ಬಡವರಿಗಾಗಿ ನೀಡುವ ಭರವಸೆಗಳನ್ನು ಜನರು ಪ್ರಶ್ನಿಸುವುದು ದುರದೃಷ್ಟಕರ: ಎಚ್‌ಕೆ ಪಾಟೀಲ್
ಬೆಂಗಳೂರು, ಮೇ. 02: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿವೆ. ಆದರೆ, ಒಂದು ಪಕ್ಷದ ಭರವಸೆಯನ್ನು ಮತ್ತೊಂದು ಪಕ್ಷ ಟೀಕಿಸುವುದು ಸಾಮಾನ್ಯವಾಗಿದೆ. ಮಂಗಳವಾರ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
"ತಮ್ಮ ಪಕ್ಷವು ಬಡವರಿಗಾಗಿ ನೀಡಿದ ಚುನಾವಣಾ ಭರವಸೆಗಳನ್ನು ಕೆಲವು ವರ್ಗಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರವಾಗಿದೆ. ಆದರೆ, ಶ್ರೀಮಂತರಿಗೆ ಸಾಲ ಮನ್ನಾ ಮಾಡುವುದನ್ನು ಇವರುಗಳು ಪ್ರಶ್ನಿಸದೆ ಇರುವುದು ದುರದೃಷ್ಟಕರ" ಎಂದು ಕಾಂಗ್ರೆಸ್‌ನ ಪ್ರಬಲ ನಾಯಕ ಎಚ್‌ಕೆ ಪಾಟೀಲ್ ಮಂಗಳವಾರ ಅಸಮಾಧಾನ ಹೊರಹಾಕಿದ್ದಾರೆ.

ಗದಗ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಸ್ಪರ್ಧಿಸಿರುವ ಎಚ್‌ಕೆ ಪಾಟೀಲ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಈ ಬಾರಿ ಪ್ರಚಾರದ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಮತ್ತು ಇದು ದೇಶದ ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿಸಲು ಒಳ್ಳೆಯದಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗದಗ ಜಿಲ್ಲೆಯ ನಾಲ್ಕೂ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ಮೂರು ವಿಧಾನಸಭಾ ಸ್ಥಾನಗಳನ್ನು (ಶಿರಹಟ್ಟಿ, ರೋಣ ಮತ್ತು ನರಗುಂದ) ಗೆದ್ದುಕೊಂಡಿದೆ. ಕಾಂಗ್ರೆಸ್ ಗದಗವನ್ನು ಉಳಿಸಿಕೊಂಡಿದೆ. ವಾಸ್ತವವಾಗಿ, ಗದಗ ಕ್ಷೇತ್ರವನ್ನು 47 ವರ್ಷಗಳಿಂದ ಪಾಟೀಲ ಕುಟುಂಬದವರು ಆಳಿದ್ದಾರೆ. ಪಾಟೀಲ್ ಕಾಂಗ್ರೆಸ್ ನ ಮಹಾರಾಷ್ಟ್ರದ ಉಸ್ತುವಾರಿಯೂ ಹೌದು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಹೇಗೆ ಪೂರೈಸಲು ಯೋಜಿಸುತ್ತಿದೆ ಎಂವ ಪ್ರಶ್ನೆಗೆ ಉತ್ತರಿಸಿರುವ ಅವರು, ''ಚುನಾವಣೆಯಲ್ಲಿ ಬಡವರಿಗೆ ಭರವಸೆ ನೀಡಿದಾಗ ಪ್ರತಿಯೊಬ್ಬರೂ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ದುರದೃಷ್ಟಕರ. 523 ಕೈಗಾರಿಕೆಗಳ 10 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ ಭಾರತ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದ್ದಿರಾ? ಎಂದು ಕಿಡಿಕಾರಿದ್ದಾರೆ.
ಶ್ರೀಮಂತರಿಗೆ ಸಾಲ ಮನ್ನಾ ಮಾಡಿದರೆ ಎಲ್ಲರೂ ಸುಮ್ಮನಿರುತ್ತಾರೆ ಆದರೆ ಬಡವರಿಗೆ ಯೋಜನೆಗಳನ್ನು ಘೋಷಿಸಿದರೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಬಡವರನ್ನು ಸಬಲೀಕರಣಗೊಳಿಸದೆ ಇಂತಹ ಯೋಜನೆಗಳ ಮೇಲೆ ಅವಲಂಬಿತರಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ನಾವು ಅವರಿಗೆ ಅಧಿಕಾರ ನೀಡಬೇಕೆಂದು ನಾನು ಒಪ್ಪುತ್ತೇನೆ. ಆದರೆ ಸ್ವಲ್ಪ ಸಮಯದವರೆಗೆ, ನಾವು ಅವರನ್ನು ಕೈಯಿಂದ ಹಿಡಿದುಕೊಳ್ಳಬೇಕು, ನಂತರ ಅವರ ಕಾಲುಗಳ ಮೇಲೆ ನಿಲ್ಲುವಂತೆ ಮಾಡಬೇಕು" ಎಂದಿದ್ದಾರೆ.
ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವುದು ದುರದೃಷ್ಟಕರ. ಇದು ನಮ್ಮ ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿಸಲು ಒಳ್ಳೆಯದಲ್ಲ. ರಾಜ್ಯದಲ್ಲಿ ಅನಾರೋಗ್ಯಕರ ಮಾತುಗಳು ಮತ್ತು ದುರಾಚಾರಗಳಿಂದ ಪ್ರಜಾಪ್ರಭುತ್ವ ದುರ್ಬಲಗೊಂಡಿದೆ ಎಂದಿದ್ದಾರೆ.
"ರಾಜಕೀಯ ವಾತಾವರಣ ಈಗ ಹದಗೆಟ್ಟಿದೆ, ನಾನು ಅನಗತ್ಯವಾಗಿ ಆಕ್ರಮಣಕಾರಿಯಾಗಿರುವುದನ್ನು ಇಷ್ಟಪಡುವುದಿಲ್ಲ. ನನ್ನ ಬೆಂಬಲಿಗರು ಮತ್ತು ಹಿತೈಷಿಗಳನ್ನು ವಿಶೇಷವಾಗಿ ಈ 8 ದಿನಗಳಲ್ಲಿ (ಮತದಾನಕ್ಕೆ) ಆಕರ್ಷಿಸುವ ಅಗತ್ಯವಿಲ್ಲ. ತಟಸ್ಥವಾಗಿರುವವರನ್ನು ಆಕರ್ಷಿಸುವ ಸಮಯವಿದು. ನಾವು ಅದನ್ನು ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಪಕ್ಷದ ಹಲವು ನಾಯಕರಂತೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಯಾರನ್ನು ಸಿಎಂ ಮಾಡಬೇಕೆಂಬುದನ್ನು ಅಂತಿಮವಾಗಿ ಹೈಕಮಾಂಡ್ ನಿರ್ಧರಿಸುತ್ತದೆ' ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು.
ಬಿಜೆಪಿಯ ಮಾಜಿ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ಪ್ರವೇಶದಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಪಾಟೀಲ್ ಹೇಳಿದರು. ಲಿಂಗಾಯತ ಪ್ರಾಬಲ್ಯದ ಮುಂಬೈ -ಕರ್ನಾಟಕ ಪ್ರದೇಶದಲ್ಲಿ ಫಲಿತಾಂಶ ಅಚ್ಚರಿ ಮೂಡಿಸಲಿದ್ದು, ಕಾಂಗ್ರೆಸ್ 56ರಲ್ಲಿ 36ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ನಾವು ಆರಾಮವಾಗಿ ಸರ್ಕಾರವನ್ನು ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಿರುವ ಅನಿಲ್ ಮೆಣಸಿನಕಾಯಿ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್‌ನ ಸಾಮಾಜಿಕ ಕಾರ್ಯಕರ್ತ, ಐಟಿ ಉದ್ಯಮಿ ಗೋವಿಂದೇಗೌಡ ಕಣದಲ್ಲಿದ್ದಾರೆ. 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಈ ಭಾಗದಲ್ಲಿ ಕಾಂಗ್ರೆಸ್ಮ ಬಿಜೆಪಿ ಮತ್ತು ಜೆಡಿಎಸ್ ನಡುವೆ ತ್ರಿಕೋನ ಪೈಪೋಟಿಯಿದೆ.












Click it and Unblock the Notifications