ಸರ್ಕಾರದ ಮಹತ್ವದ ಆದೇಶ: ಸಿನಿಮಾ-ಧಾರವಾಹಿಗಳಲ್ಲಿ ಮಕ್ಕಳು ನಟಿಸಲು 'ಡಿಸಿ' ಅನುಮತಿ ಕಡ್ಡಾಯ
ಬೆಂಗಳೂರು, ಫೆಬ್ರವರಿ 14: ನಿಮ್ಮ ಮಕ್ಕಳು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಬಯಕೆ ಹೊಂದಿದ್ದರೆ, ಅದಕ್ಕಾಗಿ ನೀವು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಿರುವುದು ಕಡ್ಡಾಯವಾಗಿದೆ.
ಹೌದು, ಇನ್ನು ಮುಂದೆ ಮಕ್ಕಳು ಸಿನಿಮಾ ಇಲ್ಲವೇ ಧಾರವಾಹಿಗಳಲ್ಲಿ ನಟಿಸಬೇಕಾದರೆ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಕಾರ್ಮಿಕ ಇಲಾಖೆ ಈ ಮಹತ್ವದ ಆದೇಶ ಹೊರಡಿಸಿದೆ. ಸಿನಿಮಾ, ಧಾರವಾಹಿಗಳನ್ನು ಅಭಿನಯಿಸಬೇಕಾದರೆ ಮೊದಲು ಅವರು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು ಎಂದು ಇಲಾಖೆಯು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಜೊತೆಗೆ ಒಂದಷ್ಟು ಷರತ್ತುಗಳನ್ನು ಸಹ ವಿಧಿಸಿದೆ.
ಸರ್ಕಾರ ಹಾಕಿದ ಷರತ್ತುಗಳೇನು?
ಮುಖ್ಯವಾಗಿ ಒಂದು ಧಾರವಾಹಿ ಇಲ್ಲವೇ ಸಿನಿಮಾಗಳಲ್ಲಿ ಮಕ್ಕಳಿಗೆ ಪಾತ್ರ ನೀಡುವ ಸಿನಿಮಾ-ಸೀರಿಯಲ್ ತಂಡಗಳು ಅವರನ್ನು ದಿನದಲ್ಲಿ ಐದು ಗಂಟೆ ಮಾತ್ರವೇ ನಟನೆಗೆ ಬಳಸಿಕೊಳ್ಳಬೇಕು. ಈ ರೀತಿ ಅವರನ್ನು ತಿಂಗಳಲ್ಲಿ 27ದಿನ ಮಾತ್ರ ಬಳಸಿಕೊಳ್ಳಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ. ನಿಯಮ ಉಲ್ಲಂಘಿಸಿದಂತೆ ಎಚ್ಚರಿಕೆ ಸಹ ನೀಡಿದೆ.
ಸರ್ಕಾರ ದಿಢೀರನೇ ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು? ಎಂಬುದನ್ನು ನೋಡುವುದಾದರೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಂಥದ್ದೊಂದು ನಿರ್ಧಾರ ಮಾಡಿದೆ. ಬಾಲ ನಟರು, ಇಲ್ಲವೇ ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ಇಲ್ಲವೇ ನಿರ್ಮಾಪಕರು, ಆಯೋಜಕರು ಮೊದಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆದಿರುವುದು ಕಡ್ಡಾಯ ಮಾಡಿದೆ.
ಇನ್ನು ಮುಂದಿನ ದಿನಗಳಲ್ಲಿ ಮಕ್ಕಳನ್ನು ಚಿತ್ರಕತೆಗೆ ಅನುಗುಣವಗಿ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಈ ಮೊದಲಿನಂತೆ ಬಳಸಿಕೊಂಡಿದ್ದೇ ಆದಲ್ಲಿ ಕಾನೂನು ಉಲ್ಲಂಘನೆ ಆಗುತ್ತಿವೆ. ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರವಾಹಿ ಜವಾಬ್ದಾರಿ ಹೊತ್ತ ಆಯೋಜಕರು, ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ಕೊಟ್ಟಿದೆ.












Click it and Unblock the Notifications