ಸೆಪ್ಟೆಂಬರ್ 5ರಿಂದ ಶಾಲೆಗಳಲ್ಲಿ ಸಂವಿಧಾನ ಪ್ರಸ್ತಾವನೆ ಓದು ಜಾರಿ: ಸಚಿವ ಮಧು ಬಂಗಾರಪ್ಪ
ಧಾರವಾಡ, ಆಗಸ್ಟ್ 28: ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಸಂವಿಧಾನ ಓದುವುದನ್ನು ಕಡ್ಡಾಯ ಮಾಡಲು ಚಿಂತಿಸಿದ್ದ ರಾಜ್ಯ ಸರ್ಕಾರ ಈಗ ಸೆಪ್ಟೆಂಬರ್ 5ರಿಂದ ಅದನ್ನು ಅನುಷ್ಟಾನಕ್ಕೆ ತರಲು ಮುಂದಾಗಿದೆ.
ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಕಡ್ಡಾಯವಾಗಿ ಓದುವ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 5ರಿಂದ ಶಿಕ್ಷಕರ ದಿನ ಈ ಕಾರ್ಯಕ್ರಮ ಅನುಷ್ಠಾನವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಧಾರವಾಡದ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ನಡಿಗೆ ಹಸಿರಿನ ಕಡೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರತಿದಿನ ಕಡ್ಡಾಯವಾಗಿ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಆದೇಶ ಇನ್ನು ಎರಡು ದಿನಗಳಲ್ಲಿ ಹೊರಬೀಳಲಿದೆ ಎಂದರು.
ದೇಶದಲ್ಲಿನ ಪ್ರಜೆಗಳೆಲ್ಲರೂ ಒಟ್ಟಾಗಿ ಬಾಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನ ಪ್ರಸ್ತಾವನೆಯನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂಬುದು ಈ ಕಾರ್ಯಕ್ರಮ ಆಶಯವಾಗಿದೆ. ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ವರ್ಷ 50 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ.
ಶಾಲೆಗಳಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವನೆ ನಂತರ ಗಿಡದ ಬುಡದಲ್ಲಿ ಆ ತಟ್ಟೆಯ ತೊಳೆಯುವಂತೆ ಮಾಡಲು ಉದ್ದೇಶಿಸಿದ್ದೇವೆ. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಪರಿಸರ ಪ್ರೇಮ ಮೈಗೂಡಿಸಿಕೊಳ್ಳಬೇಕು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಕೆಲವು ಸಮಸ್ಯೆಗಳು ಇವೆ. ಕೆಲವೆಡೆ ಶಾಲಾ ಕಟ್ಟಡ ಸಮಸ್ಯೆ, ಶಿಕ್ಷಕರ ಕೊರತೆ ಮೊದಲಾದ ಸಮಸ್ಯೆಗಳು ಇವೆ. ಇನ್ನು ಎರಡು ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಕಳೆದ ಜೂನ್‌ನಲ್ಲಿ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ ಮಾಡಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರದ ಬಗ್ಗೆ ತಿಳಿಸಿದ್ದರು.
ಶಾಲೆ, ಕಾಲೇಜು, ವಿವಿಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗುತ್ತದೆ. ಸರ್ಕಾರಿ, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಓದಬೇಕು. ಇದು ದೇಶದ ಜನರ ನೈತಿಕ ಮಟ್ಟವನ್ನು ಹೆಚ್ಚಿಸುತ್ತದೆ. ಆ ಕಾರಣದಿಂದ ವಿದ್ಯಾರ್ಥಿಗಳಿಗೆ ನೈತಿಕ ಜವಾಬ್ದಾರಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಲಿ ಎಂಬ ಕಾರಣಕ್ಕೆ ಪ್ರತಿ ಶಾಲೆಗಳಲ್ಲೂ ಸಂವಿಧಾನ ಓದಬೇಕು ಎಂದು ಹೇಳಿದ್ದರು.
1949ರಲ್ಲಿ ನಾವೆಲ್ಲರೂ ಸಂವಿಧಾನ ಒಪ್ಪಿದ್ದೇವೆ. ಅದರಂತೆ ನಾವು ಪಾಲಿಸುತ್ತಾ ಬಂದಿದ್ದೇವೆ. ಸಂವಿಧಾನ ದೇಶದ 144 ಕೋಟಿ ಜನರ ಹಕ್ಕು ರಕ್ಷಿಸುತ್ತಿದೆ. ಎಲ್ಲಾ ಧರ್ಮಗಳು ಆಚಾರ, ವಿಚಾರಕ್ಕೆ ಅವಕಾಶವಿದೆ. ಸಹೋದರತ್ವಕ್ಕೆ ಒತ್ತು ನೀಡಿದೆ. ಸಂವಿಧಾನ ಮೂಲ ರಚನೆ ಉದ್ದೇಶ ಒಂದೇ ಇದೆ. ಆ ಕಾರಣ ನಾವು ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಬೇಕು. ಸರ್ಕಾರಿ ಕಚೇರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಹಾಕಬೇಕು ಎಂದು ಹೇಳಿದ್ದರು.












Click it and Unblock the Notifications