Cyclone effect: ಕರ್ನಾಟಕದ 5 ದಿನದ ಹವಾಮಾನ ವರದಿ, ಹಳದಿ ಎಚ್ಚರಿಕೆ ನೀಡಿದ IMD
ಬೆಂಗಳೂರು, ಜೂನ್ 06: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 'ಬಿಪರ್‌ಜಾಯ್' ಚಂಡಮಾರುತದ ಪ್ರಭಾವವು ಕರ್ನಾಟಕದ ಮೇಲೂ ಬೀಳಲಿದೆ. ಮುಂದಿನ ಐದು ದಿನ ಕರ್ನಾಟಕದಲ್ಲಿ ಮಳೆಯಾಗಲಿದ್ದು, ಕೊನೆಯ ಎರಡು ದಿನ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಇತ್ತೀಚೆಗೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ, ವಾಯುಭಾರ ಕುಸಿತವಾಗಿತ್ತು. ಇದೀಗ ಅದು ಇನ್ನಷ್ಟು ತೀವ್ರಗೊಂಡು 'ಬಿಪರ್‌ಜಾಯ್' ಚಂಡಮಾರುತವಾಗಿ ಬದಲಾಗಿದೆ. ಗುಜರಾತ್ ಕರಾವಳಿ ತೀರದ ಪ್ರದೇಶಗಳು, ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಅದೇ ರೀತಿ ಕರ್ನಾಟಕದಲ್ಲೂ ವಿವಿಧೆಡೆ ಜೋರು ಮಳೆ ಬರಲಿದೆ.

ಜೂನ್ 4ರಂದು ಕೇರಳ ಆಗಮಿಸಬೇಕಿದ್ದ ಮುಂಗಾರು ಮಳೆ ಸುರಿಸುವ ಮಾರುಗಳು ಜೂನ್ 8ರ ಆಸುಪಾಸಿಗೆ ಕೇರಳ ನಂತರ ಕರ್ನಾಟಕಕ್ಕೆ ಆಗಮಿಸಲಿದೆ. ಈ ಕಾರಣದಿಂದಲೂ ಅರಬ್ಬಿ ಸಮುದ್ರ ತೀರದ ನಗರಗಳಲ್ಲಿ ಮುಂದಿನ ಒಂದು ವಾರ ಮಳೆ ಅಬ್ಬರ ಕಂಡು ಬರಲಿದೆ.
ಕರ್ನಾಟಕ ಈ ಜಿಲ್ಲೆಗಳಲ್ಲಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದಲ್ಲಿ ಮುಂದಿನ ಅಂದರೆ ಜೂನ್ 11 ರವರೆಗೆ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಬರಲಿದೆ. ಈ ಪೈಕಿ ಕೊನೆಯ ಎರಡು ದಿನ ಜೂನ್ 10 ಮತ್ತು 12ರಂದು ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆ ಅಬ್ಬರಿಸಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ.

ನಾಳೆ ಬುಧವಾರ ರಾಜ್ಯದ ಕೆಲವು ಕಡೆಗಳಲ್ಲಿ ಹಗುರ ಮಳೆ ಬೀಳಬಹುದು. ನಾಡಿದ್ದಿನಿಂದ ಕರಾವಳಿಯ ಉಡುಪಿ, ಉತ್ತ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದರಿಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ವಿಜಯನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಕೆಲವೆಡೆ ಉತ್ತಮ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೊನೆಯ ಎರಡು ದಿನ ರಾಜ್ಯ ದಕ್ಷಿಣ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಭಾಗಕ್ಕೆ ಅತ್ಯಧಿಕ ಮಳೆ ಸಂಭವವಿದೆ. ಕಳೆದ 24 ಗಂಟೆಗಳಲ್ಲಿ ತುಮಕೂರು, ಕಾರವಾರ,ಅಂಕೋಲಾ, ಉತ್ತರ ಕನ್ನಡ, ಹಾಸನ ಮತ್ತು ಚಿತ್ರದುರ್ಗದ ಒಂದೆರಡು ಕಡೆ ತುಂತುರು ಮಳೆ ಬಿದ್ದಿದೆ. ರಾಜ್ಯದ ಗರಿಷ್ಠ ತಾಪಮಾನ ಕಬುರಗಿ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ ಚಿಕ್ಕಮಗಳೂರು, ಬಾಗಲಕೋಟೆ ಮತ್ತು ಮಡಿಕೇರಿಯಲ್ಲಿ ತಲಾ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ಮಾಹಿತಿ ನೀಡಿದೆ.
ಬೆಂಗಳೂರಿಗೆ 3-4 ದಿನ ಮಳೆ ಸಂಭವ
ಇನ್ನೂ ಬೆಂಗಳೂರು ನಗರದಲ್ಲಿ ಮುಂದಿನ ಜೂನ್ 09ರವರೆಗೆ ಗುಡುಗು ಮತ್ತು ಗಾಳಿ ಸಹಿತ ಅಬ್ಬರ ಮಳೆ ಬೀಸಲಿದೆ. ಸಂಜೆ ಇಲ್ಲವೇ ರಾತ್ರಿ ಒಂದೆರಡು ಕಡೆ ತುಂತುರು ಮಳೆ ಆದರೆ, ಇನ್ನು ಹಲವೆಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಮಳೆ ದಾಖಲಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications