ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಕೆ.ಎಸ್. ಈಶ್ವರಪ್ಪ ಅರೆಸ್ಟ್ ಆಗ್ತಾರಾ?
ಬೆಂಗಳೂರು, ಏ. 12: 40 ಪರ್ಸೆಂಟ್ ಕಮಿಷನ್ ಭರಿಸಲಾಗದೇ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಂದ್ರ ಸಚಿವ ಅಮಿತ್ ಷಾಗೆ ದೂರು ಸಲ್ಲಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಎಫ್ಐಆರ್ ದಾಖಲಾಗಲಿದ್ದು, ಸಚಿವರನ್ನು ಪೊಲೀಸರು ಬಂಧಿಸುತ್ತಾರೆಯೇ? ಎನ್ನುವ ಪ್ರಶ್ನೆ ಎದ್ದಿದೆ.
ಯಾವುದೇ ವ್ಯಕ್ತಿಯ ಆತ್ಮಹತ್ಯೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾದರೆ, ಅಂತಹ ವ್ಯಕ್ತಿ ವಿರುದ್ಧ ತನಿಖಾಧಿಕಾರಿಗಳು ಮೊದಲು ಎಫ್ಐಆರ್ ದಾಖಲಿಸಬೇಕು. ಸಾಕ್ಷಾಧಾರಗಳು ಲಭ್ಯವಿದ್ದಲ್ಲಿ ಯಾವುದೇ ವಾರಂಟ್ ಇಲ್ಲದೇ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸಚಿವ ಈಶ್ವರಪ್ಪ ಅವರು ಸಚಿವರು ಆಗಿದ್ದರೂ ಸಹ ಕ್ರಿಮಿನಲ್ ಸ್ವರೂಪದ ಅಪರಾಧ ಆಗಿರುವ ಕಾರಣದಿಂದ ಅವರನ್ನು ಬಂಧಿಸುವ ಅಧಿಕಾರ ತನಿಖಾಧಿಕಾರಿ ವಿವೇಚನೆಗೆ ಒಳಪಟ್ಟಿರುತ್ತದೆ. ಬಂಧಿತ ಆರೋಪಿಗೆ ನ್ಯಾಯಾಲಯದಿಂದಲೇ ಜಾಮೀನು ಪಡೆಯಬೇಕು. ದೂರುದಾರ ಅರೋಪಿ ಪರಸ್ಪರ ಪ್ರಕರಣ ನ್ಯಾಯಾಲಯದ ಹೊರಗೆ ಇತ್ಯರ್ಥ ಪಡಿಸಿಕೊಳ್ಳಲು ಈ ಅಪರಾಧಕ್ಕೆ ಅವಕಾಶವಿಲ್ಲ. ಅದೇ ಈ ರಾಷ್ಟ್ರದ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಮೇಲೆ ಈ ಆರೋಪ ಬಂದಾಗ ಮಾತ್ರ ಬಂಧಿಸಲು ಅವಕಾಶವಿರಲ್ಲ. ಪೂರ್ವಾನುಮತಿ ಬೇಕಾಗುತ್ತದೆ ಎನ್ನುತ್ತದೆ ಕಾನೂನು ಎಂದು ತಜ್ಞರೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ಕಳಿಸಿದ್ದ ಸಂದೇಶ:
ಬೆಳಗಾವಿಯಲ್ಲಿ ಸುಮಾರು 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದ ಸಂತೋಷ್ ಪಾಟೀಲ್ ಅವರಿಗೆ ಬಿಲ್ ಪಾವತಿ ಮಾಡಿರಲಿಲ್ಲ. ವಿವಿಧೆಡೆ ಸಾಲ ಮಾಡಿ ಗುತ್ತಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಹಣ ಬಿಡುಗಡೆ ಮಾಡುವಂತೆ ಸಂತೋಷ್ ಪಾಟೀಲ್ ಮನವಿ ಮಾಡಿದ್ದರು. ಆದರೂ ಅಧಿಕಾರಿಗಳು ಸೊಪ್ಪು ಹಾಕಿರಲಿಲ್ಲ. ಇದರಿಂದ ನೊಂದಿದ್ದ ಸಂತೊಷ್ ಪಾಟೀಲ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು. ಇದು ರಾಜ್ಯದಲ್ಲಿ ದೊಡ್ಡ ವಿವಾದ ಎಬ್ಬಿಸಿತ್ತು. ಇಷ್ಟಾಗಿಯೂ ಸಂತೋಷ್ ಪಾಟೀಲ್ ಗೆ ನ್ಯಾಯ ಸಿಕ್ಕಿರಲಿಲ್ಲ.

ಸಂತೋಷ್ ಪಾಟೀಲ್ ಕೊನೆ ಸಂದೇಶ:
ತನ್ನ ಆಪ್ತರೊಬ್ಬರಿಗೆ ಆತ್ಮಹತ್ಯೆಗೂ ಮುನ್ನ ಸಂತೋಷ್ ಪಾಟೀಲ್ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಗುಡ್ ಮಾರ್ನಿಂಗ್ ಜೀ.. ನನ್ನ ಸಾವಿಗೆ ನೇರ ಕಾರಣ ಕೆ.ಎಸ್. ಈಶ್ವರಪ್ಪ. ಸಚಿವರು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ, ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ, ಮಾನ್ಯ ಪ್ರಧಾನ ಮಂತ್ರಿಗಳು, ಹಾಗೂ ಮಾನ್ಯ ಮುಖ್ಯ ಮಂತ್ರಿಗಳು, ಹಾಗೂ ನಮ್ಮ ಲಿಂಗಾಯಿತ ನಾಯಕರಾದ ಬಿ.ಎಸ್. ಯಡಿಯೂರಪ್ಪ ನವರು ಎಲ್ಲರೂ ಸಹಾಯ ಹಸ್ತ ಮಾಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜತೆ ಬಂದ ನನ್ನ ಗೆಳೆಯರಾದ ಸಂತೋಷ್, ಮತ್ತು ಪ್ರಶಾಂತ್ ಗೆ ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ. ನನ್ನ ಸಾವಿಗೂ ಅವರಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮೊಬೈಲ್ ನಲ್ಲಿ ಆತ್ಮಹತ್ಯೆಗೂ ಮುನ್ನ ಸಂತೋಷ್ ಪಾಟೀಲ್ ನೋಟ್ ಬರೆದಿಟ್ಟಿದ್ದಾರೆ.

ಈ ನೋಟ್ ನೋಡಿದರೆ ಮೇಲ್ನೋಟಕ್ಕೆ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂಬುದು ಕಂಡು ಬರುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸದಿಂತೆ ಕೋಟ್ಯಂತರ ರೂ. ಕಾಮಗಾರಿ ನಿರ್ವಹಿಸಿದರೂ ಬಿಲ್ ಪಾವತಿ ಮಾಡಿರಲಿಲ್ಲ. ಸ್ವತಃ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಸಂತೋಷ್ ಪಾಟೀಲ್ ಮನವಿ ಮಾಡಿದ್ದರು. ಈಶ್ವರಪ್ಪ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಸಂತೋಷ್ ಪಾಟೀಲ್ ಗೆ ಬಿಲ್ ಪಾವತಿ ಮಾಡಿರಲಿಲ್ಲ ಎಂದು ಸಂತೋಷ್ ಪಾಟೀಲ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಅಲ್ಲದೇ ಈ ಕುರಿತು ಕೇಂದ್ರದ ಪ್ರಧಾನಿಗಳ ಕಚೇರಿಗೆ ಸ್ವತಃ ದೂರು ಬರೆದಿದ್ದನ್ನು ಸ್ಮರಿಸಬಹುದು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications