48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್!
ಬೆಂಗಳೂರು, ಮಾರ್ಚ್.19: ಕೊರೊನಾ ವೈರಸ್ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು ಆಗಿದೆ. ಮಾರಕ ಸೋಂಕಿಗೆ ರಾಜ್ಯದಲ್ಲೇ ಮೊದಲ ವ್ಯಕ್ತಿ ಬಲಿಯಾಗಿದ್ದೂ ಆಗಿದೆ. ಸೋಂಕಿತರ ಸಂಖ್ಯೆಯು ದಿನೇ ದಿನೆ ರಾಜ್ಯದಲ್ಲೂ ಏರಿಕೆ ಆಗುತ್ತಿದ್ದು, ಮತ್ತೊಬ್ಬರಿಗೆ ಸೋಂಕು ಇರುವುದು ಪಕ್ಕಾ ಆಗಿದೆ.
ನಾಲ್ಕು ದಿನಗಳ ನಂತರ 35 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಕಳೆದ ಮಾರ್ಚ್.15ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು ಎನ್ನಲಾಗಿದೆ.
ಬೆಂಗಳೂರಿನಿಂದ ಕೊಡಗಿನವರೆಗೂ ಅದೇ ದಿನ ಬಸ್ ನಲ್ಲಿ ಆ ವ್ಯಕ್ತಿ ಪ್ರಯಾಣಿಸಿದ್ದನು. ಅದಾಗಿ 48 ಗಂಟೆಗಳ ಬಳಿಕ ಅಂದರೆ ಮಾರ್ಚ್.17ರಂದು ವ್ಯಕ್ತಿ ಸೋಂಕಿತ ಲಕ್ಷಣಗಳು ಕಂಡು ಬಂದಿದ್ದು, ಕೊಡಗಿನಲ್ಲಿ ಇರುವ ಪ್ರತ್ಯೇಕತಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕರ್ನಾಟಕದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 15ಕ್ಕೆ ಏರಿಕೆ
ಮಾರಕ ಕೊರೊನಾ ವೈರಸ್ ನಿಂದ ಕರ್ನಾಟಕದ ಕಲಬುರಗಿಯಲ್ಲಿ ಮೊದಲ ವ್ಯಕ್ತಿ ಪ್ರಾಣ ಬಿಟ್ಟ ನಂತರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆ ಆಗುತ್ತಿದೆ. ಆದರೆ ಗುರುವಾರ ರಾಜ್ಯದಲ್ಲಿ ಒಬ್ಬ ವ್ಯಕ್ತಿಗಷ್ಟೇ ಸೋಂಕು ತಗಲಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಸೋಂಕಿತರ ಸಂಖ್ಯೆ 14 ರಿಂದ 15ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಕೇಸ್?
ಇನ್ನು, ರಾಜ್ಯದ ಯಾವ ಜಿಲ್ಲೆಗಳಲ್ಲಿ ಅದೆಷ್ಟು ಹೊಸ ಶಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂಬುದನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 1 ಹೊಸ ಶಂಕಿತ ಸೋಂಕಿತ ಪತ್ತೆಯಾಗಿದ್ದಾರೆ. ದಕ್ಷಿಣ ಕನ್ನಡ 12, ಉಡುಪಿಯಲ್ಲಿ 5, ಬೀದರ್ ನಲ್ಲಿ 1, ಗದಗ 1, ಧಾರವಾಡದಲ್ಲಿ 3 ಮತ್ತು ಹಾಸನದಲ್ಲಿ 3ರಿಗೆ ಸೋಂಕು ತಗಲಿರುವ ಸಾಧ್ಯತೆಗಳಿದ್ದು, ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.

ಐಸೋಲೇಟೆಡ್ ವಾರ್ಡ್ ಗಳಲ್ಲಿ ಶಂಕಿತರಿಗೆ ಚಿಕಿತ್ಸೆ
ಇನ್ನು, ಕರ್ನಾಟಕದಲ್ಲಿ ಬುಧವಾರದ ಅಂಕಿ-ಅಂಶಗಳ ಪ್ರಕಾರ 114 ಜನರನ್ನು ಅಬ್ಸರ್ ವೇಷನ್ ನಲ್ಲಿ ಇರಿಸಲಾಗಿದೆ. 93 ಜನರು 28 ದಿನಗಳ ಕಾಲ ಅಬ್ಸರ್ ವೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 74 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿ ದಿಗ್ಬಂಧನದಲ್ಲಿ ಇರಿಸಲಾಗಿದ್ದು, 26 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 75 ಜನರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಲಾಗಿದ್ದು, 46 ಜನರಿಗೆ ಕೊರೊನಾ ವೈರಸ್ ತಗಲಿಲ್ಲ ಎಂದು ತಿಳಿದು ಬಂದಿದೆ.

ಗೃಹ ದಿಗ್ಬಂಧನದ ಕುರಿತು ಏರ್ ಪೋರ್ಟ್ ಗಳಲ್ಲಿ ಸ್ಟ್ಯಾಂಪ್
ಇನ್ನು, ಉತ್ತರ ಪ್ರದೇಶ ಮಾದರಿಯಲ್ಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗೃಹ ದಿಗ್ಬಂಧನದ ಕುರಿತು ಸ್ಟ್ಯಾಂಪ್ ಹಾಕಲಾಗುತ್ತಿದೆ. ಮಾರ್ಚ್.18ರಿಂದಲೇ ಈ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸ್ಟ್ಯಾಂಪ್ ಹಾಕಿಸಿಕೊಂಡ ಪ್ರವಾಸಿಗರು ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ.












Click it and Unblock the Notifications