ಕೊರೊನಾ ವೈರಸ್: ಕರ್ನಾಟಕದ ಕೆಲ ಜಿಲ್ಲೆಗಳ ಅಪ್ಡೇಟ್

ಕರ್ನಾಟಕ, ಮಾರ್ಚ್ 13: ವಿಶ್ವಾದ್ಯಂತ ಭಯ ಹುಟ್ಟಿಸಿರುವ ಕೊರೊನಾ ವೈರಸ್ ಈಗ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲೆಲ್ಲಿ ಏನೇನು ವ್ಯವಸ್ಥೆ ಮಾಡಲಾಗಿದೆ ಎಂಬುದರ ವರದಿ ಇಲ್ಲಿದೆ.

ವಿಶ್ವದಾದ್ಯಂತ ಭಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೂ ಭಾರತದಲ್ಲಿ 75 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿದೆ. ಇದರಿಂದ ಎಚ್ಚೆತ್ತುಕೊಂಡಿರುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳು 'ವರ್ಕ್ ಫ್ರಮ್ ಹೋಮ್' (ಮನೆಯಿಂದ ಕೆಲಸ)ಗೆ ಮೊರೆ ಹೋಗಿವೆ.

ಕೊಡಗು ವರದಿ

ಕೊಡಗು ವರದಿ

ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿರುವ ಐಸೋಲೇಟೆಡ್ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ವಿದೇಶದಿಂದ ಬಂದಿದ್ದ ವ್ಯಕ್ತಿಯು ದುಬೈನಿಂದ ಮಂಗಳೂರು ಏರ್‌ಪೋರ್ಟ್‌ಗೆ ಗುರುವಾರ ಬಂದಿಳಿದರು. ಅದರೆ ಆಗ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆದರೆ ಅವರು ಅಲ್ಲಿಂದ ಕೊಡಗಿಗೆ ಬರುವ ಸಂದರ್ಭ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿರುವುದರಿಂದ ತಡ ಮಾಡದೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ.

ವೈದ್ಯರು ತಪಾಸಣೆ ನಡೆಸಿದ ವೇಳೆ ಅವರು ಜ್ವರದಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲೇ ಸಿದ್ದಪಡಿಸಲಾದ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ವರದಿ ಬರಲಿದ್ದು, ನಂತರ ಅವರ ಸ್ಥಿತಿ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಎಲ್ಲಿಯೂ ಸ್ಕ್ರೀನಿಂಗ್ ಮಾಡುತ್ತಿಲ್ಲ. ಹೊರ ದೇಶಗಳಿಂದ ಬರುತ್ತಿರುವವರನ್ನು ಅವರು ಇಳಿಯುವ ಏರ್‌ಪೋರ್ಟ್‌ಗಳಲ್ಲೇ ಸ್ಕ್ರೀನಿಂಗ್ ಮಾಡುತ್ತಿರುವುದರಿಂದ ಇಲ್ಲಿ ಎಲ್ಲಿಯೂ ಸ್ಕ್ರೀನಿಂಗ್ ಮಾಡುತ್ತಿಲ್ಲ. ಏರ್ ಪೋರ್ಟ್ ಅಧಿಕಾರಿಗಳು ಹೊರದೇಶಗಳಿಂದ ಬರುತ್ತಿರುವವರ ಮಾಹಿತಿ ನೀಡುತ್ತಿದ್ದು ಅಂತವರ ಮೇಲೆ ಮಾತ್ರ ನಿಗಾ ಇರಿಸಲಾಗುತ್ತಿದೆ ಎಂದಿದ್ದಾರೆ.

ಬಳ್ಳಾರಿ ವರದಿ

ಬಳ್ಳಾರಿ ವರದಿ

ಬಳ್ಳಾರಿಯಲ್ಲಿ ಮತ್ತೆ ಮೂವರಿಗೆ ಶಂಕಿತ ಕೊರೊನಾ ವೈರಸ್ ರೋಗ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿ ಮೂಲದ ಒಂದೇ ಕುಟುಂಬದ ಮೂವರಿಗೆ ರೋಗ ಲಕ್ಷಣಗಳು ಕಂಡು ಬಂದಿವೆ.

ಹೀಗಾಗಿ ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿ ಮೂಲದ ಕುಟುಂಬವೊಂದು ಕಳೆದ 15 ದಿನಗಳ ಹಿಂದೆ ದುಬೈಗೆ ತೆರಳಿದ್ದು, ಬಳಿಕ ಮೂರು ದಿನಗಳ ಹಿಂದೆ ದುಬೈನಿಂದ ಬಳ್ಳಾರಿಗೆ ವಾಪಾಗಿದ್ದರು.

ಮೂರು ದಿನಗಳಿಂದ ಕೆಮ್ಮು, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂವರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.

ಶಿವಮೊಗ್ಗ ವರದಿ

ಶಿವಮೊಗ್ಗ ವರದಿ

ಶಿವಮೊಗ್ಗ ಜಿಲ್ಲೆಗೆ ಕೊರೊನಾ ವೈರಸ್ ಇನ್ನೂ ಕಾಲಿಟ್ಟಿಲ್ಲ. ಹಾಗಂತ ಜಿಲ್ಲಾಡಳಿತ ಕೈಕಟ್ಟಿ ಕುಳಿತಕೊಳ್ಳದೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ತಿಳಿಸಿದರು.

ಈ ಮೊದಲು ಕೇವಲ ಒಂದು ಕೊಠಡಿಯಲ್ಲಿ 6 ಬೆಡ್ ಗಳನ್ನು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿತ್ತು. ಈಗ 12 ಹಾಸಿಗೆಗಳುಳ್ಳ ಎರಡು ಕೊಠಡಿಗಳನ್ನು ಮೀಸಲಿಡಲಾಗಿದೆ. ಇದಕ್ಕೆ ಬೇಕಾದ N95 ಮಾಸ್ಕ್ ನ್ನ ತರಿಸಿಡಲಾಗಿದ್ದು, ಅಗತ್ಯ ಔಷಧಿಗಳನ್ನು ತಂದಿಟ್ಟುಕೊಳ್ಳಲಾಗಿದೆ. ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ ಎಂದರು.

ಮೈಸೂರು ವರದಿ

ಮೈಸೂರು ವರದಿ

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ಮಾಹಿತಿ ನೀಡಿದರು.

ಭಾರತ ಸೇರಿದಂತೆ 121 ದೇಶದಲ್ಲಿ ಕೊರೊನಾ ವೈರಸ್ ಹರಡಿದೆ. ಕರ್ನಾಟಕ ರಾಜ್ಯವು ರೋಗ ತಡೆಗಟ್ಟಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕದಲ್ಲಿ ಒಟ್ಟು 5 ಜನರಿಗೆ ಕೊರೋನಾ ವೈರಸ್ ಖಚಿತವಾಗಿದೆ ಎಂದರು.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣೆ ಮುಂದುವರೆದಿದೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾ ಮಾತನಾಡಿದರು.

ಕಲಬುರಗಿ ವರದಿ

ಕಲಬುರಗಿ ವರದಿ

ಕರ್ನಾಟಕದ ಕಲಬುರಗಿಯಲ್ಲಿ ಮಾರಣಾಂತಿಕ ಸೋಂಕು ಕೊರೊನಾ ವೈರಸ್ ನಿಂದ 76 ವರ್ಷದ ಮಹ್ಮದ್ ಹುಸೇನ್ ಸಿದ್ಧಿಕಿ ಪ್ರಾಣ ಬಿಟ್ಟಿದ್ದು ಆಗಿದೆ. ರಾಜ್ಯದಲ್ಲಿ ಮಾರಕ ಸೋಂಕು ಹರಡುವ ಭೀತಿ ಹೆಚ್ಚಾಗಿದ್ದು, 46 ಜನರ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.

ಶುಕ್ರವಾರ ತುರ್ತು ಸುದ್ಧಿಗೋಷ್ಠಿ ನಡೆಸಿದ ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ. ಮೃತ ವೃದ್ಧನ ಜೊತೆಗೆ ಸಂಪರ್ಕದಲ್ಲಿದ್ದ 46 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದರು. 46 ಜನರ ಪೈಕಿ 31 ಜನರನ್ನು ಹೈ ರಿಸ್ಕ್ ಹಾಗೂ 15 ಜನರನ್ನು ಲೋ ರಿಸ್ಕ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕೋಲಾರ ವರದಿ

ಕೋಲಾರ ವರದಿ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆಯಬೇಕಿದ್ದ ಉರುಸ್ ಆಚರಣೆಯನ್ನನು ರದ್ದು ಮಾಡಲಾಗಿದೆ. ಮಾರ್ಚ್ 23, 24 ಮತ್ತು 25 ರಂದು ನಡೆಯಬೇಕಿದ್ದ ಮುಸ್ಲಿಂ ಬಾಂಧವರ ಉರುಸ್ ಹಬ್ಬ ರದ್ದು ಎಂದು ದರ್ಗಾದ ಕಮಿಟಿ ಅಧ್ಯಕ್ಷ ಶಂಶುದ್ದೀನ್ ಬಾಬು ಮಾಹಿತಿ ನೀಡಿದ್ದಾರೆ.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ತುರ್ತು ಸಭೆ ನಡೆಸಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಅರೋಗ್ಯಾಧಿಕಾರಿಗಳು, ನಗರಸಭೆ, ಪುರಸಭೆ, ಖಾಸಗಿ ಆಸ್ಪತ್ರೆಗಳ ಸಂಘ, ನರ್ಸಿಂಗ್ ಹೋಂ ಪ್ರಮುಖರ ಸಭೆ,

ನಾಳೆಯಿಂದ ರಾಜ್ಯ ಸ್ಥಬ್ದ ಹಿನ್ನೆಲೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೆ ತಿಂಗಳ 15,16 ರಂದು ನಡೆಯಬೇಕಿದ್ದ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ಜಾತ್ರೆಯನ್ನು ಮುಂದೂಡಲಾಗಿದೆ.

ರಾಮನಗರದ ಬಿಡದಿ ಬಳಿ ಇರುವ ರಾಜ್ಯದ ಪ್ರಖ್ಯಾತ ಮನೋರಂಜನಾ ಪಾರ್ಕ್ ವಂಡರ್ ಲಾ ಮಾರ್ಚ್ 20 ರವರೆಗೆ ರಜೆ ಘೋಷಣೆ ಮಾಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ರಾಮನಗರ ವರದಿ

ರಾಮನಗರ ವರದಿ

ರಾಜ್ಯ ಸರ್ಕಾರದ ಆದೇಶ ಹಿನ್ನಲೆ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ರಜೆ ಘೋಷಣೆ ಮಾಡಿದ್ದು, ಪ್ರಮುಖವಾಗಿ ಶನಿವಾರ ಮತ್ತು ಭಾನುವಾರ ಹೆಚ್ಚು ಜನ ಸೇರುವ ಹಿನ್ನೆಲೆಯಲ್ಲಿ ರಜೆ ಘೋಷಿಸಿದೆ.

ವಂಡರ್ ಲಾ ಪಾರ್ಕ್ ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ವಂಡರ್ ಲಾ ಗೆ ಆಗಮಿಸುತ್ತಿದ್ದರು.

ಅಲ್ಲದೇ ರಾಜ್ಯದ ಇತರೆ ಪ್ರವಾಸಿ ತಾಣಗಳಾದ ಸಂಗಮ, ಮೇಕೆದಾಟು, ಸಾವನದರ್ಗ, ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಜನರ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+