ಶೀಘ್ರದಲ್ಲೇ ಕೊಡಗಿನಲ್ಲಿ 13 ವಿದ್ಯುತ್ ಉಪಕೇಂದ್ರ ಸ್ಥಾಪನೆ: ಸಚಿವ ಕೆ.ಜೆ.ಜಾರ್ಜ್
ಮಡಿಕೇರಿ, ನವೆಂಬರ್ 16: ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ತಿಳಿಸಿದ್ದಾರೆ. ಕೊಡಗು ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡ ಸಚಿವರು, ವಿವಿಧ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ 208 ಕೋಟಿ ರೂಪಾಯಿ ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ಸೋಮವಾರಪೇಟೆ, ಮಾದಾಪುರ, ಮೂರ್ನಾಡು, ಹುದಿಕೇರಿ, ಬಾಳೆಲೆ, ಸಿದ್ದಾಪುರ, ಕೂಡಿಗೆ, ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಕಾಟಕೇರಿ, ಕಳತ್ಮಾಡು, ಮರುಗೋಡು ಕೇಂದ್ರಗಳಲ್ಲಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಮುಂದಾಗಲಾಗಿದೆ. ಆ ನಿಟ್ಟಿಲ್ಲಿ ಈಗಾಗಲೇ ಹಲವು ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದರು.

ಜಿಲ್ಲೆಯ ಹಾಡಿಗಳು ಸೇರಿದಂತೆ ಎಲ್ಲಾ ಕುಗ್ರಾಮಗಳಿಗೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಸೆಸ್ಕ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುವಂತೆ ಸಚಿವರು ಸೂಚಿಸಿದರು.
ಸರ್ಕಾರ ವಿವಿಧ ಕಡೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಲು ಮುಂದಾಗಿದೆ. ವಿದ್ಯುತ್ ಉಪ ಕೇಂದ್ರಗಳು ಎಲ್ಲೆಲ್ಲಿ ಅಗತ್ಯವಿದೆ. ಅಂತಹ ಕಡೆಗಳಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಮುಂದಾಗಲಾಗುವುದು. ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು. ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೋಲಾರ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 636 ಮಂಜೂರಾದ ಹುದ್ದೆಗಳಿದ್ದು, 242 ಮಂದಿ ಕಾರ್ಯನಿರ್ವಹಿಸುತಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಕ್ರಮವಹಿಸಲಾಗುವುದು. ಅಲ್ಲದೇ, ಗೃಹಜ್ಯೋತಿ ಯೋಜನೆಯು ರಾಜ್ಯಾದ್ಯಂತ ಉತ್ತಮವಾಗಿ ನಡೆಯುತ್ತಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 1,56,022 ಕುಟುಂಬಗಳು ಹೆಸರು ನೋಂದಣಿ ಮಾಡಿದ್ದು, ಶೇ.99.59 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು 6.9 ಕೋಟಿ ಸಹಾಯಧನ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುದಿಕೇರಿ, ಸಿದ್ದಾಪುರ, ಬಾಳೆಲೆಯಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ಹಾಗೆಯೇ ಸಂಪಾಜೆ, ಭಾಗಮಂಡಲ ಭಾಗದಲ್ಲಿಯೂ ಸಹ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಮುಂದಾಗಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಇಲಾಖೆಯ ಅಧಿಕಾರಿ, ಸಂಪಾಜೆ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಅರಣ್ಯವಿರುವುದರಿಂದ 33 ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು 33 ಕೆ.ವಿ.ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುವುದರಿಂದ ಸಮರ್ಪಕವಾಗಿ ವಿದ್ಯುತ್ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ 66 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು, ಸದ್ಯ ಈಗಾಗಲೇ ಇರುವ ಪ್ರಸ್ತಾವನೆಯಂತೆ 33 ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ನಿರ್ಮಿಸಲಿ, ನಂತರ ಮುಂದಿನ ಹಂತದಲ್ಲಿ 66 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ನಿರ್ಮಿಸಲು ಪ್ರಯತ್ನಿಸಬಹುದು ಎಂದರು. ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು. ಹಾಗೆಯೇ ಹಾಡಿಗಳು ಸೇರಿದಂತೆ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಲಾಗುತ್ತದೆ ಎಂದು ಹೇಳಿದರು.












Click it and Unblock the Notifications