ಬಂಡೆಗೆ ಪ್ರತಿಷ್ಠೆಯಾದ ಚನ್ನಪಟ್ಟಣ ಕ್ಷೇತ್ರ: ಡಿ ಕೆ ಶಿವಕುಮಾರ್‌ ಮಾತಿಗೆ ಒಕೆ ಎಂದ ಸಿದ್ದರಾಮಯ್ಯ

ಚನ್ನಪಟ್ಟಣ, ಮೇ 05: ಕಳೆದ ಉಪ ಚುನಾವಣೆಯ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್‌ ಸ್ಪರ್ಧೆ ನಡೆಸಿದ್ರೆ, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಕಣದಲ್ಲಿದ್ದು, ಚನ್ನಪಟ್ಟಣ ಡಿ ಕೆ ಶಿವಕುಮಾರ್‌ ಗೆ ಪ್ರತಿಷ್ಠೆಯ ಕಣವಾಗಿದ್ರೆ, ಹೆಚ್‌ ಡಿ ಕುಮಾರಸ್ವಾಮಿಗೆ ಅಸ್ತಿತ್ವದ ಪ್ರಶ್ನೆಯಾಗಿತ್ತು. ಉಪಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ರೆ, ನಿಖಿಲ್‌ ಕುಮಾರಸ್ವಾಮಿ ಅವರು ಸೋಲು ಅನುಭವಿಸಿದ್ರು. ಸದ್ಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರು ಸಹ ಡಿ ಕೆ ಶಿವಕುಮಾರ್‌ಗೆ ಚನ್ನಪಟ್ಟಣ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸಿದ್ದಾರೆ.

ಚನ್ನಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ, ವಿಧಾನಸಭೆ ಕ್ಷೇತ್ರದ ವಿಶೇಷ ಅನುದಾನ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಜೂಮ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚನ್ನಪಟ್ಟಣದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಅವರು "ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

Construction of Channapatna Stadium CM Responds Positively To DK Shivakumar Proposal

ಚನ್ನಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಇಲಾಖೆಯಿಂದಲೇ ರೂ.158 ಕೋಟಿ ಅನುದಾನವನ್ನು ಚನ್ನಪಟ್ಟಣಕ್ಕೆ ನೀಡಿದ್ದೇನೆ. ಮೂರು ದಿನಗಳ ಹಿಂದೆಯಷ್ಟೇ ಒಂದಷ್ಟು ಅನುದಾನ ನೀಡಿದ್ದೇನೆ. ನಾನೇ ಸಚಿವನಿದ್ದೇನೆ. ಅಗತ್ಯ ಬಿದ್ದರೇ ಇನ್ನಷ್ಟು ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನೀಡಿದ ಅನುದಾನದಲ್ಲಿ ರಸ್ತೆ, ಸೇತುವೆಗಳನ್ನು ಚೆನ್ನಾಗಿ ನಿರ್ಮಾಣ ಮಾಡಲಾಗಿದೆ. ಇದನ್ನು ಶಾಸಕರಾದ ಯೋಗೇಶ್ವರ್ ಅವರೂ ಒಪ್ಪಿದ್ದಾರೆ. ನನ್ನ ಕ್ಷೇತ್ರಕ್ಕೇ ರೂ.500 ಕೋಟಿಯೂ ಕೊಟ್ಟಿರಲಿಲ್ಲ. ಇಂತಹ ಸದಾವಕಾಶ ಚನ್ನಪಟ್ಟಣಕ್ಕೆ ಸಿಕ್ಕಿದೆ. ಕ್ಷೇತ್ರಕ್ಕೆ ಸಿಕ್ಕಿರುವ ಎಲ್ಲಾ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು. ಚನ್ನಪಟ್ಟಣ ಉಪಚುನಾವಣೆಗೆ ಮುಂಚಿತವಾಗಿ ಸುಮಾರು ರೂ.500 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ ಒಂದಷ್ಟು ಕೆಲಸಗಳು ನೆನೆಗುದಿಗೆ ಬಿದ್ದಿದ್ದವು. ಯಾವ ಕಾರಣಕ್ಕೆ ಕಾಮಗಾರಿಗಳು ಹಿಂದುಳಿದಿವೆ ಎಂದು ಪರಿಶೀಲನೆ ಮಾಡಲಾಯಿತು ಎಂದರು.

ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಕ್ಷೇತ್ರಕ್ಕೆ ಬರಬೇಕಾದ ಅನುದಾನ ಸೇರಿದಂತೆ ಇತರೇ ಅಭಿವೃದ್ಧಿ ವಿಚಾರಗಳ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. 2010 ರಿಂದಲೂ ಅರ್ಚಕರಹಳ್ಳಿ, ಸುಣ್ಣಘಟ್ಟ, ಜಿಗಣೇನಹಳ್ಳಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಪ್ರಯೋಜನ ಪಡೆದವರು ಒಂದು ಚದರ ಅಡಿಗೆ ರೂ.200 ಪಾವತಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದಷ್ಟು ಜನರು ಮಾತ್ರ ಉಪಯೋಗ ಪಡೆದಿದ್ದು ಎಲ್ಲರೂ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಅಧಿಕಾರಿಗಳ ಬಳಿ ತಾಂತ್ರಿಕ ಕಾರಣಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಉಂಟಾಗಿರುವ ತೊಂದರೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಇತರೇ ವಿಚಾರಗಳನ್ನು ಕೆಡಿಪಿ ಸಭೆಯಲ್ಲಿ ಚಿಂತನೆ ಮಾಡಲಾಗುವುದು" ಎಂದು ಹೇಳಿದರು.

ಈ ಹಿಂದೆ ಸಾರ್ವಜನಿಕರು ನೀಡಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇವಸ್ಥಾನಕ್ಕೆ ಅನುದಾನ ಸೇರಿದಂತೆ ವೈಯಕ್ತಿಕ ಅರ್ಜಿಗಳನ್ನೂ ವಿಲೇವಾರಿ ಮಾಡಲಾಗುತ್ತಿದೆ. 5 ಸಾವಿರ ಮನೆ ಮಂಜೂರಾಗಿದೆ.‌ 2500 ಅರ್ಜಿಗಳು ಬಂದಿದ್ದು ಇನ್ನೂ 2,500 ಮನೆಗಳು ಉಳಿದುಕೊಂಡಿವೆ. ವಸತಿ ಸಚಿವರಾದ ಜಮೀರ್ ಅವರು ಅಪಾರ್ಟ್ ಮೆಂಟ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಚುನಾವಣೆ ಸಮಯದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಪಟ್ಟಿ ಹಾಕಿಕೊಂಡು ಈಡೇರಿಸುತ್ತೇವೆ ಎಂದು ಹೇಳಿದರು.

ನಾನು ಏನೂ ಮಾಡಿಲ್ಲ, ಎಲ್ಲಾ ಅವರದ್ದೇ

ರಾಮನಗರ ಜಿಲ್ಲೆಗೆ ತಂದಿರುವ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ನಾನು ಮಾಡಿರುವುದು ಎಂದು ಹೇಳುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಾಗೂ ಯೋಗೇಶ್ವರ್ ಏನೂ ಕೆಲಸ ಮಾಡಿಲ್ಲ,‌ ಎಲ್ಲಾ ಅವರದ್ದೇ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ವ್ಯಂಗ್ಯವಾಡಿದರು.

ಆಲೋಚನೆಗಿಂತ ಎರಡು ಪಟ್ಟು ಪರಿಹಾರ

ಬಿಡದಿ ಟೌನ್ ಶಿಪ್ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಇದನ್ನು ಮಾಡಿದ್ದಲ್ಲ. ಬಿಡದಿ ಸೇರಿದಂತೆ ಇತರೇ ಟೌನ್ ಶಿಪ್ ಗಳ ನೋಟಿಫಿಕೇಷನ್ ಮಾಡಿದವರು ಕುಮಾರಸ್ವಾಮಿ. ಅವರೆ ಡಿ ನೋಟಿಫಿಕೇಷನ್ ಮಾಡಬಹುದಿತ್ತು, ನಾವು ಈಗ ಅದನ್ನು ಮಾಡಲು ಹೋಗುವುದಿಲ್ಲ. ನಮ್ಮ ಜಿಲ್ಲೆಯ ಜನ ಆಸ್ತಿ ಕಳೆದುಕೊಳ್ಳುತ್ತಾರೆ‌. ಆದರೆ ಅವರು ಏನು ಆಲೋಚನೆ ಮಾಡಿದ್ದಾರೋ ಅದಕ್ಕಿಂತ ಎರಡು, ಮೂರು ಪಟ್ಟು ಬೆಲೆ ಸಿಗುವಂತಹ ಕೆಲಸ ನಾನು ಮಾಡುತ್ತೇನೆ. ಜಯನಗರ, ಸದಾಶಿವ ನಗರ ಮಾದರಿ ಎಂದು ಹೇಳುತ್ತಾರಲ್ಲ. ಅದಕ್ಕಿಂತ ಒಳ್ಳೇ ಪರಿಸರ ಸೃಷ್ಟಿ ಮಾಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಸಂಸದರು ಹಾಗೂ ಎಚ್.ಡಿ.ದೇವೇಗೌಡರು ಈ ಯೋಜನೆಯನ್ನು ಕೈ ಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ ಕೆ ಶಿವಕುಮಾರ್‌, ಅವರು ಏನು ಬೇಕಾದರೂ ಮಾಡಿಸಿಕೊಳ್ಳಲಿ. ಸಿದ್ದರಾಮಯ್ಯ ಅವರಿಗೂ ನನಗೂ ಇದನ್ನು ಕೈ ಬಿಡುವ ಹಕ್ಕಿಲ್ಲ. ನಾನು ಇರುವ ತನಕ ಇದನ್ನು ಪ್ರಗತಿ ಮಾಡುತ್ತೇವೆ. ಇದನ್ನು ಡಿ ನೋಟಿಫಿಕೇಷನ್ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಯೋಜನೆ ವಿರೋಧಿಸಿ ರೈತರ ಹೋರಾಟದ ಬಗ್ಗೆ ಮಾತನಾಡಿ, ಹೋರಾಟ ಮಾಡಲಿ. ಹೋರಾಟ ಮಾಡುವುದನ್ನು ತಪ್ಪು ಎನ್ನಲು ಆಗುವುದಿಲ್ಲ. ಜಾಸ್ತಿ ಪರಿಹಾರ ಕೇಳಿದರೆ ತಪ್ಪೇನಿಲ್ಲ. ಅವರ ಮಕ್ಕಳ ಕಾಲಕ್ಕೆ ಡಿ.ಕೆ.ಶಿವಕುಮಾರ್ ಒಳ್ಳೇ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಅರ್ಥವಾಗುತ್ತದೆ. ರಾಮನಗರಕ್ಕೆ ಬಂದು ರೈತರ ದುಃಖ, ದುಮ್ಮಾನ, ನೋವು ನಲಿವು ಕೇಳುತ್ತೇನೆ ಎಂದು ಡಿ ಕೆ ಶಿವಕುಮಾರ್‌ ಹೇಳಿದರು. ಇನ್ನೂ ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣಕ್ಕೆ ಮುಹೂರ್ತ ನಿಗಧಿ ಮಾಡುತ್ತಿದ್ದೇನೆ ಎಂದರು.

ಈ ವರ್ಷದ ಡಿಸೆಂಬರ್ ವೇಳೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ,‌ ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪೂರ್ಣಗೊಳಿಸಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ರೂ.540 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಗೆ ಕುಡಿಯುವ ನೀರು ಒದಗಿಸುತ್ತೇವೆ ಎಂದು ಚನ್ನಪಟ್ಟಣ ಉಪಚುನಾವಣೆ ವೇಳೆ ಮಾತುಕೊಟ್ಟಿದ್ದೆವು. ಈ ಮಾತಿಗೆ ನಾವು ಬದ್ಧರಾಗಿದ್ದೇವೆ. ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗೆ ಚಾಲನೆ ನೀಡಲಾಯಿತು. ಆದರೂ ಏಕೆ ವಿಳಂಬವಾಗುತ್ತಿದೆ ಎಂದು ಪರಿಶೀಲನೆ ನಡೆಸಲು ಬಂದಿದ್ದೇನೆ. ಅತ್ಯಂತ ಕಡಿಮೆ ಮೊತ್ತದಲ್ಲಿ 3.30 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದರು.

'ಏಕೆ ಕೆಲಸ ವಿಳಂಬವಾಗುತ್ತಿದೆ, ಏನಾದರೂ ಅಡೆತಡೆಗಳಿವೆಯೇ' ಎಂದು ಅಧಿಕಾರಿಗಳು, ಯೋಜನೆಯ ಕಾಮಗಾರಿ ನಡೆಸುತ್ತಿರುವ ಹೈದರಾಬಾದಿನ ಮೆಘಾ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಗಳ ಬಳಿ ಮಾಹಿತಿ ತಿಳಿದುಕೊಂಡರು. ಯೋಜನೆಯ ಪ್ರಗತಿ ಕುರಿತು ಸಮಗ್ರವಾದ ವಿವರಗಳನ್ನು ಪಡೆದರು. ಇದಾದ ನಂತರ ಇಗ್ಗಲೂರು ಬ್ಯಾರೇಜ್ ವರೆಗೆ ನೀರು ಹರಿಸಲು ಕೊರೆಯುತ್ತಿರುವ ಸುರಂಗ ಹಾಗೂ ಅದರ ಲೈನಿಂಗ್ ಕಾಮಗಾರಿಯ ಗುಣಮಟ್ಟವನ್ನು ನಿಕಟಪೂರ್ವ ಸಂಸದರಾದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೆಶ್ವರ್, ಕದಲೂರು ಉದಯ್, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್‌ ದಾಸ್ ಜೊತೆ ವೀಕ್ಷಣೆ ಮಾಡಿದರು.

ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ, "ಅಗತ್ಯಕ್ಕೆ ತಕ್ಕಂತೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಯೋಜನೆಗೆ ಭೂಮಿ ನೀಡಿ ಸಹಕಾರ ನೀಡಿದ ರೈತರಿಗೆ ಉತ್ತಮ ಪರಿಹಾರ ನೀಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಳ ಸೇರಿದಂತೆ ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ತಪ್ಪಲಿದೆ" ಎಂದು ಹೇಳಿದರು.

ಮಳೆಯ ಅಭಾವದ ಕಾರಣಕ್ಕೆ ಹಲವಾರು ವರ್ಷಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಸುಮಾರು 10.82 ಲಕ್ಷ ಜನರಿಗೆ ಹಾಗೂ 9.03 ಲಕ್ಷ ಜಾನುವಾರುಗಳಿಗೆ ಈ ಕುಡಿಯುವ ನೀರಿನ ಯೋಜನೆಯಿಂದ ಲಾಭವಾಗಲಿದೆ. ರೂ.540 ಕೋಟಿ ವೆಚ್ಚದಲ್ಲಿ ಈ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ‌. ಮಳವಳ್ಳಿಯ ಬೆಳಕವಾಡಿ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸತ್ತೇಗಾಲ ಅಣೆಕಟ್ಟಿನಿಂದ 220 ಕ್ಯೂಸೆಕ್ಸ್ ನೀರನ್ನು 180 ದಿನಗಳ ಕಾಲ ಇಗ್ಗಲೂರು ಬ್ಯಾರೇಜಿಗೆ ಹರಿಸಲಾಗುತ್ತದೆ.

ಸತ್ತೇಗಾಲ ಅಣೆಕಟ್ಟಿನಿಂದ ಇಗ್ಗಲೂರು ಬ್ಯಾರೇಜ್ ತನಕ ಸುಮಾರು ಸುಮಾರು 25.40 ಕಿ.ಮೀ ಉದ್ದ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಹರಿಸುತ್ತಿರುವುದು ಈ ಯೋಜನೆಯ ವಿಶೇಷ. 12.5 ಕಿ.ಮೀ ಉದ್ದದ ವರೆಗೆ ಸುರಂಗ ಮಾರ್ಗ ನಂತರ 13.35 ಕಿ.ಮೀ ಉದ್ದ ಪೈಪ್ ಲೈನ್ ಇರಲಿದೆ. ಈ ಸುರಂಗ ಮಾರ್ಗವು 4 ಮೀ ಸುತ್ತಳತೆ ಹೊಂದಿದ್ದು 'ಡಿ' ಆಕಾರದಲ್ಲಿ ಇರಲಿದೆ.

ನಂತರ ಏತ ನೀರಾವರಿ ಮೂಲಕ ಇಗ್ಗಲೂರು ಬ್ಯಾರೇಜ್ ನಿಂದ ಮೊಗೇನಹಳ್ಳಿ ಕೆರೆಗೆ, ಈ ಕೆರೆಯಿಂದ ಕಣ್ವ ಜಲಾಶಯ‌, ನಂತರ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯಕ್ಕೆ ನೀರು ತುಂಬಿಸಲಾಗುವುದು. ಪ್ರಸ್ತುತ ಸುಮಾರು 11.33 ಕಿ.ಮೀ ವರೆಗೆ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದ್ದು ಪ್ರಸ್ತುತ ಲೈನಿಂಗ್ ಕಾಮಗಾರಿ ನಡೆಯುತ್ತಿದೆ. 670 ಮೀ ನಷ್ಟು ಸುರಂಗ ಕೊರೆಯುವ ಕಾಮಗಾರಿ ಬಾಕಿಯಿದೆ. ಸುರಂಗ ಮಾರ್ಗದ 4.15 ಮೀ ನಷ್ಟು ಸಿ.ಸಿ ಲೈನಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯಲ್ಲಿ 13.35 ಕಿ.ಮೀ ಉದ್ದದ ಪೈಪ್ ಲೈನ್ ಇದ್ದು. ಇದರಲ್ಲಿ 5.5 ಕಿ.ಮೀ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+