ಕೊರೊನಾ ವೈರಸ್ ಅಪ್ ಡೇಟ್; ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ಕೋಲಾರ, ಜೂನ್ 17: ಕರ್ನಾಟಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಿರುವುದರ ನಡುವೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ನೆಮ್ಮದಿ ತಂದಿದೆ.
Recommended Video
ಕೆಲವು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ. ನಿನ್ನೆ ಕೋಲಾರ ನಗರದ 27 ವರ್ಷದ ಕಾರಾಗೃಹ ಪೊಲೀಸ್ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಕೋಲಾರ ನಗರದ ಕುರುಬರ ಪೇಟೆಯ ಪಿಜಿಯಲ್ಲಿ ಪೊಲೀಸ್ ವಾಸವಾಗಿದ್ದು, ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಇತರೆಡೆಗಳಲ್ಲಿ ಸೇವೆ ಸಲ್ಲಿಸಿ ವಾಪಸಾಗಿದ್ದರು ಎಂದು ತಿಳಿದುಬಂದಿದೆ. ಕೊರೊನಾ ತಪಾಸಣೆಗೆ ಒಳಗಾಗಿ ಪಿಜಿಯಲ್ಲಿ ಕ್ವಾರಂಟೈನ್ ನಲ್ಲಿ ಒಳಗಾಗಿದ್ದರು. ನಿನ್ನೆ ರಾತ್ರಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜೊತೆಯಲ್ಲಿದ್ದ ಮೂವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.

ಬಳ್ಳಾರಿಯ ಆರ್ ಟಿಒ ಸಿಬ್ಬಂದಿಗೆ ಕೊರೊನಾ ಸೋಂಕು
ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಮಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಒಂದೆಡೆ ಆತಂಕ ತಂದರೆ, ಹೊಸಪೇಟೆ RTO ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ಯಿಗೆ ಕೊರೊನಾ ಸೋಂಕು ತಗುಲಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ಈತ RTO ಕಚೇರಿಯಲ್ಲಿ ಗುತ್ತಿಗೆ ಆಧಾರಿತ ನೌಕರನಾಗಿ ಕೆಲಸ ಮಾಡುತ್ತಿದ್ದರು. ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆ ಆಗಿಲ್ಲ. ನಿನ್ನೆ ಹೊಸಪೇಟೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಹೊಸಪೇಟೆ ತಾಲೂಕು ವೈಧ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜನರಿಗೆ ರಿಲೀಫ್ ನೀಡಿದೆಯಾ ಕೊರೊನಾ ಸೋಂಕು?
ದಾವಣಗೆರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಇದರ ಜೊತೆಗೆ ಗುಣಮುಖರಾದವರ ಸಂಖ್ಯೆ ಕೂಡ ಗಣನೀಯ ಏರಿಕೆ ಕಂಡಿದೆ. ಒಟ್ಟು 227 ಪ್ರಕರಣಗಳಲ್ಲಿ ಕೇವಲ 16 ಸಕ್ರಿಯ ಪ್ರಕರಣಗಳು ಉಳಿದುಕೊಂಡಿವೆ. ನಿನ್ನೆ ಹತ್ತು ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹೀಗಾಗಿ ನಗರದ ಬಸವರಾಜ್ ಪೇಟೆ ಕಂಟೈನ್ಮೆಂಟ್ ಝೋನ್ ಇಂದ ಮುಕ್ತಿ ಪಡೆದಿದೆ. ಜಿಲ್ಲೆಯಲ್ಲಿ 28 ದಿನಗಳಿಂದ ಹೊಸ ಕೊರೊನಾ ಸೋಂಕಿನ ಪ್ರಕರಣ ಕಾಣಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟು 227 ಸೋಂಕಿತರಿದ್ದು, 205 ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದರು.

ಕಲಬುರಗಿ ಕೊಂಚ ರಿಲ್ಯಾಕ್ಸ್
ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ ನಿನ್ನೆ 15 ಜನ ಗುಣಮುಖರಾಗಿ ನಗರದ ಜಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1007 ಜನರು ಕೊರೊನಾ ಸೋಂಕಿತರಲ್ಲಿ 474 ಜನ ಗುಣಮುಖರಾಗಿದ್ದಾರೆ. 523 ಸಕ್ರಿಯ ರೋಗಿಗಳಿದ್ದಾರೆ. ಇದುವರೆಗೂ 10 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಹಸಿರಾಗಿಯೇ ಉಳಿಯಿತು ಗಡಿ ಜಿಲ್ಲೆ ಚಾಮರಾಜನಗರ
ಮುಂಬೈಯಿಂದ ಜಿಲ್ಲೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕದಲ್ಲಿದ್ದ ಜಿಲ್ಲಾ ಜನತೆ ಇದೀಗ ನಿರಾಳರಾಗಿದ್ದಾರೆ. ಮುಂಬೈ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 23 ಜನರ ವರದಿ ನೆಗೆಟಿವ್ ಬಂದಿದ್ದು, ಸದ್ಯಕ್ಕೆ ಚಾಮರಾಜನಗರ ಸೇಫ್ ಆಗಿದೆ. ಮುಂಬೈನಿಂದ ಬಂದಿದ್ದ ವಿದ್ಯಾರ್ಥಿಗೆ ಸೋಂಕು ದೃಢವಾಗುತ್ತಿದ್ದಂತೆ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇದೀಗ ಸೋಂಕಿತ ವಿದ್ಯಾರ್ಥಿ ಆರೋಗ್ಯ ಸ್ಥಿರವಾಗಿದೆ. ಆತ ಗುಣಮುಖನಾಗುತ್ತಿದ್ದಂತೆ ಮುಂಬೈಗೆ ವಾಪಸ್ಸು ಕಳುಹಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಜೊತೆಗೆ ಚಾಮರಾಜನಗರ ಹಸಿರಾಗಿಯೇ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದ್ದಾರೆ.

ಶಿವಮೊಗ್ಗ; ಕೊರೊನಾ ಸೋಂಕಿತ ಸ್ವಾಮೀಜಿಗೆ ಆಯುರ್ವೇದ ಚಿಕಿತ್ಸೆಗೆ ಒಪ್ಪಿಗೆ
ತಮಗೆ ಆಯುರ್ವೇದ ಚಿಕಿತ್ಸೆ ಕೊಡಿಸಬೇಕೆಂದು ಈಚೆಗೆ ಮನವಿ ಮಾಡಿದ್ದ ಕೊರೊನಾ ಸೋಂಕಿತ ಸ್ವಾಮೀಜಿಯೊಬ್ಬರಿಗೆ ಸ್ಪಂದಿಸಿರುವ ಶಿವಮೊಗ್ಗ ಜಿಲ್ಲಾಡಳಿತ, ಆಯುಷ್ ಇಲಾಖೆ ಆರೋಗ್ಯ ಮಂತ್ರಾಲಯ ಸಲಹೆ ಪಡೆದು ಅಧಿಕೃತವಾಗಿ ಸ್ವಾಮೀಜಿಗೆ ಆಯುರ್ವೇದ ಚಿಕಿತ್ಸೆ ಕೊಡಿಸಲು ಮುಂದಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ಮತ್ತೆ ಏಳು ಪ್ರಕರಣಗಳು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಪ್ರಾಥಮಿಕ ಸಂಪರ್ಕದಿಂದಾಗಿ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದುವರೆಗೆ ಶಿವಮೊಗ್ಗದಲ್ಲಿ 101 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 54 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ 47 ಸಕ್ರಿಯ ಕೊರೊನಾ ಪ್ರಕರಣಗಳಿವೆ.

ರಾಮನಗರದಲ್ಲಿ ಕೊರೊನಾ ವೈರಸ್ ಗೆ ಎರಡನೇ ಬಲಿ
ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಎರಡನೇ ಬಲಿ ಪಡೆದಿದೆ. ಜೊತೆಗೆ ಇಬ್ಬರು ಟೊಯೊಟಾ ಕಂಪನಿ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸಂಜೆ ವೇಳೆಗೆ ಮತ್ತಷ್ಟು ಪಾಸಿಟಿವ್ ವರದಿ ಬರುವ ಸಾಧ್ಯತೆ ಇದೆ. ಕನಕಪುರ ಟೌನ್ ನ 90 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಎದೆ ನೋವು ಎಂದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶವ ಪರೀಕ್ಷೆಗೂ ಮುನ್ನ ಪರೀಕ್ಷಿಸಿದಾಗ ಅವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.












Click it and Unblock the Notifications