ಮುಂದಿನ ದಸರಾಗಳ ಪುಷ್ಪಾರ್ಚನೆ ನಾನೇ ಮಾಡುವೆ: ಪೂರ್ಣಾವಧಿ ಸಿಎಂ ಸಂದೇಶ ಕೊಟ್ಟ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರದ ಹಂಚಿಕೆ ಒಪ್ಪಂದ ಮುಗಿಯುತ್ತಿದ್ದು, ಸಿಎಂ ಬದಲಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಈ ವರ್ಷವೇ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದೂ ಹೇಳಲಾಗುತ್ತಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ದಸರಾ ವೇಳೆಯೇ ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ. ದಸರಾ ವಿಚಾರ ಉಲ್ಲೇಖಿಸಿ ನಾನೇ ಪೂರ್ಣಾವಧಿಗೆ ಸಿಎಂ ಎಂಬ ಸಂದೇಶ ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದಸರಾ ಉದ್ಘಾಟಕರ ಬಗ್ಗೆ ಬಿಜೆಪಿಯವರು ವಿರೋಧದ ಧ್ವನಿಯೆತ್ತಿದ್ದರು. ಕರ್ನಾಟಕ ಜಾತ್ಯಾತೀತ ರಾಜ್ಯವಾಗಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಅವರಿಗೆ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿತು. ದಸರಾ ರಾಜಕೀಯದ ವಿಷಯವಲ್ಲ, ಇದು ಸಾಂಸ್ಕೃತಿಕ ಉತ್ಸವ ಎಂದಿದ್ದಾರೆ.

ದಸರಾ ಪ್ರಾಧಿಕಾರದ ಅಗತ್ಯವಿಲ್ಲ
ಮೈಸೂರು ದಸರಾಕ್ಕೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ದಸರಾದಲ್ಲಿ ಏರ್ ಶೋ, ದೀಪಾಲಂಕಾರ, ಡ್ರೋನ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನಪ್ರಿಯವಾಗಿದೆ. ಜನರು ಸಂತಸದಿಂದ ಪಾಲ್ಗೊಳ್ಳುವುದೇ ದಸರಾ ಉತ್ಸವ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ, ವಸ್ತು ಪ್ರದರ್ಶನ ಪ್ರಾಧಿಕಾರ ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ದಸರಾ ಪ್ರಾಧಿಕಾರದ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ದಸರಾ ಉತ್ಸವದಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಸಂಭ್ರಮದಿಂದ ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ದಸರಾ ವೇಳೆ ಮುಂದಿನ ದಸರಾದಲ್ಲಿ ನಾನು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ವಿಪಕ್ಷ ನಾಯಕರು ಹೇಳಿದ್ದರು. ವಿರೋಧ ಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಲ್ಲಿ ನಮ್ಮ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆ ಎಂಬ ಭರವಸೆ ಇದೆ. ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು, ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾದೆ. ಮುಂದುವರೆದು ಬಜೆಟ್ ಕೂಡ ಮಂಡಿಸಿದ್ದೇನೆ ಎಂದು ಕೌಂಟರ್ ನೀಡಿದ್ದಾರೆ.
ದಸರಾಗೆ ಬಂತು ಗೃಹಲಕ್ಷ್ಮಿ ವಾಷಿಂಗ್ ಮೆಷಿನ್
ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆ ಬಿ.ಕೆ.ತುಳಸಿ ಎಂಬುವವರು ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ದಸರಾ ದಿನವೇ ಹೊಸ ವಾಷಿಂಗ್ ಮೆಷಿನ್ ಖರೀದಿಸಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸಿದ್ದರಾಮಯ್ಯ, ಫಲಾನುಭವಿ ವಾಷಿಂಗ್ ಮೆಷಿನ್‌ಗೆ ಪೂಜಿಸುತ್ತಿರುವ ವೀಡಿಯೋ ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸಿತು. ಸ್ತ್ರೀಸಬಲೀಕರಣದ ಆಶಯದೊಂದಿಗೆ ಜಾರಿಗೆ ಕೊಟ್ಟ ಗೃಹಲಕ್ಷ್ಮಿ ಯೋಜನೆಯು ಸ್ತ್ರೀಶಕ್ತಿಯನ್ನು ಆರಾಧಿಸುವ ನವರಾತ್ರಿಯಲ್ಲಿ ಮಹಿಳೆಯೊಬ್ಬರ ಸಂಭ್ರಮಕ್ಕೆ ಕಾರಣವಾಗಿರುವುದು ಹೆಚ್ಚು ಅರ್ಥಪೂರ್ಣ ಮತ್ತು ಸಾರ್ಥಕವೆನಿಸಿದೆ. ಇಂತಹ ಇನ್ನಷ್ಟು ಕುಟುಂಬಗಳ ಖುಷಿಗೆ ನಮ್ಮ ಯೋಜನೆ ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.












Click it and Unblock the Notifications