DK Shivakumar: ಎಚ್ ಡಿ ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ: ಡಿ.ಕೆ. ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಅಕ್ಟೋಬರ್ 25: ರಾಮನಗರ ಬೆಂಗಳೂರಿನ ಭಾಗ. ನಂತರ ಅದು ಗ್ರಾಮಾಂತರ ಆಗಿ ಈಗ ಪ್ರತ್ಯೇಕ ಜಿಲ್ಲೆ ಆಗಿದೆ. ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರ ಬೆಂಗಳೂರಿಗೆ ಸೇರಿದ್ದು ಎಂಬ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಅವರ ಟೀಕೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿ, ದೇಶದಲ್ಲಿ ವಿದ್ಯಾವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದವರು ಅವರಿಗೆ ಸಾಮಾನ್ಯ ಪರಿಜ್ಞಾನ ಇದೆ ಎಂದು ಭಾವಿಸಿದ್ದೆ. ಆದರೆ ಅವರಿಗೆ ಇಲ್ಲ. ಇಂತಹ ವಿಚಾರವಾಗಿ ಅವರ ತಂದೆ ಅವರನ್ನಾದರೂ ಅವರು ಕೇಳಿ ಟ್ವೀಟ್ ಮಾಡಬೇಕಿತ್ತು.

ಹಿರಿಯರಾದ ದೇವೇಗೌಡರಿಗೆ ರಾಮನಗರದಲ್ಲಿ ಇರುವವರು ಯಾರು? ರಾಮನಗರ ಜಿಲ್ಲೆ ಇತಿಹಾಸವೇನು? ಗೊತ್ತಿದೆ. ಕುಮಾರಸ್ವಾಮಿ ಮಾತಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ನಮ್ಮ ಬಳಿ ನೀಲನಕ್ಷೆ ಇದೆ. ಅಧಿಕಾರದಲ್ಲಿ ಇದ್ದಾಗ ನಾನು ಹಾಗೂ ನಮ್ಮ ಸರ್ಕಾರ ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ.
ರಾಮನಗರ ಜಿಲ್ಲೆ ಮಾಡಿದೆ, ಮೂರು ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಮನಗರದ ನಾಲ್ಕೈದು ತಾಲೂಕು ಬೆಂಗಳೂರಿನದ್ದು. ಈ ಬಗ್ಗೆ ಕುಮಾರಸ್ವಾಮಿ ದಾಖಲೆ ತೆಗೆಸಿ ನೋಡಲಿ. ಬಾಲಗಂಗಧರನಾಥ ಸ್ವಾಮೀಜಿ ಹಾಗೂ ಶಿವಕುಮಾರ ಸ್ವಾಮೀಜಿಗಳು ರಾಮನಗರ ಜಿಲ್ಲೆಯವರು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಅವರು ರಾಮನಗರ ಜಿಲ್ಲೆಯವರು.ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ನಂತರ ಇದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಆಯಿತು.
ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕೋವಿಡ್ ನಂತರ ಅನೇಕರು ತಮ್ಮ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ರಾಮನಗರ, ಮಾಗಡಿ, ಚನ್ನಪಟ್ಟಣದ ಜನರಿಗೂ ನಾನು ಆಸ್ತಿ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡುತ್ತೇನೆ. ನಾನು ಮೊದಲು ಸಾತನೂರಿನಲ್ಲಿದ್ದೆ. ಕನಕಪುರಕ್ಕೆ ಬಂದ ನಂತರ ಇಲ್ಲಿನ ಭೂಮಿಯ ಮೌಲ್ಯ ಎಷ್ಟು ಏರಿಕೆಯಾಗಿದೆ, ಏನು ಬದಲಾವಣೆ ಆಗಿದೆ ಎಂದು ನಮಗೆ ಗೊತ್ತಿದೆ.

ನಿಮಗೆ ಇತಿಹಾಸ ಎಷ್ಟು ಗೊತ್ತಿದೆಯೊ ನನಗೆ ತಿಳಿದಿಲ್ಲ. ಕನಕಪುರ ಲೋಕಸಭಾ ಕ್ಷೇತ್ರ ಎಂದು ಆ ಕಾಲದಲ್ಲಿ ಯಾಕೆ ಇಟ್ಟರು? ಈಗ ಏಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂದು ಚುನಾವಣಾ ಆಯೋಗದವರು ಹೆಸರು ಏಕೆ ಇಟ್ಟಿದ್ದಾರೆ? ಯಾವುದಾದರೂ ಬೇರೆ ಹೆಸರು ಇಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹೊಸಕೋಟೆ, ದೇವನಹಳ್ಳಿ, ಮಾಗಡಿ, ಆನೇಕಲ್, ಚನ್ನಪಟ್ಟಣ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ ಇದೆಲ್ಲಾ ಬೆಂಗಳೂರು ಜಿಲ್ಲೆ. ಈ ಊರನ್ನು ಕಟ್ಟಿದ್ದು, ಹೆಸರನ್ನು ಕೊಟ್ಟಿದ್ದು ಕೆಂಪೇಗೌಡರು. ವಿಧಾನಸೌಧ ಕಟ್ಟಿದ್ದು ಕೆಂಗಲ ಹನುಮಂತಯ್ಯ ಅವರು. ಈ ಹೆಸರನ್ನು ಉಳಿಸಬೇಕೆಂಬುದು ನಮ್ಮ ಭಾವನೆ. ಕುಮಾರಸ್ವಾಮಿ ಅವರು ಈ ಭಾಗಕ್ಕೆ ಬರಲಿಲ್ಲವೇ? ಆಸ್ತಿ ತೆಗದುಕೊಂಡಿಲ್ಲವೇ? ನಾವು ಯಾವತ್ತಾದರೂ ತಕರಾರು ಮಾಡಿದ್ದೇವೆಯೇ?
ವಿದ್ಯಾ ಕ್ಷೇತ್ರಕ್ಕೆ ನಾವು ಎಷ್ಟು ನಮ್ಮ ಆಸ್ತಿಯನ್ನು ದಾನ ಮಾಡಿದ್ದೇವೆ ಎನ್ನುವುದು ಏನಾದರೂ ನಿಮಗೆ ಗೊತ್ತಿದೆಯೇ? ನನ್ನ ಜನರು 1,23,000 ಅಂತರದಿಂದ ಗೆಲ್ಲಿಸಿದ್ದಾರೆ ಎಂಬುದು ಗೊತ್ತಿದೆಯೇ? ನನ್ನ ಖಾತೆಗೆ, ಬೇರೆಯವರ ಖಾತೆಗೆ ಏನು ಬರುತ್ತದೆ ಎನ್ನುವ ಬಗ್ಗೆ ಆನಂತರ ಮಾಹಿತಿ ನೀಡೋಣ.
ಯಾವ, ಯಾವ ತಾಲ್ಲೂಕಿನಲ್ಲಿ ಏನೇನು ನಡೆದಿದೆ ಎಂಬುದು ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಇಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಚರ್ಚೆಯಾಗುವುದು ಬೇಡ, ಅಲ್ಲಿ ದಾಖಲಾಗಲಿ. ನೀವು ಸಿದ್ಧತೆ ಮಾಡಿಕೊಂಡು ಬನ್ನಿ, ನಾನು ಸಹ ಸಿದ್ಧತೆ ಮಾಡಿಕೊಂಡು ಬರುತ್ತೇನೆ. ನೀವು ಏನೇನು ಹೇಳಬೇಕೊ ಎಲ್ಲಾ ಹೇಳಿ, ಅದೆಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆ ನಡೆಯಲಿ. ಇದು ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರದ ಸ್ವಾಭಿಮಾನಿಗಳ ಬದುಕಿನ ವಿಚಾರ. ನಾನು ಆ ಕ್ಷೇತ್ರವನ್ನು ಪ್ರತಿನಿಧಿಸುವವನು, ಆ ಕ್ಷೇತ್ರದ ಜನರ ಶ್ರೇಯಸ್ಸನ್ನು ಬಯಸುವುದು ನನ್ನ ಕರ್ತವ್ಯ.
ನಾನು ಹೇಳಿದ ಈ ಭಾಗಗಳು ಬೆಂಗಳೂರಲ್ಲವೇ? ಗೆಜೆಟಿಯರ್ ತೆಗೆದು ತೋರಿಸಲೆ? ಇತಿಹಾಸದ ಅರಿವಿಲ್ಲವೇ? ನನ್ನ ಮಾತಿನ ಅರ್ಥ ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇನೆ ಎಂದರ್ಥವಲ್ಲ. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣದ ನಾವೆಲ್ಲಾ ಬೆಂಗಳೂರಿನವರು, ನಮ್ಮ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳಬೇಕು ಎಂದು ಅರ್ಥ.
ಈ ಮೊದಲು ಆ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಸಿಗುತ್ತಿತ್ತು. ನೀವು ರಾಮನಗರದಲ್ಲಿ ಜಮೀನು ತೆಗದುಕೊಂಡಿರಲ್ಲ ಕುಮಾರಣ್ಣ, ಅದಕ್ಕೆ ಎಷ್ಟು ಹಣ ಎಂದು ನಿಮ್ಮ ತಂದೆಯರನ್ನು ಕೇಳಿನೋಡಿ? ಈಗೆಷ್ಟು ಗೈಡೆನ್ಸ್ ವ್ಯಾಲ್ಯೂ ನೀಡಲಾಗಿದೆ ಮಾಹಿತಿ ತೆಗೆದುಕೊಳ್ಳಿ. ನಮ್ಮ ಊರಿನ, ಬೆಂಗಳೂರಿನ ಹೆಸರನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಈ ಪ್ರಶ್ನೆಯನ್ನ ನಾನು ನಿಮಗೆ ಕೇಳುತ್ತಿಲ್ಲ, ನನ್ನ ಜನರಿಗೆ ಕೇಳುತ್ತಿದ್ದೇನೆ.
ನಮ್ಮ ತಂದೆ ದೊಡ್ಡಾಲಹಳ್ಳಿ ಎಂದು ಹೆಸರಲ್ಲಿ ಸೇರಿಸಿದ್ದಾರೆ? ನನ್ನ ಹೆಸರಿನ ಪಕ್ಕ 'ಡಿ.ಕೆ' ಎಂದು ಏಕೆ ಸೇರಿಸಿದ್ದಾರೆ? ನಿಮ್ಮ ಹೆಸರಿನ ಮುಂದೆ 'ಎಚ್.ಡಿ' ಎಂದು ಇಟ್ಟುಕೊಂಡಿರಿ? ದೇವೇಗೌಡರು ಎಂದು ತಂದೆ ಹೆಸರು ಏಕೆ ಸೇರಿಸಿಕೊಂಡಿರಿ? ಹರದನಹಳ್ಳಿ ಅಥವಾ ಹೊಳೆನರಸೀಪುರ ಎಂದು ಬದಲಾಯಿಸಿಕೊಳ್ಳಬಹುದಿತ್ತಲ್ಲೇ. If you forget the route, you will not get the fruit. ಎಲ್ಲರಿಗೂ ಅವರ ಊರು, ಆಚಾರ, ವಿಚಾರ, ಇತಿಹಾಸವನ್ನ ಕಾಪಾಡಬೇಕು ಎನ್ನುವ ಆಸೆಯಿರುತ್ತದೆ. ಈ ವಿಚಾರದಲ್ಲಿ ನಾನು ತೊಡಗಿಕೊಂಡಿದ್ದೇನೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾತನಾಡುತ್ತಾ ಹೋಗುತ್ತೇನೆ ಎಂದರು.












Click it and Unblock the Notifications