ರಾಜೀನಾಮೆ ಕೊಟ್ಟ ಸೈನಿಕ: 'ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ಸ್ವಾಗತ'
ಧಾರವಾಡ, ಅಕ್ಟೋಬರ್ 23: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಬಿಜೆಪಿಯ ಪ್ರಮುಖ ನಾಯಕ ಹಾಗೂ ವಿಧಾನ ಪರಿಷತ್ ಸಿ.ಪಿ.ಯೋಗೇಶ್ವರ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಬೆನ್ನಲ್ಲೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ರಾಜೀನಾಮೆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಗುಸು ಗುಸು ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರನ್ನ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಇತ್ತ ಕೆಲ ಕಾಂಗ್ರೆಸ್ ನಾಯಕರು ಸಿ ಪಿ ಯೋಗೇಶ್ವರ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಈ ಕುರಿತು ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಸಿ.ಪಿ.ಯೋಗೇಶ್ವರ್ ಅವರು ಪಕ್ಷಕ್ಕೆ ಬಂದರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ನಮ್ಮ ಪಕ್ಷದ ಹೈಕಮಾಂಡ್ ಇದ್ದು, ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಒಪ್ಪಿಗೆ ಮೇರೆಗೆ ನಮ್ಮ ಪಕ್ಷಕ್ಕೆ ಬಂದರೆ ದೊಡ್ಡ ಪ್ರಮಾಣದಲ್ಲಿ ನಾನು ಅವರಿಗೆ ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಮಾತನಾಡಿದ ಲಾಡ್, ಕ್ಷೇತ್ರದ ಟಿಕೆಟ್ ವಿಚಾರ ಸದ್ಯಕ್ಕೆ ಬಗೆಹರಿದಿದ್ದು, ಆದರೆ ಯಾರಿಗೆ ಅಂತಿಮ ಆಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ. ಸಂಸದ ತುಕಾರಾಂ ಪತ್ನಿಯ ಹೆಸರಿದೆ. ಆದರೆ ಇನ್ನೂ ಅಧಿಕೃತವಾಗಿ ಹೊರಗೆ ಬಂದಿಲ್ಲ. ನಮ್ಮ ತೀರ್ಮಾನ ನಾವು ಹೇಳಿದ್ದೇವೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡಬೇಕು ಎಂದರು.
ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಎಂಬುದಾಗಿ ಏನೂ ಇಲ್ಲ. ನಮ್ಮದು ಜಾತ್ಯಾತೀತ ಪಕ್ಷ. ಹೀಗಾಗಿ ನಾವೆಲ್ಲರನ್ನೂ ಒಂದೇ ರೀತಿ ನೋಡುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಅಭ್ಯರ್ಥಿಯ ಗೆಲ್ಲಿಸುತ್ತೇವೆ. ನಮ್ಮ ಅನಿಸಿಕೆಗಳ ಬಹಿರಂಗವಾಗಿ ಹೇಳಲುಬಾರದು. ಎಲ್ಲ ವಿಚಾರಗಳನ್ನು ಪಕ್ಷದಲ್ಲಿ ಹೇಳಿಕೊಂಡಿದ್ದೇವೆ ಎಂದು ಸಿ ಪಿ ಯೋಗೇಶ್ವರ್ ಹೇಳಿದರು.
ಪರಿಷತ್ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ ರಾಜೀನಾಮೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಸಿ ಪಿ ಯೋಗೇಶ್ವರ ರಾಜೀನಾಮೆ ಕೊಟ್ಟಿದ್ದು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ಹಂತದಲ್ಲಿ ಮಾತುಕತೆ ನಡೆದಿರುವ ಬಗ್ಗೆಯೂ ಮಾಹಿತಿ ಇಲ್ಲ, ಏನೆಲ್ಲ ಬೆಳವಣಿಗೆ ಆಗ್ತಿವೆ ಎಂಬುದನ್ನು ಕಾದು ನೋಡಬೇಕಿದೆ. ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಅವಕಾಶಗಳಿವೆ ಎಂದು ಹೇಳಿದರು.
ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ಜಾಸ್ತಿ ಇವೆ. ಅಲ್ಪಸಂಖ್ಯಾತ ಸಮುದಾಯದ ಡಿಮ್ಯಾಂಡ್ ಪರಿಶೀಲಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.












Click it and Unblock the Notifications