ಸುರಕ್ಷಿತವಾಗಿದೆಯಾ ಬೆಂಗಳೂರು?: ಕೊರೊನಾವೈರಸ್ ಹುಟ್ಟು ಹಾಕಿದ ಹೊಸ ಪ್ರಶ್ನೆ!
ಬೆಂಗಳೂರು, ಜೂನ್ 11: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕಡಿಮೆಯಾಗಿಲ್ಲ ಎನ್ನುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೊವಿಡ್-19 ಇನ್ನೇನು ಹೋಯ್ತು ಎನ್ನುವಷ್ಟರದಲ್ಲೇ ರಾಜ್ಯದಲ್ಲಿ ಮಹಾಮಾರಿ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಮತ್ತೊಮ್ಮೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 525 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 228 ಸೋಂಕಿತರು ಗುಣಮುಖರಾಗಿದ್ದು, ಆದರೆ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ.
ಭಾನುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3955309 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3912024 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 3177 ಸಕ್ರಿಯ ಪ್ರಕರಣಗಳಿವೆ.

ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರದ ಆದೇಶ
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಬಸ್, ಮೆಟ್ರೋ, ಮಾಲ್, ರೆಸ್ಟೋರೆಂಟ್ ಮತ್ತು ಹೋಟೆಲ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗಿದೆ. ಆ ಮೂಲಕ ಕೋವಿಡ್-19 ಹರಡುವಿಕೆ ಕುರಿತು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

525ರಲ್ಲಿ ಬೆಂಗಳೂರಿನಲ್ಲೇ 494 ಪ್ರಕರಣಗಳು ವರದಿ
ಕರ್ನಾಟಕದ ಇಡೀ ರಾಜ್ಯದಲ್ಲಿ 525 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪಕ್ಕಾ ಆಗಿದ್ದರೆ, ಅದರಲ್ಲಿ 494 ಮಂದಿ ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 494 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1790766ಕ್ಕೆ ಏರಿಕೆಯಾಗಿದೆ. ಇದುವರೆಗೂ 1770740 ಸೋಂಕಿತರು ಗುಣಮುಖರಾಗಿದ್ದರೆ, 16,964 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೋವಿಡ್-19 ಅಪಾಯ ಇನ್ನೂ ಕಡಿಮೆಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.

ಬೆಂಗಳೂರು ಹೊರತಾಗಿ ಇತರೆ ಎಲ್ಲಾ ಜಿಲ್ಲೆ ಸೇರಿ 10 ಪ್ರಕರಣ
ಕರ್ನಾಟಕದಲ್ಲಿ ವರದಿ ಆಗಿರುವ ಒಟ್ಟು 525 ಕೊರೊನಾವೈರಸ್ ಪ್ರಕರಣಗಳಲ್ಲಿ 494 ಪ್ರಕರಣಗಳು ಬೆಂಗಳೂರು ನಗರ ಜಲ್ಲೆಗೆ ಸೇರಿವೆ. ಉಳಿದ 31 ಸೋಂಕಿತ ಪ್ರಕರಣಗಳ ಪೈಕಿ ಬಳ್ಳಾರಿ 4, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 7, ಧಾರವಾಡ 1, ಹಾಸನ 2, ಮೈಸೂರು 8 ಉಡುಪಿ ಜಿಲ್ಲೆಯಲ್ಲಿ 3 ಕೋವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6701 ಜನರಿಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸಲಾಗಿದೆ. 15972 ಜನರಿಗೆ RT-PCR ತಪಾಸಣೆ ನಡೆಸಲಾಗಿದ್ದು, ಒಂದು ದಿನದಲ್ಲಿ ಒಟ್ಟು 22673 ಮಂದಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ.
ಕರ್ನಾಟಕದಲ್ಲಿ ಈವರೆಗೂ 5,45,72,635 ಜನರಿಗೆ ಮೊದಲ ಡೋಸ್, 5,28,25,021 ಜನರಿಗೆ ಎರಡನೇ ಡೋಸ್ ಮತ್ತು 26,27,538 ಮಂದಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 11,00,25,194 ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.












Click it and Unblock the Notifications