ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಬಂಧನ
ಬೆಂಗಳೂರು, ಜುಲೈ 27 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಅವರನ್ನು ಭಾನುವಾರ ಬಂಧಿಸಿದೆ. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಸಯ್ಯದ್ ರಿಯಾಜ್ ಅವರು ಸುದೀರ್ಘ ರಜೆಯ ಮೇಲೆ ತೆರಳಿದ್ದರು. ಭಾನುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ನೋಟಿಸ್ ನೀಡಿ ವಶಕ್ಕೆ ಪಡೆದಿದ್ದಾರೆ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ಪತ್ರಕರ್ತ ಸೇರಿ ಇಬ್ಬರ ಬಂಧನ]

ಪ್ರಾಥಮಿಕ ವಿಚಾರಣೆಯ ಬಳಿಕ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿ, ನಂತರ ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.[ಲೋಕಾಯುಕ್ತದಲ್ಲಿ ಇದೇನಿದು ಹಗರಣ]
ಸಯ್ಯದ್ ರಿಯಾಜ್ ಅವರು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರ ಆಪ್ತರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಕೃಷ್ಣಮೂರ್ತಿ ಅವರಿಗೆ 1 ಕೋಟಿ ರೂ.ಗೆ ಹಣದ ಬೇಡಿಕೆ ಇಟ್ಟ ಪ್ರಕರಣದಲ್ಲಿ ರಿಯಾಜ್ ಅವರ ಹೆಸರೇ ಪ್ರಮುಖವಾಗಿ ಕೇಳಿಬರುತ್ತಿದೆ.
ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಕಮಲ್ ಪಂಥ್ ನೇತೃತ್ವದ ಎಸ್‌ಐಟಿ ತಂಡ ಇದುವರೆಗೂ ಸಯ್ಯದ್ ರಿಯಾಜ್, ಅಶೋಕ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಬಂಧಿಸಿದೆ. ಬಂಧಿತರೆಲ್ಲರೂ ಎಸ್‌ಐಟಿ ವಶದಲ್ಲಿದ್ದು, ಸಯ್ಯದ್ ಅವರನ್ನು ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.












Click it and Unblock the Notifications