ಅಮೂಲ್‌ಗಿರುವ ವಿರೋಧ, ತಮಿಳುನಾಡು, ಆಂಧ್ರದ ಹಾಲಿಗೆ ಏಕಿಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ
ಬೆಂಗಳೂರು, ಏಪ್ರಿಲ್ 10: ಅಮುಲ್ ವರ್ಸಸ್ ನಂದಿನಿ ( Amul vs Nandini ) ವಿವಾದಕ್ಕೆ ಸಂಬಂಧಿಸಿದ ರಾಜಕೀಯವು 'ನಕಲಿ' ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ವಿವಾದವನ್ನು ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬುದಾಗಿಯೂ ದಕ್ಷಿಣ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನ್ಯೂಸ್ 18 ( ಇಂಗ್ಲಿಷ್) ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, 'ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಭೀತಿ ಇದೆ. ಈ ಕಾರಣವಾಗಿ ಹತಾಶೆಗೊಂಡಿರುವ ಪ್ರತಿಪಕ್ಷಗಳು ನಕಲಿ ಮತ್ತು ಅಸ್ತಿತ್ವದಲ್ಲಿಲ್ಲದ ವಿಚಾರಗಳ ಬಗ್ಗೆ ರಾಜಕೀಯ ಮಾಡುತ್ತಿವೆ' ಎಂದು ಹೇಳಿದ್ದಾರೆ.

'ನಿಮಗೆ ಅಮೂಲ್‌ನಲ್ಲಿ ಸಮಸ್ಯೆ ಇದ್ದರೆ, ತಮಿಳುನಾಡಿನ ಆರೊಕ್ಯ, ಹೆರಿಟೇಜ್, ಆಂಧ್ರದ ತಿರುಮಲ ಹಾಗೂ ದೊಡ್ಲಾ ಹಾಲಿನ ಬ್ರಾಂಡ್‌ಗಳ ಬ್ರಾಂಡ್‌ಗಳೊಂದಿಗೆ ಸಹ ನಿಮಗೆ ಸಮಸ್ಯೆಗಳಿರಬೇಕು. ಅಮೂಲ್ ಅನ್ನು ಮಾತ್ರ ಏಕೆ ವಿರೋಧಿಸಬೇಕು?' ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಇದು ನಂದಿನಿಯ ಮೇಲಿನ ಪ್ರೀತಿ ಅಲ್ಲ. ಆದರೆ ಗುಜರಾತ್‌ನಿಂದ ಬಂದಿರುವ ಅಮೂಲ್ ಮೇಲಿನ ದ್ವೇಷ ಎಂದು ಕರ್ನಾಟಕದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಗುಜರಾತ್‌ನಿಂದ ಬಂದವರು. ಅವರ ಬಗ್ಗೆಯೂ ದ್ವೇಷ ಕಾರಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣದ ಸಂಸದರು ಹೇಳಿದ್ದಾರೆ.
ಕರ್ನಾಟಕದಲ್ಲಿ ದಶಕಗಳಿಂದ ಅಮೂಲ್ ಉತ್ಪನ್ನಗಳನ್ನು ನಿರ್ವಹಿಸುವ ಮತ್ತು ಮಾರಾಟ ಮಾಡುವ ಬ್ರ್ಯಾಂಡ್ ಆಗಿದೆ. ಪ್ರತಿಪಕ್ಷಗಳ ಆರೋಪದಂತೆ ಅಮೂಲ್ ಅನ್ನು ಕರ್ನಾಟಕಕ್ಕೆ ತರಲು ಇದು ಪಿತೂರಿ ಅಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಬೆಳವಣಿಗೆ ಮತ್ತು ಆರೋಗ್ಯವನ್ನು ಸುಧಾರಿಸಲು ಅವರು ಏನು ಮಾಡಿದ್ದಾರೆ? ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕದ ಜನತೆಗೆ ಉತ್ತರಿಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
2022 ರ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಕೆಎಂಎಫ್‌ನ ಮೆಗಾ ಡೈರಿ ಘಟಕವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಈ ವಿವಾದದ ಮೂಲವಾಗಿದೆ.
'ರಾಜ್ಯದ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಇರುವುದನ್ನು ಖಚಿತಪಡಿಸಿಕೊಳ್ಳಲು ಅಮೂಲ್ ಮತ್ತು ಕೆಎಂಎಫ್ ಒಟ್ಟಾಗಿ ಕೆಲಸ ಮಾಡುತ್ತವೆ. 47 ವರ್ಷಗಳಲ್ಲಿ ಕರ್ನಾಟಕವು ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದು, ಇದೇ ಅವಧಿಯಲ್ಲಿ ವಹಿವಾಟು 4 ಕೋಟಿ ರೂ.ಗಳಿಂದ 25,000 ಕೋಟಿ ರೂಗೆ ಏರಿದೆ. ಕರ್ನಾಟಕದಲ್ಲಿ ಸಹಕಾರಿ ಡೈರಿಯನ್ನು ಹೆಚ್ಚಿಸಲು ಅಮೂಲ್ ಮತ್ತು ಕೆಎಂಎಫ್ ಒಟ್ಟಾಗಿ ಕೆಲಸ ಮಾಡಬೇಕು' ಎಂದು ಅಮಿತ್ ಶಾ ಹೇಳಿದ್ದರು.

ಕಳೆದ ವಾರ ಅಮುಲ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಾಮಾಜಿಕ ಮಾಧ್ಯಮ ಪೋಸ್ಟರ್‌ಗಳ ಸರಣಿಯನ್ನು ಪೋಸ್ಟ್ ಮಾಡಿದಾಗ ಈ ವಿಚಾರವು ಮತ್ತೆ ಮುನ್ನೆಲೆಗೆ ಬಂದಿತು.
ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವಿರೋಧಿಸಲಾಯಿತು. ಕರ್ನಾಟಕದ ವಿರೋಧ ಪಕ್ಷಗಳ ನಾಯಕರು ಅಮೂಲ್ ವಿರುದ್ಧ ಅಭಿಯಾನವನ್ನೇ ಆರಂಭಿಸಿದರು. #GoBackAmul ಮತ್ತು #SaveNandini ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲು ಪ್ರಾರಂಭಿಸಿದರು.
ಅಮುಲ್ ಬ್ರಾಂಡ್ ಅನ್ನು ಬಹಿಷ್ಕರಿಸಬೇಕು. ರಾಜ್ಯದ ಲಕ್ಷಾಂತರ ಹೈನುಗಾರ ಕುಟುಂಬಗಳ ಜೀವನಾಧಾರವಾಗಿರುವ ಕರ್ನಾಟಕ ಹಾಲು ಒಕ್ಕೂಟವನ್ನು (ಕೆಎಂಎಫ್) ಬೆಂಬಲಿಸುವಂತೆ ಕನ್ನಡಿಗರಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
'ಅಮುಲ್ ವರ್ಸಸ್ ನಂದಿನಿ' ಅಭಿಯಾನಕ್ಕೆ ಕೈಜೋಡಿಸಿದ ಜೆಡಿಎಸ್‌ನ ಎಚ್ ಡಿ ಕುಮಾರಸ್ವಾಮಿ, 'ಅಮುಲ್ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ರೈತರ ಕತ್ತು ಹಿಸುಕಿದೆ' ಎಂದು ಆರೋಪಿಸಿದ್ದಾರೆ. ಅಮೂಲ್ ವಿರುದ್ಧ ಕನ್ನಡಿಗರು ದಂಗೆ ಏಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.












Click it and Unblock the Notifications