ತಲೆನೋವಾದ ಗೃಹಜ್ಯೋತಿ; ಕರೆಂಟ್ ಬಿಲ್ ಕಟ್ಟುವಂತೆ ಡಂಗುರ!
ಕೊಪ್ಪಳ, ಮೇ 24; ಕರ್ನಾಟಕದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾದ ಗೃಹಜ್ಯೋತಿ ಯೋಜನೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಜನರು ಕಾಂಗ್ರೆಸ್ ಸರ್ಕಾರ ಬಂದಿದೆ ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠ ಹಿಡಿದು ಕೂತಿದ್ದಾರೆ.
ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಮೀಟರ್ ರೀಡಿಂಗ್‌ಗೆ ಹೋದ ಸಿಬ್ಬಂದಿಗೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಡಂಗುರ ಸಾರುವ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿ, ಇಲ್ಲವೇ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ ಎಂದು ಜನರಿಗೆ ತಿಳಿಸುತ್ತಿದೆ.

ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಕರೆಂಟ್ ಬಿಲ್ ಕಟ್ಟಿ ಎಂದು ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸುತ್ತಾಡುತ್ತಾ ಗೃಹಜ್ಯೋತಿ ಬಗ್ಗೆ ಅಧಿಕೃತ ಆದೇಶವಾಗಿಲ್ಲ. ಆದ್ದರಿಂದ ಜನರು ಕರೆಂಟ್ ಬಿಲ್ ಪಾವತಿ ಮಾಡಬೇಕು. ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಮಾಹಿತಿ ನೀಡುತ್ತಿದ್ದಾರೆ.
ಗೃಹಜ್ಯೋತಿ ಯೋಜನೆ; ಕಾಂಗ್ರೆಸ್ ಸರ್ಕಾರ ಈ ಬಾರಿಯ ಚುನಾವಣೆಯಲ್ಲಿ ನೀಡಿದ 5 ಭರವಸೆಗಳಲ್ಲಿ ಗೃಹಜ್ಯೋತಿ ಸಹ ಒಂದು. ಈ ಘೋಷಣೆಯ ಅನ್ವಯ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದು ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ. ಮೊದಲೇ ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳು ಈಗ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿವೆ. ಗೃಹಜ್ಯೋತಿ ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ? ಎಂಬ ಬಗ್ಗೆ ಸರ್ಕಾರಕ್ಕೆ ಇನ್ನೂ ಸಹ ಸ್ಪಷ್ಟತೆ ಇಲ್ಲವಾಗಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಸಿದ್ದರಾಮಯ್ಯ ಮೇ 20ರ ಶನಿವಾರ ಮೊದಲ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಗೃಹಜ್ಯೋತಿ ಸೇರಿದಂತೆ ಎಲ್ಲಾ 5 ಭರವಸೆಗಳ ಅನುಷ್ಠಾನಕ್ಕೆ ಒಪ್ಪಿಗೆ ಕೊಡಲಾಗಿದೆ. ಆದರೆ ಇದರ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ.
ಸಂಪುಟ ಸಭೆಯ ಬಳಿಕ ಹೊರಡಿಸಿದ ಆದೇಶದಲ್ಲಿ 'ಗೃಹ ಜ್ಯೋತಿ' ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ಒದಗಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರೀಕರಿಗೆ ಒದಗಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿದ್ದು, ಈ ಕುರಿತಂತೆ ಪರಿಶೀಲಿಸಲಾಗಿ ರಾಜ್ಯದ ನಾಗರೀಕರ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗ್ರಹ ಬಳಕೆಗಾಗಿ ಉಪಯೋಗಿಸುವ 200 ಯೂನಿಟ್‌ಗಳವರೆಗಿನ ವಿದ್ಯುಚ್ಚಕ್ತಿಯನ್ನು ಉಚಿತವಾಗಿ ಒದಗಿಸಲು ಸರ್ಕಾರವು ಉದ್ದೇಶಿಸಿರುತ್ತದೆ.
ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುಚ್ಛಕ್ತಿಯನ್ನು ಒದಗಿಸುವ ಗೃಹ ಜ್ಯೋತಿ ಯೋಜನೆ ಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿರುತ್ತದೆ. ರಾಜ್ಯದ ನಾಗರೀಕರಿಗೆ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್‌ವರೆಗೆ ಗೃಹ ಬಳಕ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ಪೂರೈಸಲು ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲು ತಾತ್ವಿಕ ಅನುಮೋದನೆ ನೀಡಿದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದೆ.
ಚುನಾವಣೆ ಪೂರ್ವದಲ್ಲಿ ಉಚಿತ ವಿದ್ಯುತ್ ಅಂತ ಡಂಗುರ ಸಾರಿದ್ದು ಇದೇ @INCKarnataka ಪಕ್ಷದವರು. ಇದೀಗ ಸರ್ಕಾರ ಬಂದ ಬಳಿಕ ಯಾವುದೇ ಸ್ಪಷ್ಟವಾದ ನಿಲುವು ತಾಳಲು ಇಂದಿಗೂ ಸಾಧ್ಯವಾಗಿಲ್ಲ, ಸಾಧ್ಯವಾಗುವ ಲಕ್ಷಣಗಳೂ ಇಲ್ಲ!
— BJP Karnataka (@BJP4Karnataka) May 24, 2023
ಈ ಅಸ್ಪಷ್ಟತೆಯಿಂದ ರಾಜ್ಯದ ಜನರಲ್ಲಿ ಗೊಂದಲ ಮೂಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಈ ರೀತಿಯ ನಿದರ್ಶನಗಳು… pic.twitter.com/ZCGbAtX3Du
ಟ್ವೀಟ್ ಮಾಡಿ ಬಿಜೆಪಿ ಅಕ್ರೋಶ; ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆ ಬಗ್ಗೆ ಟ್ವೀಟ್ ಮಾಡಿ ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 'ಚುನಾವಣೆ ಪೂರ್ವದಲ್ಲಿ ಉಚಿತ ವಿದ್ಯುತ್ ಅಂತ ಡಂಗುರ ಸಾರಿದ್ದು ಇದೇ @INCKarnataka ಪಕ್ಷದವರು. ಇದೀಗ ಸರ್ಕಾರ ಬಂದ ಬಳಿಕ ಯಾವುದೇ ಸ್ಪಷ್ಟವಾದ ನಿಲುವು ತಾಳಲು ಇಂದಿಗೂ ಸಾಧ್ಯವಾಗಿಲ್ಲ, ಸಾಧ್ಯವಾಗುವ ಲಕ್ಷಣಗಳೂ ಇಲ್ಲ!. ಈ ಅಸ್ಪಷ್ಟತೆಯಿಂದ ರಾಜ್ಯದ ಜನರಲ್ಲಿ ಗೊಂದಲ ಮೂಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಈ ರೀತಿಯ ನಿದರ್ಶನಗಳು ಸಾಕಷ್ಟು ಕಂಡುಬಂದಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈ #ATMSarkara ನುಡಿದಂತೆ ನಡೆಯುವುದು ಬಿಡಿ, ಮುಂದೆ ನಡೆಯುವುದೇ ಅನುಮಾನವಾಗಿದೆ' ಎಂದು ಟೀಕಿಸಿದೆ.












Click it and Unblock the Notifications