ವನ್ಯಜೀವಿಗಳ ಸಾವಿಗೆ ವಿದ್ಯುತ್ ತಂತಿ ಬೇಲಿಗಳು ಕಾರಣ ಎಂದಿತು ಸರ್ಕಾರ
ಬೆಂಗಳೂರು, ಜುಲೈ 20: ರಾಜ್ಯದಲ್ಲಿ ಆನೆಗಳೂ ಸೇರಿ ವನ್ಯಜೀವಿಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪುತ್ತಿರುವ ಸಂಬಂಧ ತಮ್ಮ ಆಕ್ಷೇಪಣಗಳನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ಎಸ್ಕಾಂಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಮಧ್ಯೆ, ವನ್ಯಜೀವಿಗಳ ಸಾವಿಗೆ ವಿದ್ಯುತ್ ತಂತಿಬೇಲಿಗಳೇ ಕಾರಣ ಎಂದು ಸರ್ಕಾರವೇ ಹೇಳಿದೆ.
ಅಶ್ವಸ್ಥಾಮ ಆನೆ ಸಾವಿನ ಸಂಬಂಧ ಪತ್ರಿಕೆಗಳ ವರದಿಯನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ, ಎಲ್ಲ ಎಸ್ಕಾಂಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿತು.

ವನ್ಯಜೀವಿಗಳಿಗೆ ಹಾನಿ: ಸರ್ಕಾರದ ಪರ ವಕೀಲರು, ವನ್ಯಜೀವಿಗಳ ಸಾವಿಗೆ ಸಂಬಂಧಿಸಿದಂತೆ ವನ್ಯಜೀವಿ ಧಾಮಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಮುಖ್ಯ ಕಾರಣವಾಗಿದೆ. ಈ ವಿದ್ಯುತ್ ತಂತಿಗಳನ್ನು ನಿಗದಿತವಾಗಿ ನಿರ್ವಹಣೆ ಮಾಡದಿರುವುದು ಹಾಗೂ ಅರಣ್ಯದಂಚಿನ ಕೃಷಿ ಭೂಮಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಳ್ಳಲಾಗುತ್ತಿದೆ. ನಿಗದಿತ ಎತ್ತರಕ್ಕಿಂತಲೂ ಕಡಿಮೆ ಎತ್ತರದಲ್ಲಿ ತಂತಿಗಳನ್ನು ಅಳವಡಿಸಲಾಗಿದೆ. ಇದರಿಂದ ವನ್ಯಜೀವಿಗಳ ಜೀವಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದರು.
ಅಲ್ಲದೆ, ಅರಣ್ಯ ಇಲಾಖೆಯಿಂದ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವು ಬಾರಿ ಪತ್ರಗಳನ್ನು ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜತೆಗೆ, ನಿರ್ವಹಣೆ ಮಾಡುವುದಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
"ಆನೆಗಳನ್ನು ಅರಣ್ಯದಿಂದ ಹೊರ ಬರದಂತೆ ನಿಯಂತ್ರಿಸಲು ಹಳೆಯ ರೈಲ್ವೆ ಕಂಬಿಗಳ ಮೂಲಕ 332.62 ಕಿಲೋಮೀಟರ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇದಕ್ಕಾಗಿ ಪ್ರತಿ ಒಂದು ಕಿಲೋ ಮೀಟರ್‌ಗೆ ಸುಮಾರು 1.6 ಕೋಟಿಯವರೆಗೂ ವೆಚ್ಚವಾಗುತ್ತಿದೆ. ಜತೆಗೆ, 3,426 ಕಿಲೋಮೀಟರ್ ಉದ್ದ ಸೋಲಾರ ಫೆನ್ಸಿಂಗ್ ಹಾಕಲಾಗಿದೆ. ಎರಡು ರೀತಿಯಲ್ಲಿ ಸೋಲಾರ್ ಫೆನ್ಸ್ ಅಳವಡಿಸಲಾಗಿದೆ, ಇದರಲ್ಲಿ 9 ವೋಲ್ಟ್ ವಿದ್ಯುತ್ ಇರಲಿದೆ. ಅದರಿಂದ ಪ್ರಾಣಿಗಳಿಗೆ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ" ಎಂದು ವಿವರಿಸಿದರು.
ಆನೆಗಳು ನಾಡಿಗೆ ಬರದಂತೆ ಹಾಗೂ ಮಾನವ ಆನೆ ಸಂಘರ್ಷ ತಡೆಯಲು ಕೊಡಗು, ಹಾಸನ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ, ಬಂಡೀಪುರ ಮತ್ತು ಬನ್ನೇರುಘಟ್ಟ 8 ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ವನ್ಯಜೀವಿ ಕಳ್ಳಬೇಟೆ ತಡೆ ಶಿಬಿರಗಳನ್ನು ಪ್ರಾರಂಭಿಸಲಾಗಿದ್ದು ಇದಕ್ಕಾಗಿ 1,922 ಸಿಬ್ಬಂದಿಯನ್ನು ನೇಮಕ ಮಾಡಿ ನಿಗಾ ವಹಿಸಲಾಗುತ್ತಿದೆ. ಶೀಘ್ರ ಪ್ರತಿಕ್ರಿಯೆ ತಡೆ, ಶಾಶ್ವತವಾಗಿರಲಿದೆ ಎಂದು ವಿವರಿಸಿದರು.
ಆನೆಗಳ ವರ್ತನೆ ಮತ್ತು ಅವುಗಳ ಚಲನವಲನಗಳ ಮೇಲೆ ನಿಗಾ ವಹಿಸಲು ರೇಡಿಯೋ ಕಾಲರ್‌ಗಳನ್ನು ಅಳವಡಿಸಿದ್ದು, ಆನೆ ಮಾನವ ಸಂಘರ್ಷ ತಡೆಯಲು ಗಸ್ತು ತಿರುಗುವುದಕ್ಕಾಗಿ 2,730 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆನೆಗಳು ಬರುವ ಗ್ರಾಮೀಣ ಭಾಗಗಳವರಿಗೆ ಮಾಹಿತಿ ನೀಡಲು ಗಸ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಈ ಸಂಬಂಧ ಕಾಲ ಕಾಲಕ್ಕೆ ಗ್ರಾಮಸ್ಥರಿಗೆ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಅಲ್ಲದೆ, ವನ್ಯಜೀವಿಗಳಿಗಾಗಿ ಆವಾಸಸ್ಥಾನಗಳನ್ನು ಅಭಿವೃದಿ ಮಾಡಲು ಹುಲ್ಲುಗಾವಲುಗಳು, ಬಿದರು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕ ಅಧಿಕಾರಿಗಳೊಂದಿಗೆ ಅಂತಾರರಾಜ್ಯ ಸಮಿತಿ ರಚನೆ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಸೋಲಾರ್ ವಿದ್ಯುತ್ ತಡೆಗೋಡೆಗೆ ನಿರ್ಬಂಧ: ಪ್ರಕರಣದಲ್ಲಿ ಅಮೈಕಾಸ್ ಕ್ಯೂರಿ (ನ್ಯಾಯಾಲಯಕ್ಕೆ ನೆರವು ನೀಡುವ ವಕೀಲರು) ರಮೇಶ್ ಪುತ್ತಿಗೆ, ದೇಶದಲ್ಲಿ 2023ರಲ್ಲಿ ನಡೆದ ಆನೆ ಗಣತಿಯಂತೆ 72 ಸಾವಿರ ಆನೆಗಳಿದ್ದು, ಅದರಲ್ಲಿ ಕರ್ನಾಟಕದಲ್ಲಿ 7000(ಶೇ.25) ಆನೆಗಳಿವೆ. ಆನೆ ಸಂತತಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಗಂಡಾನೆ ಮತ್ತು ಹೆಣ್ಣಾನೆಯಲ್ಲಿ ಸರಾಸರಿ ಸಮಾನವಾಗಿದೆ.
ಆದರೆ, ವಯಸ್ಕ ಆನೆಗಳಲ್ಲಿ ಸರಾಸರಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಡಾನೆಗಳಿಗಿಂತಲೂ ಹೆಣ್ಣಾನೆಗಳ ಪ್ರಮಾಣ ಶೇ.50 ರಷ್ಟು ಕಡಿಮೆಯಿದೆ. ಗಂಡಾನೆಗಳನ್ನು ಕಳ್ಳತನಕ್ಕೆ ಬಳಕೆ ಮಾಡಲಾಗುತ್ತಿದ್ದು, ಅವುಗಳನ್ನು ಕೊಲೆ ಮಾಡಿ ದಂತ ಮತ್ತು ಮೂಳೆಗಳನ್ನು ಅಕ್ರಮ ವ್ಯಾಪಾರಕ್ಕೆ ಬಳಕೆ ಮಾಡಲಾಗತ್ತಿದೆ ಎಂದು ವಿವರಿಸಿದರು
ಅಶ್ವತ್ಥಾಮ ಆನೆ ಅನಾರೋಗ್ಯದಿಂದ ಸಾವಾಗಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸೋಲಾರ್ ವಿದ್ಯುತ್ ತಂತಿ ತಗುಲಿ ಎಂದು ತಿಳಿದು ಬಂದಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಪ್ರಸ್ತಾಪಿಸಿದ ಅವರು ಸುಪ್ರೀಂಕೋರ್ಟ್ ಆದೇಶದಂತೆ ಸೋಲಾರ್ ವಿದ್ಯುತ್ ತಡೆಗೋಡೆಯನ್ನು ಹಾಕವುದನ್ನು ನಿರ್ಬಂಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.












Click it and Unblock the Notifications