ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕಾಂಗ್ರೆಸ್‌ನಿಂದ ಉಚ್ಛಾಟನೆ
ಬೆಂಗಳೂರು, ಜುಲೈ 22 : ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಹಲವಾರು ಬಾರಿ ಶಾಸಕರು ಪಕ್ಷ ವಿರೋಧಿ ಹೇಳಿಕೆ ನೀಡಿ ಪಕ್ಷಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ನೇತೃತ್ವದ ಶಿಸ್ತು ಸಮಿತಿ ಮಂಗಳವಾರ ನಡೆಸಿದ ಸಭೆಯಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಉಚ್ಛಾಟಿಸುವ ಕೆಪಿಸಿಸಿ ಮಾಡಿದ್ದ ಶಿಫಾರಸಿನ ಕುರಿತು ಚರ್ಚೆ ನಡೆಸಿತ್ತು. ಪಕ್ಷದಿಂದ ಉಚ್ಛಾಟಿಸಲು ನಿರ್ಧಾರವನ್ನು ಕೈಗೊಂಡಿತ್ತು. ಈ ಬಗ್ಗೆ ಕೆಪಿಸಿಸಿಗೆ ನಿರ್ದೇಶನ ನೀಡಿತ್ತು. [ಪಕ್ಷದಿಂದ ನಡಹಳ್ಳಿ ಉಚ್ಛಾಟನೆ?]

ಶಿಸ್ತು ಸಮಿತಿ ನಿರ್ದೇಶನದ ಅನ್ವಯ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಬುಧವಾರ ಆದೇಶ ಹೊರಡಿಸಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಶಾಸಕಾಂಗ ಸಭೆಯಿಂದ ನಡಹಳ್ಳಿ ಅವರನ್ನು ಅಮಾನತು ಮಾಡಲಾಗಿತ್ತು. [ಪ್ರತ್ಯೇಕ ರಾಜ್ಯದ ಬೇಡಿಕೆ, ಉಲ್ಟಾ ಹೊಡೆದ ಶಾಸಕ ನಡಹಳ್ಳಿ]
ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದರು : ಎ.ಎಸ್.ಪಾಟೀಲ ನಡಹಳ್ಳಿ ಅವರು 'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು' ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಹೇಳಿಕೆ ಹಿಂಪಡೆಯುವಂತೆ ಪಕ್ಷ ನೀಡಿದ್ದ ನೋಟಿಸ್‌ಗೂ ಶಾಸಕರು ಉತ್ತರ ನೀಡಿರಲಿಲ್ಲ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಪ್ಪಾಜಿ ನಾಡಗೌಡ ಅವರು ಎ.ಎಸ್.ಪಾಟೀಲರನ್ನು ಅಮಾನತು ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಶಿಫಾರಸು ಮಾಡಿದ್ದರು. ಅದರಂತೆ ಅಮಾನತು ಮಾಡಲಾಗಿತ್ತು ಮತ್ತು ಪಕ್ಷದಿಂದ ಅಮಾನತು ಮಾಡುವಂತೆ ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿತ್ತು.
ಪಾಟೀಲರು ಮಾಡಿದ್ದೇನು? : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಹಲವು ಬಾರಿ ಪಕ್ಷದ ನಾಯಕರಿಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿದ್ದರು. 'ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣಿಸಿದೆ. ಆದ್ದರಿಂದ ಅದು ಪ್ರತ್ಯೇಕ ರಾಜ್ಯವಾಗಬೇಕು' ಎಂದು ಹೇಳಿಕೆ ನೀಡಿದ್ದರು.
ಬಿಬಿಎಂಪಿ ವಿಭಜನೆ ಕುರಿತು ಚರ್ಚಿಸಲು ಸರ್ಕಾರ ವಿಶೇಷ ವಿಧಾನಮಂಡಲ ಅಧಿವೇಶನ ಕರೆದಾಗ, 'ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ವಿಶೇಷ ಅಧಿವೇಶನ ನಡೆಸಿ ನಿರ್ಣಯ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದರು.
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಅವರು 36,231 ಮತಗಳನ್ನು ಪಡೆದು 2013ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಪಾಟೀಲರ ಎದುರು 28,135 ಮತಗಳನ್ನು ಪಡೆದಿದ್ದ ಬಿಜೆಪಿಯ ಸೋಮನಗೌಡ ಪಾಟೀಲ ಅವರು ಸೋಲು ಅನುಭವಿಸಿದ್ದರು.











Click it and Unblock the Notifications