ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಸಿಟಿ ರವಿ : ಕಾರಣವೇನು?
ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ಕರ್ನಾಟಕ ಬಿಜೆಪಿ ಪಾಳಯದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿದೆ. ಹಲವು ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರೆ ಇನ್ನೂ ಕೆಲವರು ಮೌನಕ್ಕೆ ಶರಣಾಗಿದ್ದಾರೆ.
ನವೆಂಬರ್ 15ರಂದು ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾನು ಹೋಗುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿ.ಟಿ. ರವಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ, ವಿಜಯೇಂದ್ರ ಅವರು ಎರಡು ಬಾರಿ ಫೋನಿನಲ್ಲಿ ಮಾತನಾಡಿದ್ದಾರೆ, ನವೆಂಬರ್ 15ರ ಮಧ್ಯರಾತ್ರಿವರೆಗು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕಿರುವ ಕಾರಣ, ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ, ಇದನ್ನು ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿವೈ ವಿಜಯೇಂದ್ರ ಕೂಡ ಸೋಮವಾರ ಸಿ.ಟಿ. ರವಿ ಅವರನ್ನು ಭೇಟಿ ಮಾಡಿದ್ದಾರೆ. ದೀಪಾವಳಿ ಶುಭ ಕೋರಿರುವ ವಿಜಯೇಂದ್ರ ಅವರು ಸಹಕಾರ ಮತ್ತು ಮಾರ್ಗದರ್ಶನವನ್ನು ಕೋರಿದ್ದಾರೆ.
ವಿಶ್ವಾಸ ಗಳಿಸಲು ವಿಜಯೇಂದ್ರ ಯತ್ನ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನವೇ ಮುಗಿದಿತ್ತು, ಆದರೂ ಅವರನ್ನು ಅಧ್ಯಕ್ಷರ ಸ್ಥಾನದಲ್ಲು ಮುಂದುವರೆಸಲಾಗಿತ್ತು, ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಅಧ್ಯಕ್ಷರ ಬದಲಾವಣೆ ಆಗುವುದು ಆಗಲೇ ಸ್ಪಷ್ಟವಾಗಿತ್ತಾದರೂ, ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿತ್ತು.
ಅಳೆದು ತೂಗಿ ಕೊನೆಗೆ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಮಣೆ ಹಾಕಿದೆ. ಲೋಕಸಭಾ ಚುನಾವಣೆ ಸಮೀಪದಲ್ಲೇ ಇದ್ದು ವಿಜಯೇಂದ್ರ ಎದುರು ದೊಡ್ಡ ಸವಾಲೇ ಎದುರಾಗಿದೆ. ಪಕ್ಷದೊಳಗಿನ ಅಸಮಾಧಾನ ಶಮನವಾಗಿಸುವ ಜೊತೆಗೆ, ಕಡಿಮೆ ಸಮಯದಲ್ಲೇ ಪಕ್ಷ ಸಂಘಟನೆ ಮಾಡಬೇಕಾಗಿದೆ.
ವಿ. ಸೋಮಣ್ಣ, ಆರ್. ಅಶೋಕ, ಬಸನಗೌಡ ಪಾಟೀಲ್ ಯತ್ನಾಳ್, ಶ್ರೀರಾಮುಲು ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಸೋಮಣ್ಣ ಅವರು ಬಹಿರಂಗವಾಗಿಯೇ ತಮಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಸಿಟಿ ರವಿ ಕೂಡ ಪಕ್ಷದಲ್ಲಿ ಯಾವ ಅಧಿಕಾರ ಇಲ್ಲದ ಕಾರಣ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದರು, ಮತ್ತೊಂದೆಡೆ ಶೋಭಾ ಕರಂದ್ಲಾಜೆ ಅವರಿಗೆ ಅಧಿಕಾರ ಸಿಗುತ್ತೇ ಎಂದೇ ಭಾವಿಸಲಾಗಿತ್ತು, ಈಗ ವಿಜಯೇಂದ್ರ ಅವರಿಗೆ ಅವಕಾಶ ಕೊಟ್ಟಿರುವುದರಿಂದ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪ್ರಮುಖ ಹಿರಿಯ ನಾಯಕರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯ ಶಮನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ವಿ ಅಶೋಕ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಎಸ್‌ಎಂ ಕೃಷ್ಣ, ಜೆಡಿಎಸ್ ವರಿಷ್ಠರಾದ ಹೆಚ್‌ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ.
ವಿಜಯೇಂದ್ರ ಅವರು ಸಂಘಟನಾ ವಿಚಾರದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ, ಉಪಚುನಾವಣೆಗಳಲ್ಲಿ ಅವರು ಬಿಜೆಪಿ ಗೆಲ್ಲಿಸುವಲ್ಲಿ ಶ್ರಮಿಸಿದ್ದರು, ಈಗ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು, ಬಿಜೆಪಿ ಅದೃಷ್ಟ ಖುಲಾಯಿಸುತ್ತಾ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications