ವಯಸ್ಸು 26, ಕೇಸ್ 40; ಬಿಜೆಪಿ ಅಭ್ಯರ್ಥಿ ವಿರುದ್ಧ ಒಂದಾದ ವಿಪಕ್ಷಗಳು!
ಕಲಬುರಗಿ, ಏಪ್ರಿಲ್ 26; ಆತನ ವಯಸ್ಸು 26, ದಾಖಲಾಗಿರುವ ಪ್ರಕರಣಗಳು 40, ಆಸ್ತಿ 29 ಕೋಟಿ, ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಫೇಲ್, ಅಂಗನವಾಡಿ ಮಕ್ಕಳಿಗೆ ಹಂಚುವ ಹಾಲಿನ ಪುಡಿ, ಪಡಿತರ ಅಕ್ಕಿ ಕಳ್ಳ ಸಾಗಣೆ ಆರೋಪ ಎದುರಿಸುತ್ತಿರುವ ಈತ ಈ ಬಾರಿಯ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ.
ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್. ಬಿಜೆಪಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅಸಮಾಧಾನ ಹೊರಹಾಕಿವೆ. ಇಂತಹ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕೆ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿವೆ.

ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ. ಇವರ ಎದುರಾಳಿಯಾಗಿ ಮಣಿಕಂಠ ರಾಠೋಡ್‌ರನ್ನು ಬಿಜೆಪಿ ಕಣಕ್ಕಿಳಿಸಿದೆ. ರೌಡಿ ಶೀಟರ್ ಆಗಿರುವ ಅಭ್ಯರ್ಥಿ ವಿರುದ್ಧ 40 ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಎಂತಹ ಅಭ್ಯರ್ಥಿ ಆಯ್ಕೆ?; ಕರ್ನಾಟಕ ಕಾಂಗ್ರೆಸ್ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ವಿರುದ್ಧ ಟ್ವೀಟ್ ಮಾಡಿದೆ. 'ಬಿಜೆಪಿಗೆ ಅರ್ಹವಾದ ಅಭ್ಯರ್ಥಿ ಸಿಕ್ಕಿದ್ದಾನೆ!. ಕಳ್ಳರಿಗೆ, ಸುಳ್ಳರಿಗೆ, 40% ಕಮಿಷನ್ ದರೋಡೆಕೋರರಿಗೆ ಮಾತ್ರ ಬಿಜೆಪಿಯಲ್ಲಿ ಜಾಗ. ಬಡವರ ಅಕ್ಕಿ ಕಳ್ಳ, ಅಂಗನವಾಡಿ ಮಕ್ಕಳ ಹಾಲಿನಪುಡಿಯ ಕಳ್ಳನ ಪರ ಪ್ರಧಾನಿ ಮತ ಕೇಳುವುದು ಈ ದೇಶಕ್ಕೆ ಕಳಂಕ. ನರೇಂದ್ರ ಮೋದಿ ಅವರು ಪ್ರಧಾನಿಯೋ ಅಥವಾ ಕಳ್ಳಕಾಕರ ಪ್ರತಿನಿಧಿಯೋ ಅರ್ಥವಾಗುತ್ತಿಲ್ಲ!' ಎಂದು ಬಿಜೆಪಿಗೆ ತಿರುಗೇಟು ನೀಡಿದೆ.

ಮಣಿಕಂಠ ರಾಠೋಡ್ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಒಂದಾಗಿವೆ. ಜೆಡಿಎಸ್ ಪಕ್ಷ ಟ್ವೀಟ್ ಮಾಡಿ, 'ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲಾ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿಗೆ ಸಲ್ಲಬೇಕು. ಬಡವರ ಅನ್ನವನ್ನು ಕದ್ದ, 40 ಪ್ರಕರಣಗಳಿರುವ ರೌಡಿಯ ಪರ ಪ್ರಚಾರ ಪ್ರಧಾನಿ ಮಾಡುವುದೆಂದರೆ ರಾಜ್ಯ ರಾಜಕೀಯದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ' ಎಂದು ಟೀಕೆ ಮಾಡಿದೆ.
'ಜೈಲಲ್ಲಿ ಇರಬೇಕಿದ್ದ ಆರೋಪಿಯನ್ನು ವಿಧಾನಸೌಧಕ್ಕೆ ಕಳುಹಿಸಲು ಬಿಜೆಪಿ ಟಿಕೆಟ್ ನೀಡಿದ್ದೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ. ಬಿಜೆಪಿಯಲ್ಲಿ ಇರುವ ಎಲ್ಲಾ ನಾಯಕರು ಜನ ಕಂಟಕರು, ಇದೀಗ ಅವಕಾಶ ಕೊಟ್ಟ ಹೊಸ ಮುಖಗಳು ನರಭಕ್ಷಕರು. ಇಲ್ಲಿಗೆ, ಉದಯವಾಯಿತು ಚೆಲುವ ಕನ್ನಡ ನಾಡು' ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಮಣಿಕಂಠ ರಾಠೋಡ್ ಕುರಿತು; 26 ವರ್ಷದ ಮಣಿಕಂಠ ರಾಠೋಡ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಅಭ್ಯರ್ಥಿ ವಿರುದ್ಧ 40 ಪ್ರಕರಣಗಳಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ, ಕೆಲವಕ್ಕೆ ಹೈಕೋರ್ಟ್ ತಡೆ ನೀಡಿದೆ. ಕರ್ನಾಟಕ ಮಾತ್ರವಲ್ಲ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.
ಕಾನೂನು ಬಾಹಿರವಾಗಿ ಪಡಿತರ ಅಕ್ಕಿ ಸಾಗಣೆ, ಅಂಗನವಾಡಿ ಮಕ್ಕಳಿಗೆ ಹಂಚುವ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣಗಳು ಸೇರಿವೆ. ಹೈದರಾಬಾದ್ ಕೋರ್ಟ್‌ನಲ್ಲಿಯೂ ಮಣಿಕಂಠ ರಾಠೋಡ್ ವಿರುದ್ಧ ಕೆಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವಾಗ ತಮ್ಮ ಬಳಿ 29 ಕೋಟಿ ರೂ. ಆಸ್ತಿ ಇದೆ ಎಂದು ಮಣಿಕಂಠ ರಾಠೋಡ್ ಘೋಷಣೆ ಮಾಡಿದ್ದಾರೆ. ಕೈಯಲ್ಲಿ 6.75 ಲಕ್ಷ ರೂ. ನಗದು ಇದೆ. 11.34 ಕೋಟಿ ಚರಾಸ್ತಿ ಮತ್ತು 17 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ಅವರು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. 15 ಕೋಟಿ ರೂ. ಸಾಲ ಇದೆ ಎಂದು ಹೇಳಿದ್ದಾರೆ.












Click it and Unblock the Notifications