Bengaluru: ವಿಪಕ್ಷಗಳ ಸಭೆಗೆ ಬೆಂಗಳೂರಿನತ್ತ 24 ಪಕ್ಷಗಳ ನಾಯಕರು, ಸಭೆಗೆ ಕ್ಷಣಗಣನೆ
ಬೆಂಗಳೂರು, ಜುಲೈ 17: ಕೇಂದ್ರದಲ್ಲಿ ಬಿಜೆಯ ಶಕ್ತಿ ಕುಂದಿಸಿ, ಅಧಿಕಾರದಿಂದ ಹೊರಗಿಡಲು ತಿಂಗಳುಗಳ ಹಿಂದಿನಿಂದಲೂ ಪ್ರಯತ್ನಿಸಿರುತ್ತಿರುವ ವಿರೋಧ ಪಕ್ಷಗಳೆಲ್ಲವು ಬೆಂಗಳೂರಿಲ್ಲಿ ಎರಡು ದಿನ ಸಭೆ ನಡೆಸಿ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಸೋಮವಾರ ಜುಲೈ 17ರಿಂದ ಎರಡು ನಡೆಯಲಿರುವ ಸಭೆಯ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆ. ನಗರದಾದ್ಯಂತ ಫ್ಲೆಕ್ಸ್, ಬ್ಯಾನರ್ ರಾಜಾಜಿಸುತ್ತಿವೆ. ಈಗಾಗಲೇ ವಿವಿಧ ಪಕ್ಷಗಳ ನಾಯಕರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಮುಂದಿನ ವರ್ಷ 2024ರ ಮೇ ತಿಂಗಳ ಆಸುಪಾಸಿಗೆ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಸಂಬಂಧ ತಿಂಗಳುಗಳಿಂದಲೇ ಕೇಂದ್ರ ವಿಪಕ್ಷಗಳು ಸಂಘಟಿತವಾಗುತ್ತಾ ಬಂದಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಕಟ್ಟಿ ಹಾಕಲು ವಿಪಕ್ಷಗಳೆಲ್ಲವು ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ.

ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ವಿಪಕ್ಷಗಳು ಬೃಹತ್ ಸಭೆ ಆಯೋಜಿಸಿವೆ. ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳ ಚಿತ್ತ ಬೆಂಗಳೂರಿನ ಈ ಸಭೆಯತ್ತ ನೆಟ್ಟಿದೆ. ಈ ಹಿಂದೆ ಬಿಹಾರದಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆ ಆಯೋಜನೆಗೊಂಡಿತ್ತು. ಅಂದು 15 ಪಕ್ಷಗಳ 32 ನಾಯಕರು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ದೆಹಲಿ ಸುಗ್ರಿವಾಜ್ಞೆ ವಿಚಾರವಾಗಿ ತನ್ನ ನಿಲುವು ಸ್ಪಷ್ಟಪಡಿಸಿಲ್ಲ ಎಂದು ಎಎಪಿ ಸಭೆಗೆ ಗೈರಾಗಿದ್ದರು.
24 ಪಕ್ಷಗಳು ಸಭೆಯಲ್ಲಿ ಭಾಗಿ
ಇದಾದ ಬಳಿಕ ವಿಪಕ್ಷಗಳ ಸಭೆಯನ್ನು ಹಿಮಾಚಲ ಪ್ರದೇಶದಲ್ಲಿ ನಡೆಸಲು ತೀರ್ಮಾನಿಸಿ ಕೈಬಿಡಲಾಗಿತ್ತು. ಸದ್ಯ ಬಿಹಾರದ ನಂತರ ಎಲ್ಲ ವಿಪಕ್ಷಗಳು ಬೆಂಗಳೂರಿನಲ್ಲಿ 2ನೇ ಬಾರಿಯ ಸಭೆಗೆ ಸಾಕ್ಷಿಯಾಗಲಿವೆ. ಈ ಸಲ ಒಟ್ಟು 24 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅನೇಕರು ಹಾಜರಾಗಲಿದ್ದಾರೆ. ಎಲ್ಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಸಭೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಬಿಜೆಪಿ ವಿರುದ್ಧದ ಈ ಸಭೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಹೆಚ್ಚು ಸಕ್ರಿಯವಾದಂತಿದೆ. ಇದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ಲಭಿಸಿರುವುದು ಕಾರಣವಿರಬಹುದು. ಸಭೆಗೆ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಆಗಮಿಸಲಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ನ ಹಾಲಿ ಸಿಎಂ ಹೇಮಂತ್ ಸೊರೇನ್, ಇತ್ತ ಬಿಹಾರ ಸಿಎಂ ನಿತೀಶ್ ಕುಮಾರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಎನ್ಸಿಪಿಯ ಶರದ್ ಪವಾರ್ ಪಾಲ್ಗೊಳ್ಳುವುದು ಅಧಿಕೃತವಾಗಿದೆ.
ಅಷ್ಟೇ ಅಲ್ಲದೇ ಮಹಾರಾಷ್ಟ್ರ ಮಾಜಿ ಸಿಎಂ ಶಿವಸೇನೆಯ ಉದ್ಧವ್ ಠಾಕ್ರೆ, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ಹಾಗೂ ಮತ್ತಿತರರ ಪಕ್ಷಗಳ ನಾಯಕರು ಹಾಜರಿರಲಿದ್ದಾರೆ.
ರಾಜ್ಯ ಸ್ಥಳಿಯ ಪಕ್ಷಕ್ಕೆ ಆಹ್ವಾನ ಇಲ್ಲ
ಇಂದಿನ ವಿಪಕ್ಷಗಳ ಸಭೆಗೆ ರಾಜ್ಯ ಸ್ಥಳಿಯ ಪಕ್ಷ ಜೆಡಿಎಸ್‌ಗೆ ಆಹ್ವಾನ ಹೋಗಿಲ್ಲ ಎನ್ನಲಾಗಿದೆ. ಇನ್ನೂ ಕೊನೆಯ ಕ್ಷಣದಲ್ಲಿ ಆಮ್ ಆದ್ಮಿ ಪಕ್ಷವು ಬೆಂಗಳೂರಿನ ಸಭೆಗೆ ಬರಲು ಒಪ್ಪಿಗೆ. ಎರಡು ದಿನದ ಸಭೆಯಲ್ಲಿ 400 ಕ್ಷೇತ್ರಗಳಲ್ಲಿ ಒಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಹಾಗೂ ಸಂಚಾಲಕರ ನೇಮಕ ಕುರಿತು ಚರ್ಚೆ ನಡೆದು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ.
ರಾಜ್ಯ ಮತ್ತು ದೇಶದ ರಾಜಕೀಯವಾಗಿ ಇದೊಂದು ಮಹತ್ವದ ಸಭೆಯಾಗಿದೆ. ಅಲ್ಲದೇ ಸಭೆಗೆ ಅನೇಕ ನಾಯಕರು ಪಾಲ್ಗೊಳ್ಳಲಿರುವ ಸಂಬಂಧ ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಅಗತ್ಯ ವಿರುವ ಕಡೆಗಳಲ್ಲಿ ಮಾರ್ಗ ಬದಲಾವಣೆ ಮಾಡಿ, ಪರ್ಯಾಯ ಮಾರ್ಗ ಸೂಚಿಸಿದೆ.












Click it and Unblock the Notifications