ ಪೂಜೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ದೇವಾಲಯಗಳಲ್ಲಿ ಗೋ ಪೂಜೆ; ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಸಂರಕ್ಷಣೆಯ ಬಗ್ಗೆ ಜಾಗೃತಿ ಉದ್ದೇಶದಿಂದ ಮಾನ್ಯ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ದೇವಾಲಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನದಂದು ಗೋಧೂಳಿ ಲಗ್ನದಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿ ಗೋ ಪೂಜೆ ಆಯೋಜಿಸಲಾಗುತ್ತಿದೆ.
ಈ ಗೋ ಪೂಜೆ ಕುರಿತು ಭಕ್ತಾದಿಗಳಿಗೆ ಮಾಹಿತ ನೀಡುವ ಉದ್ದೇಶದಿಂದ ದೇವಾಲಯದ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗೋ ಪೂಜೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಬೇಕು ಎಂದು ದೇವಾಲಯದ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಾತೃ ಸ್ಥಾನವನ್ನು ಕೊಡಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಗೋ ಪೂಜೆ ಅತ್ಯಂತ ಪ್ರಮುಖವಾದ ಪೂಜೆಗಳಲ್ಲೊಂದು. ದೀಪಾವಳಿ ಹಬ್ಬದಲ್ಲಿ ಗೋಪೂಜೆಗೆ ವಿಶೇಷ ಪ್ರಾಧಾನ್ಯತೆ ಇದೆ.
ಗೋ ಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ. ಗೋ ಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಗೋ ಪೂಜೆ ಮಾಡಲು ನಿಯಮಗಳು ಸಹ ಇವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಪೂಜೆ ಮಾಡಲು ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರ ದಸರಾ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸಬೇಕು ಎಂದು ಆದೇಶಿಸಿತ್ತು.
ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ ಆರಾಧಿಸುವುದು ಪೂಜಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿರುತ್ತದೆ ಎಂದು ಹೇಳಿತ್ತು.
ದಿನಾಂಕ 19/10/2023ರ ಗುರುವಾರ ಲಲಿತಾ ಪಂಚಮಿ ವಿಶೇಷ ದಿನವಾಗಿರುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಉತ್ತಮ ರೀತಿಯಲ್ಲಿ ಮಳೆಯಾಗಿ, ಸಮೃದ್ಧವಾಗಿ ಬೆಳೆಗಳು ಬರಲೆಂದು ಹಾಗೂ ಸಸ್ಯರಾಶಿಗಳು ಸಮೃದ್ಧಿಯಾಗಿ ಸಕಲರಿಗೂ ಒಳಿತಾಗಲಿ ಎಂದು ಸಂಕಲ್ಪಿಸಿ ಪ್ರಾರ್ಥಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.












Click it and Unblock the Notifications