ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಕೊಳಕು ರಾಜಕಾರಣ ಬಿಜೆಪಿಯವರದ್ದು: ಜೆಡಿಎಸ್ ಕಿಡಿ
ಆಹಾರ ಸಂಸ್ಕ್ರತಿ, ದೈವ ನಂಬಿಕೆಗಳನ್ನು ರಾಜಕಾರಣಕ್ಕೆ ಬಳಸುವ, ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಕೊಳಕು ರಾಜಕಾರಣ ಬಿಜೆಪಿಯವರ ಕಾರ್ಯವೈಖರಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಬೆಂಗಳೂರು,ಫೆಬ್ರವರಿ23: 2018ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮೀನೂಟ ಸವಿದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಆದರೆ ಈಗ ಸಿ ಟಿ ರವಿ ಮಾಂಸದೂಟ ಮಾಡಿ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.
ಈ ಕುರಿತು ಜೆಡಿಎಸ್ ರಾಜ್ಯ ಘಟಕ ಟ್ವೀಟ್ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ ಟಿ ರವಿಯವರು ಬಾಡೂಟ ಸೇವಿಸಿ ಭಟ್ಕಳದ ನಾಗಬನ ಹಾಗೂ ಕರಿಬಂಟ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಾಡೂಟ ಸೇವಿಸುವಾಗ ತೆಗೆದ ಪಟವು ಪ್ರಕಟವಾಗಿದೆ. ಸಿ.ಟಿ.ರವಿಯವರೆ, ಸತ್ಯ ಬಹಿರಂಗಪಡಿಸುವಿರೆ? ಎಂದು ಪ್ರಶ್ನಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ @CTRavi_BJP ಯವರು ಬಾಡೂಟ ಸೇವಿಸಿ ಭಟ್ಕಳದ ನಾಗಬನ ಹಾಗೂ ಕರಿಬಂಟ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಾಡೂಟ ಸೇವಿಸುವಾಗ ತೆಗೆದ ಪಟವು ಪ್ರಕಟವಾಗಿದೆ. ಸಿ.ಟಿ.ರವಿಯವರೆ, ಸತ್ಯ ಬಹಿರಂಗಪಡಿಸುವಿರೆ?1/4 pic.twitter.com/Skn6I7hcdc
— Janata Dal Secular (@JanataDal_S) February 22, 2023
ತಲೆಗೆ ಸುರಿದ ನೀರು ಕಾಲಿಗೆ ಬರಲೇಬೇಕಲ್ಲ, ರವಿಯವರೆ! ಬರೀ ಇಂತಹ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಮುಖ್ಯ ಸಂಗತಿಗಳಿಂದ ಜನರನ್ನು ವಿಮುಖರನ್ನಾಗಿಸುತ್ತಿದ್ದ ಬಿಜೆಪಿಯ 'ಹುರಿಯಾಳು' ಈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಏನು ಹೇಳುತ್ತಿದೆ? 'ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ', ಎಂಬಂತಾಗಲಿಲ್ಲವೆ? ಎಂದು ಜೆಡಿಎಸ್ ಕಿಡಿಕಾರಿದೆ.

ಅಂದಹಾಗೆ, ನೀವು ತಿಂದ ಮಾಂಸ ಯಾವುದು ಎಂದು ಹೇಳುತ್ತೀರಾ, ರವಿಯವರೆ? ಆಹಾರ ಸೇವನೆ ವೈಯಕ್ತಿಕ ವಿಷಯ. ನಂಬಿಕೆಗಳು ಅಷ್ಟೆ. ಆದರೆ, ಎಲ್ಲದರ ಕಲಸುಮೇಲೋಗರ ಮಾಡಿ, ಜನರನ್ನು ದಿಕ್ಕು ತಪ್ಪಿಸುವ ಹೇಸಿಗೆ ರಾಜಕಾರಣ ಮಾಡುವವರಿಗೆ ಅನಿವಾರ್ಯವಾಗಿ ಈ ಪ್ರಶ್ನೆ ಕೇಳಬೇಕಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಕುಟುಕಿದೆ.

ಆಹಾರ ಸಂಸ್ಕ್ರತಿ, ದೈವ ನಂಬಿಕೆಗಳನ್ನು ರಾಜಕಾರಣಕ್ಕೆ ಬಳಸುವ, ಆ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಕೊಳಕು ರಾಜಕಾರಣ ಬಿಜೆಪಿಯವರ ಕಾರ್ಯವೈಖರಿ. ತಾವೇ ತೋಡಿದ ಹಳ್ಳದಲ್ಲಿ ಇಂಥವರು ಬಿದ್ದಾಗ, ಅಯ್ಯೋ ಪಾಪ ಎಂದೆನಿಸುತ್ತಷ್ಟೆ! ಎಂದು ಜೆಡಿಎಸ್ ಲೇವಡಿ ಮಾಡಿದೆ.












Click it and Unblock the Notifications