'Chembu' Advertisement: ಮೋದಿ ಸರ್ಕಾರದ ವಿರುದ್ಧ ಮತ್ತೊಂದು 'ಚೆಂಬು' ಜಾಹೀರಾತಿನ ದಾಳಿ ಮಾಡಿದ ಕಾಂಗ್ರೆಸ್
ಬೆಂಗಳೂರು ಏಪ್ರಿಲ್ 21: ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿ ವಿರುದ್ಧ 'ಚೊಂಬು' ಜಾಹೀರಾತು ದಾಳಿ ಮಾಡಿದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಇಂದೂ ಕೂಡ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದಾಳಿ ಮಾಡಿದೆ.
ಕಾಂಗ್ರೆಸ್ ತನ್ನ ಜಾಹೀರಾತಿನಲ್ಲಿ ತೆರಿಗೆ ವಿಚಾರವಾಗಿ ಮೋದಿ ಸರ್ಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ ಎಂದು ಪ್ರಕಟಿಸಿದೆ. ಮೋದಿ ಸರ್ಕಾರ ಕರ್ನಾಟಕದ ಜನತೆಗೆ ತೆರಿಗೆ ವಂಚನೆ ಮೂಲಕ ಚೊಂಬು ನೀಡುತ್ತಿದೆ. ಅದನ್ನು ಗೆಲ್ಲಿಸಬೇಡಿ, ಕಾಂಗ್ರೆಸ್ ಅನ್ನು ಗೆಲ್ಲಿಸಿ ಎಂದು ಹೇಳಿದೆ. ಹಾಗಾದರೆ ಇಂದಿನ ಕಾಂಗ್ರೆಸ್ ನೀಡಿದ ಜಾಹೀರಾತಿನಲ್ಲಿ ಏನಿದೆ-
''ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100ರಷ್ಟು ತೆರಿಗೆಯಲ್ಲಿ
ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ಮಾತ್ರ
ಈ ಅನ್ಯಾಯ ಎಲ್ಲಿಯವರೆಗೆ ಸಹಿಸಬೇಕು?
ಮೋದಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡೋಣ
ನನ್ನ ತೆರಿಗೆ ನನ್ನ ಹಕ್ಕು
ಬಿಜೆಪಿಯನ್ನು ಸೋಲಿಸೋಣ. ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ'' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಟಿಸಿದೆ.
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಪ್ರಬಲ ಪಕ್ಷಗಳ ವಾಕ್ಸಮರ ಜೋರಾಗಿದೆ. 'ಚೊಂಬು' ಜಾಹೀರಾತಿನ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಸರಣಿ ದಾಳಿ ನಡೆಸುತ್ತಿದ್ದರೆ, ಕಾಂಗ್ರೆಸ್ ಜಾಹೀರಾತಿನ ವಿರುದ್ಧ ಬಿಜೆಪಿ ಪ್ರತಿ ದಾಳಿಗಳನ್ನು ಮಾಡುತ್ತಿದೆ.

ಶುಕ್ರವಾರವೂ ಕಾಂಗ್ರೆಸ್ ಬಿಜೆಪಿ ವಿರುದ್ಧ 'ಚೊಂಬು' ಜಾಹೀರಾತನ್ನು ನೀಡಿತ್ತು. ಈ ಜಾಹೀರಾತಿ ಬಿಜೆಪಿ ಕೆಂಡವಾಗಿ ಪ್ರತಿಕ್ರಿಯೇ ನೀಡಿತ್ತು. ಬಿಜೆಪಿ ನಾಯಕರ ಟ್ವಿಟ್ಟರ್ ಖಾತೆಗಳಲ್ಲಿ ಕಾಂಗ್ರೆಸ್ ಜಾಹೀರಾತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 'ಚೊಂಬು' ಕಾಂಗ್ರೆಸ್ ನೀಡಿದೆ ಅದನ್ನು 'ಅಕ್ಷಯ ಪಾತ್ರೆ'ಯನ್ನಾಗಿ ಮಾಡಿದವರು ನರೇಂದ್ರ ಮೋದಿ ಎಂದು ಬಿಜೆಪಿ ಟಾಂಗ್ ಕೊಟ್ಟಿತ್ತು.

ಏಪ್ರಿಲ್ 19ರಂದು ಬಿಡುಗಡೆ ಮಾಡಿದ 'ಚೊಂಬು' ಜಾಹೀರಾತು
ಶುಕ್ರವಾರ ಕಾಂಗ್ರೆಸ್ ಇದೇ ರೀತಿ ಜಾಹೀರಾತನ್ನು ನೀಡಿತ್ತು. ಪತ್ರಿಕೆಯಲ್ಲಿ 'ಚೊಂಬು' ಜಾಹೀರಾತು ನೀಡುವ ಮೂಲಕ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ನೇರ ದಾಳಿಗಿಳಿದಿತ್ತು. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು! ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ಮತಯಾಚನೆ ಮಾಡಿತ್ತು. ಹಾಗಾದರೆ ಕಾಂಗ್ರೆಸ್ ನೀಡಿದ ಮೊದಲ ಜಾಹೀರಾತಿನಲ್ಲಿ ಏನಿದೆ?
ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು!
* ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು
* ತೆರಿಗೆ ಹಂಚಿಕೆಯಲ್ಲಿ ಚೊಂಬು
* ರೈತರ ಆದಾಯ ಡಬಲ್ ಮಾಡುವ ಚೊಂಬು
* ಬರ/ನೆರೆ ಪರಿಹಾರದ ಚೊಂಬು
27 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು
ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು, ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ.. ಎಂದು ಜಾಹೀರಾತು ನೀಡಿತ್ತು.
ಬಿಜೆಪಿಗೆ ಸವಾಲೊಡ್ಡಿದ ಜಾಹೀರಾತುಗಳು
ಇದಕ್ಕೆ ಬಿಜೆಪಿ ಸಾಕಷ್ಟು ಪ್ರತಿಯುತ್ತರ ನೀಡುವ ಮೂಲಕ ಕಾಂಗ್ರೆಸ್ ಅನ್ನು ಟೀಕಿಸಿದೆ. ಆದರೆ ಕಾಂಗ್ರೆಸ್ ಜಾಹೀರಾತುಗಳು ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿವೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ತೆರಿಗೆ, ನಿರುದ್ಯೋಗ, ರೈತರ ಆದಾಯ ಹೆಚ್ಚಳ, ಖಾತೆಗೆ ಹಣ ಜಮಾ ಇಂತೆಲ್ಲಾ ವಿಷಯಗಳು ಬಿಜೆಪಿಗೆ ಚುನಾವಣೆ ಹೊಸ್ತಿಲಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿವೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳು ಜಾರಿಗೆ ತರಲಾಗಿದೆ. ಉಚಿತ ಬಸ್, ಮನೆ ಒಡತಿ ಖಾತೆಗೆ ಹಣ, ಉಚಿತ ವಿದ್ಯುತ್ ಹೀಗೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ಜಾರಿಗೆ ಬಂದು ಮತದಾರರನ್ನು ಸೆಳೆದಿವೆ. ಇದು ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲಲು ಹೂಡಿದ ಬಹುದೊಡ್ಡ ಅಸ್ತ್ರ. ಮಾತ್ರವಲ್ಲದೆ ಮೋದಿ ಸರ್ಕಾರ ನೀಡಿದ್ದ ಭರವಸೆಗಳು ಈಡೇರದೇ ಇರುವುದಕ್ಕೆ ಕಾಂಗ್ರೆಸ್ ನೇರ ವಾಗ್ದಾಳಿಗೆ ಮುಂದಾಗಿದೆ. ಇದು ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಈ ಜಾಹೀರಾತುಗಳು ಸದ್ಯ ಮತದಾರರ ಮನೆ ತಲುಪುತ್ತಿದ್ದು, ಮತದಾರರ ನಿರ್ಧಾರ ಏನು ಎನ್ನುವುದನ್ನು ತಿಳಿಯಲು ಚುನಾವಣೆ ಮುಗಿಯುವವರೆಗೂ ಕಾಯಬೇಕಿದೆ.












Click it and Unblock the Notifications