CT Ravi: ಸಿಟಿ ರವಿ ಇದ್ದ ಪೊಲೀಸ್ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ
ಬೆಳಗಾವಿ ಡಿಸೆಂಬರ್ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಸುವರ್ಣಸೌಧದಲ್ಲಿ ಸಿಟಿ ರವಿಯನ್ನು ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆತರುತ್ತಾರೆ ಎಂದು ನಂಬಲಾಗಿತ್ತು. ಆದರೆ ಸಿಟಿ ರವಿ ವಾಹನ ಹತ್ತಲು ನಿರಾಕರಿಸಿದಾಗ ಅವರ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿದೆ.
ಇದರಿಂದ ಪೊಲೀಸ್ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದು ಬೆಳಗಾವಿಯಿಂದ ಹೊರ ಬಂದ ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ದಾಳಿಯನ್ನು ತಪ್ಪಿಸಲು ಪೊಲೀಸ್ ವಾಹನವನ್ನು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ ಎನ್ನಲಾಗುತ್ತಿದೆ.

ಹೌದು... ಮಧ್ಯರಾತ್ರಿ 12.15 ಕ್ಕೆ ನಾಲ್ವರು ಪೊಲೀಸರು ಹೆಗಲ ಮೇಲೆ ಹೊತ್ತಿಕೊಂಡು ಸಿಟಿ ರವಿಯನ್ನು ಬೆಳಗಾವಿಯ ಖಾನಾಪುರದಿಂದ ಬೆಂಗಳೂರಿಗೆ ಕರೆತರಲು ವಾಹನದಲ್ಲಿ ಕೂರಿಸಿದ್ದರು. ಈ ವೇಳೆ ಸಿ.ಟಿ ರವಿ ಪೊಲೀಸ್ ವಾಹನವನ್ನು ಹತ್ತಲು ನಿರಾಕರಿಸಿದ್ದಾರೆ.
ಬಲವಂತವಾಗಿ ಪೊಲೀಸರು ಸಿಟಿ ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಪೊಲೀಸ್ ವಾಹನವನ್ನು ಹತ್ತಿಸುವಾಗ ಸಿಟಿ ರವಿ ತಲೆಗೆ ಪೆಟ್ಟಾಗಿದ್ದು, ರಕ್ತ ಚಿಮ್ಮಿದೆ. ಈ ಸಂದರ್ಭದಲ್ಲಿ ಭಯಗೊಂಡ ಸಿಟಿ ರವಿ 'ಕಾಪಾಡಿ.. ಕಾಪಾಡಿ.. ನನ್ನ ಕೊಲ್ತಾರೆ' ಎಂದು ಕೂಗಾಡಿದ್ದಾರೆ. ಇದರಿಂದಾಗಿ ಸಿಟಿ ರವಿ ಹೊತ್ತೊಯ್ಯುತ್ತಿದ್ದ ವಾಹನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಸಿಟಿ ರವಿ ನರಳಾಟಕ್ಕೆ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನದ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಕ್ತ ಸೋರಿಕೆ ಆಗ್ತಿದ್ದರೂ ಪ್ರಾಥಮಿಕ ಚಿಕಿತ್ಸೆ ಕೊಡಿಸದೇ ಪೊಲೀಸರು ಕರೆದೊಯ್ದಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಇದರಿಂದಾಗಿ ಸಿಟಿ ರವಿ ಇದ್ದ ವಾಹನಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಆಗಿದ್ದೇನು?
ಗುರುವಾರ ವಿಧಾನ ಪರಿಷತ್ತಿನಲ್ಲಿ ತನ್ನನ್ನು ಉಲ್ಲೇಖಿಸಿ ಮಾನಹಾನಿ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸ್ವಯಂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಧ್ಯಾಹ್ನ 1 ಗಂಟೆಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಮತ್ತು 79ರ ಅಡಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಪ್ರಕರಣ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಂಡು ಸುವರ್ಣ ವಿಧಾನಸೌಧದಲ್ಲೇ ಸಿಟಿ ರವಿ ಧರಣಿ ಕುಳಿತಿದ್ದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೀಪಿನಲ್ಲಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು. ಅಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಹೀಗಾಗಿ ಅಲ್ಲಿಂದ ಸಿಟಿ ರವಿ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಸಿಟಿ ರವಿ ಮೇಲೆ ಹಲ್ಲೆಗೆ ಕಾಯುತ್ತಿದ್ದರು. ಜೊತೆಗೆ ಬಿಜೆಪಿ ಕಾರ್ಯಕರ್ತರೂ ಕೂಡ ಠಾಣೆಯ ಬಳಿ ಜಮಾಯಿಸಿದ್ದಾರೆ. ಇದರಿಂದಾಗಿ ಸಿಟಿ ರವಿಯವರನ್ನು ಬಂಧಿಸಿದ ಪೊಲೀಸರು ದಾಳಿಯನ್ನು ತಪ್ಪಿಸಲು ರಾತ್ರಿಯಿಡೀ ಠಾಣೆಯಿಂದ ಠಾಣೆಗೆ ವಾಹನದಲ್ಲೇ ಸುತ್ತಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದಾಗ ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಮಾಡಲು ಪ್ರಯತ್ನಿಸಿದಾಗ ಈ ಗಲಾಟೆ ನಡೆದಿದೆ.












Click it and Unblock the Notifications