ಅಂತಿಮ ವರದಿ ಸಲ್ಲಿಸುವ ಮುನ್ನ ದೂರುದಾರರಿಗೆ ಮಾಹಿತಿ ಕಡ್ಡಾಯ; ಕೋರ್ಟ್
ಬೆಂಗಳೂರು, ಮೇ 4; ಯಾವುದೇ ಅಪರಾಧ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್ 173(2) ಪ್ರಕಾರ ತನಿಖಾಧಿಕಾರಿ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅದರ ಅಂತಿಮ ವರದಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ದೂರುದಾರರಿಗೆ ಆ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ, ಈ ಕುರಿತು ಎಲ್ಲಾ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದೆ. ಇದರಿಂದಾಗಿ ದೂರುದಾರರು ಅಂತಿಮ ವರದಿಯ ಬಗ್ಗೆ ಮಾಹಿತಿಯನ್ನು ಪಡೆದು, ಅದರಲ್ಲಿ ಏನಿದೆ?, ಏನಿಲ್ಲ? ಎಂಬುದನ್ನು ಗಮನಿಸಿ ಆ ಕುರಿತು ನ್ಯಾಯಾಲಯಕ್ಕೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅನುಕೂಲವಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಗೆ ದೂರುದಾರರಿಗೆ ಮಾಹಿತಿಯನ್ನು ನೀಡುವುದೇ ಇಲ್ಲ. ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಆರೋಪಿಗಳ ಜತೆ ಶಾಮೀಲಾಗಿ ಅಂತಿಮ ವರದಿಗಳ ಬಗ್ಗೆ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಎಷ್ಟೋ ಪ್ರಕರಣಗಳು ಹಳಿ ತಪ್ಪಿದ್ಟುಂಟು. ಬೆಂಗಳೂರಿನ ಬಿ. ಪ್ರಶಾಂತ್ ಹೆಗ್ಡೆ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವ ಬಗ್ಗೆ ದೂರುದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಇದು ಸಿಆರ್‌ಪಿಸಿ ಸೆಕ್ಷನ್ 173(2) ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿಗಳು ಬ್ಯಾಂಕ್ ಉದ್ಯೋಗಿಗಳು, ಆದರೆ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದು, ಬ್ಯಾಂಕ್ ಅನ್ನು ಆರೋಪಿಯನ್ನಾಗಿ ಮಾಡಿಲ್ಲ. ಹಾಗಾಗಿ ಬ್ಯಾಂಕ್ ಆರೋಪಿಯನ್ನಾಗಿ ಮಾಡುವ ಸಂಬಂಧ ಸೆಕ್ಷನ್ 173(8)ರಡಿ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಬಹುದು ಎಂದು ಆದೇಶಿಸಿದೆ. ಅಧೀನ ನ್ಯಾಯಾಲಯ ಕೂಡ ಸಿಆರ್‌ಪಿಸಿ ಸೆಕ್ಷನ್ 319 ಅನ್ನು ಅನ್ವಯಿಸಿ ಬ್ಯಾಂಕ್ ಅನ್ನು ಹೆಚ್ಚುವರಿ ಆರೋಪಿ ಎಂದು ಸೇರಿಸಬಹುದು ಅಥವಾ ಬ್ಯಾಂಕ್ ಅನ್ನು ಪ್ರತಿವಾದಿಯನ್ನಾಗಿ ಮಾಡಬಹುದು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬೆಂಗಳೂರಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಎಸ್ ಬಿಐ ಉದ್ಯೋಗಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ, 403, 408, 409,447, 381, 420ರಡಿ ವಂಚನೆ ಮತ್ತಿತರ ಆರೋಪಗಳನ್ನು ಹೊರಿಸಿ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಆ ಕುರಿತು ಬೆಂಗಳೂರಿನ ಹೆಚ್ಚುವರಿ ಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಐಡಿ ಪೊಲೀಸರು ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಆದರೆ ಆ ಕುರಿತು ದೂರುದಾರರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

ಹಾಗಾಗಿ ಅರ್ಜಿದಾರರು ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಸಬೇಕು ಮತ್ತು ಬ್ಯಾಂಕ್ ಉದ್ಯೋಗಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಲಾಗಿದೆ, ಆದರೆ ಬ್ಯಾಂಕ್ ಅನ್ನು ಆರೋಪಿಯನ್ನಾಗಿ ಮಾಡಿಲ್ಲ. ಬ್ಯಾಂಕ್ ಆರೋಪಿಯನ್ನಾಗಿ ಮಾಡದೇ ಉದ್ಯೋಗಿಗಳನ್ನು ಮಾಡಿದರೆ ಅವರು ಕಾನೂನಿನ ಸಂಕೋಲೆಯಿಂದ ನುಣುಚಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.












Click it and Unblock the Notifications