ರಾಜ್ಯ ಸರ್ಕಾರದ ವಿರುದ್ಧವೇ ಬಾಂಬ್ ಸಿಡಿಸಿದ ಪ್ರಭಾವಿ ಕಾಂಗ್ರೆಸ್ ಶಾಸಕ!
ರಾಜ್ಯ ಸರ್ಕಾರಕ್ಕೆ ಟೈಮ್ ಸರಿ ಇಲ್ಲ ಅನಿಸುತ್ತೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಏಕಕಾಲಕ್ಕೆ ಮುಗಿ ಬೀಳುತ್ತಿವೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರದ ಶಾಸಕರು ಹಾಗೂ ಸಚಿವರೇ ತಿರುಗಿ ಬಿದಿದ್ದಾರೆ. ರಾಜ್ಯದಲ್ಲಿ ಮುಡಾ ಹಗರಣ ಜೋರಾದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎನ್ನುವ ಆರೋಗಳು ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಶಾಸಕರೇ ಸರ್ಕಾರದಿಂದ ಹೊಸ ಯೋಜನೆಗಳೇ ಬರ್ತಿಲ್ಲ ಕಣ್ರಿ ಅಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆಡಳಿತ ಪಕ್ಷದ ನಾಯಕರೇ ಮಾತನಾಡಿರುವುದು ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರವನ್ನು ಕೊಟ್ಟಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹಲವು ವಿಘ್ನಗಳು ಎದುರಾಗುತ್ತಲ್ಲೇ ಇವೆ. ಇದೀಗ ಅವರದ್ದೇ ಸರ್ಕಾರದ ಶಾಸಕರು ಕಾಂಗ್ರೆಸ್‌ಗೆ ಛೀಮಾರಿ ಹಾಕಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಹೊಸ ಯೋಜನೆಗಳಿಲ್ಲ. ರೈತರ ಪರ ಯಾವುದೇ ಯೋಜನೆಗಳು ಬರ್ತಿಲ್ಲ.

ರೈತರು ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಮ್ಮ ಸರ್ಕಾರದ ವಿರುದ್ಧವೇ ಕಾಂಗ್ರೆಸ್‌ನ ಪ್ರಭಾವಿ ಶಾಸಕ ರಾಜು ಕಾಗೆ ತಿರುಗಿ ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ತಾವಂಶಿ ಗ್ರಾಮದಲ್ಲಿ ಶುಕ್ರವಾರ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಶಾಸಕ ರಾಜು ಕಾಗೆ ಅವರು ಕಾಗವಾಡ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ರಾಜು ಕಾಗೆ ಅವರು ಶುಕ್ರವಾರ ಮಾತನಾಡಿರುವ ಮಾತುಗಳು ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೇ ನೀವೇನು ತಿಂತಿರೀ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಬಳಿ ರೊಕ್ಕ, ಬಂಗಾರ ಬೆಳ್ಳಿ ಸಾಕಷ್ಟು ಇರಬಹುದು, ಆದ್ರೆ ಅದನ್ನ ತಿನ್ನೋಕಾಗುತ್ತಾ. ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ.

ರೈತರು ಬದುಕಿದ್ರೆ ಮಾತ್ರ ಈ ದೇಶ ಪ್ರಗತಿ ಹೊಂದಲು ಸಾಧ್ಯವಿದೆ. ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನದ ಬಾಂಬ್ ಸಿಡಿಸಿದ್ದಾರೆ. ಇದೇ ತರ ಮುಂದುವರಿದರೆ ವಿಧಾನಸೌಧದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಒಬ್ಬ ಮಂತ್ರಿಗೆ ಹೇಳಿದೆ. ನಿನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತಿಯಾ, ನಿನ್ನ ಕೆಲಸ ಮಾಡ್ತಿವಿ ಅಂತ ಹೇಳಿದ ಮಂತ್ರಿಗಳಿದ್ದಾರೆ ಎಂದಿದ್ದಾರೆ.
ಅನುದಾನ ನೀಡದ ಸ್ವಪಕ್ಷೀಯ ಸಚಿವರ ವಿರುದ್ಧ ರಾಜು ಕಾಗೆ ಗರಂ ಆಗಿದ್ದಾರೆ. ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಚೈನಿ(ಮೋಜು, ಮಸ್ತಿ) ಮಾಡ್ತಿಲ್ಲ. ನಾನು ಸಹ ರೈತರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡ್ತಿದ್ದೇನೆ. ಆದರೆ, ಸರ್ಕಾರದಲ್ಲಿ ಇರುವ ಕೆಲವರು ನಮಗೆ ಸ್ಪಂದಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಅಸಮಾಧಾನ ಸ್ಫೋಟಿಸಿದ್ದಾರೆ.
ಶಾಸಕ ಸ್ಥಾನದಿಂದ ಏನು ಆಗೋದಿದೆ ಹೇಳ್ರಿ, ಬೇಕಾದ್ರೆ ನಾನು ನಾಳೆ ಹೋಗಿ ರಾಜೀನಾಮೆ ಕೊಡ್ತೀನಿ. ಯಾವ ಪುರುಷಾರ್ಥಕ್ಕಾಗಿ ಶಾಸಕರಾಗಿರಬೇಕು ಏತಕ್ಕಾಗಿ ನಾವು ಅಧಿಕಾರದಲ್ಲಿಬೇಕು. ಆಡಳಿತ ಪಕ್ಷದ ಶಾಸಕನಾಗಿ ನಿಮ್ಮ ಮುಂದೆ ಈ ರೀತಿ ಅಸಹಾಯಕತೆಯಿಂದ ಹೇಳ್ತಾ ಇದ್ದೀನಿ ಎಂದರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂದು ಅರ್ಥ ಮಾಡ್ಕೊಳ್ಳಿ ಎಂದಿದ್ದಾರೆ, ಅಲ್ಲದೇ ಕಾಂಗ್ರೆಸ್ ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ, ಮುಂದಿನ ಸಲ ನನಗೆ ಶಾಸಕನಾಗುವುದು ಬೇಕಾಗಿಲ್ಲ. ಕ್ಷೇತ್ರದ ಜನತೆ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.












Click it and Unblock the Notifications