ಗುತ್ತಿಗೆ ಅವಧಿಗೂ ಗ್ರ್ಯಾಚ್ಯುಟಿ ಪಾವತಿಸಬೇಕು; ಹೈಕೋರ್ಟ್
ಬೆಂಗಳೂರು, ಜನವರಿ 02: ಯಾವುದೇ ಉದ್ಯೋಗಿ ಕಾಯಂ ಸರ್ಕಾರಿ ಸೇವೆಗೆ ಸೇರುವ ಮುನ್ನ ಆತ ದೈನಂದಿನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ಆ ಅವಧಿಗೂ ಗ್ರ್ಯಾಚ್ಯುಟಿ ಪಾವತಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಇದರಿಂದಾಗಿ ಉದ್ಯೋಗಿ ಸೇವೆ ಕಾಯಂ ಆದ ನಂತರದ ಅವಧಿಗಷ್ಟೇ ಗ್ರ್ಯಾಚ್ಯುಟಿ ನೀಡಲಾಗುವುದು ಎಂಬ ಸರ್ಕಾರದ ವಾದಕ್ಕೆ ಹಿನ್ನಡೆಯಾಗಿದೆ ಮತ್ತು ಗ್ರ್ಯಾಚ್ಯುಟಿ ಪಾವತಿ ಕುರಿತಂತೆ ಇದ್ದ ಗೊಂದಲ ನಿವಾರಣೆಯಾಗಿದೆ.

ದಿನದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ 19 ವರ್ಷಕ್ಕೆ ಗ್ರ್ಯಾಚ್ಯುಟಿ ಪಾವತಿಸಲು ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರಕಾರಿ ಶಾಲಾ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.
ಹೈಕೋರ್ಟ್ ಏನು ಹೇಳಿದೆ?; ಅರ್ಜಿದಾರರಿಗೆ 50 ಸಾವಿರ ರೂ. ವ್ಯಾಜ್ಯ ವೆಚ್ಚ ಸೇರಿದಂತೆ ಒಟ್ಟು 2.44 ಲಕ್ಷ ರೂ. ಗ್ರ್ಯಾಚ್ಯುಟಿ ಪಾವತಿ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.
"ಗ್ರ್ಯಾಚ್ಯುಟಿ ಪಾವತಿ ಸಂಬಂಧ ಗ್ರ್ಯಾಚ್ಯುಟಿ ಪಾವತಿ ಕಾಯಿದೆ 1972 ಕಾಯಂ ಸರಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ. ಹಾಗಾಗಿ 75 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ ನಾಲ್ಕು ವಾರದಲ್ಲಿ ಬಾಕಿ ಇರುವ ಗ್ರ್ಯಾಚ್ಯುಟಿ ಹಣವನ್ನು ಪಾವತಿಸಬೇಕು" ಎಂದು ಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಗ್ರ್ಯಾಚ್ಯುಟಿ ಪಾವತಿ ಕಾಯ್ದೆಯ ನಿಯಮಗಳು ಸದಾ ನೇಮಕ ಮತ್ತು ಸೇವಾ ಷರತ್ತಿನ ನಿಯಮಗಳಿಗೆ ವ್ಯತಿರಿಕ್ತವಾಗಿರುತ್ತದೆ. ಹಾಗಾಗಿ ಸರ್ಕಾರ ಗ್ರ್ಯಾಚ್ಯುಟಿ ಪಾವತಿ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಯಾವುದು ಈ ಪ್ರಕರಣ?; ಅರ್ಜಿದಾರರು ಮಂಡ್ಯ ಜಿಲ್ಲೆಯ ಜಿ.ಮಲ್ಲಿಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 'ಡಿ' ದರ್ಜೆ ಉದ್ಯೋಗಿಯಾಗಿ ದಿನ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಸರ್ಕಾರ ಅವರ ಸೇವೆಯನ್ನು 1990ರಲ್ಲಿ ಕಾಯಂಗೊಳಿಸಿ ಶಿಕ್ಷಕರ ಹುದ್ದೆ ನೀಡಿತ್ತು ಮತ್ತು ಅವರು 2013ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಆದರೆ ಸರ್ಕಾರ ಅವರ ಸೇವೆ ಕಾಯಂ ಆದ ದಿನದಿಂದ ಅಂದರೆ 1990ರಿಂದ 2013ರ ನಡುವಿನ ಅವಧಿಗೆ ಲೆಕ್ಕ ಹಾಕಿ 1.92 ಲಕ್ಷ ರೂ. ಗ್ರ್ಯಾಚ್ಯುಟಿಯನ್ನು ಮಾತ್ರ ಪಾವತಿಸಿತ್ತು ಮತ್ತು ದಿನದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ 19 ವರ್ಷಕ್ಕೆ ಗ್ರ್ಯಾಚ್ಯುಟಿ ಪಾವತಿಸಲು ನಿರಾಕರಿಸಿತ್ತು.
ಆಗ ಅವರು ಸಿಎಜಿಗೆ ದೂರು ನೀಡಿದ್ದರು, ಸಿಎಜಿ 2015ರಲ್ಲಿ ಉದ್ಯೋಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವಧಿಯೂ ಸೇರಿ ಒಟ್ಟಾರೆ 2.44 ಲಕ್ಷ ರೂ. ಗ್ರ್ಯಾಚ್ಯುಟಿ ಪಾವತಿಗೆ ಆದೇಶ ನೀಡಿತ್ತು. ಆದರೆ ಸರ್ಕಾರ ಪಾವತಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications