4.5 ಕೋಟಿ ಜನರಿಗೆ ಶೀಘ್ರವೇ 'ಗ್ಯಾರೆಂಟಿ ಸ್ಮಾರ್ಟ್ ಕಾರ್ಡ್: ಇದು ಕಾಂಗ್ರೆಸ್‌ನ ಚುನಾವಣಾ 'ಟ್ರಂಪ್ ಕಾರ್ಡ್'
ಬೆಂಗಳೂರು, ಜನವರಿ 11: ಕರ್ನಾಟಕ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಗ್ಯಾರಾಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅವುಗಳನ್ನು ಚುನಾವಣೆಯ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಈ ಪೈಕಿ ಕೋಟ್ಯಂತರ ಫಲಾನುಭವಿಗಳಿಗೆ 'ಗ್ಯಾರೆಂಟಿ ಸ್ಮಾರ್ಟ್ ಕಾರ್ಡ್' (Guarantee Smart Card of Congress) ವಿತರಣೆಯು ಒಂದಾಗಿದೆ.
ಹೌದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಜೊತೆಗೆ ರಾಜ್ಯದ 4.5 ಕೋಟಿ ಜನರಿಗೆ 'ಗ್ಯಾರೆಂಟಿ ಸ್ಮಾರ್ಟ್ ಕಾರ್ಡ್'ಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡುವ ಪ್ಲಾನ್ ಇಟ್ಟುಕೊಂಡಿದೆ. ಇದಕ್ಕಾಗಿ ಕಾರ್ಯಕರ್ತರನ್ನು ಬಳಸಿಕೊಳ್ಳಲು ಯೋಜಿಸಿದೆ.

ಗ್ಯಾರೆಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆ ಅಸ್ತ್ರವಾಗಿಟ್ಟುಕೊಂಡಿರುವ ಕಾಂಗ್ರೆಸ್ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಮುಂದಿನ ಯೋಜನೆ, ಮಹತ್ವದ ಕಾರ್ಯಕ್ರಮಗಳ ಕುರಿತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಅವರೆಲ್ಲ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.
ಅತ್ಯಧಿಕ ಸೀಟು ಗೆಲ್ಲಲು 'ಕೈ'ಪಡೆ ಪ್ಲಾನ್
ಖಾತರಿ ಯೋಜನೆಗಳ ಸಮರ್ಪಕ ಅನುಷ್ಠಾನ ಮುಂದಿಟ್ಟುಕೊಂಡು ಕಾಂಗ್ರೆಸ್ 2024 ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಗೆಲ್ಲಲು ತಂತ್ರ ರೂಪಿಸಿದೆ. ಸ್ಮಾರ್ಟ್ ಕಾರ್ಡ್ ವಿತರಣೆ ಜತೆಗೆ ಕಾರ್ಯಕರ್ತರ ಜೊತೆಗೆ ಸಮಾವೇಶ ನಡೆಸುವುದು, ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು, ಅದಕ್ಕಾಗಿ ಕಾರ್ಯಕರ್ತರನ್ನು ಬಳಸಿಕೊಳ್ಳಲು ಯೋಚಿಸಿದೆ.
ಇದರೊಂದಿಗೆ ಸರ್ಕಾರ ಒಟ್ಟು 5000 ಕಾರ್ಯಕರ್ತರನ್ನು ಒಳಗೊಂಡ ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆಂದು ಸಮಿತಿ ರಚಿಸಲು ತೀರ್ಮಾನಿಸಿದೆ. ಈ ಮೂಲಕ ಕಾರ್ಯಕರ್ತರಿಗೂ ಜವಾಬ್ದಾರಿ ನೀಡುವ ಮೂಲಕ ಅವರನ್ನು ಸರ್ಕಾರದ ಭಾಗವಾಗಿ ಮತ್ತು ಲೋಕಸಭಾ ಚುನಾವಣೆಯ ಭಾಗವಾಗಿ ತೊಡಗಿಸಿಕೊಳ್ಳಲಿದೆ. ಇದರಿಂದ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತಿದೆ ಎಂಬ ಸಂದೇಶವು ರವಾನೆಯಾಗಲಿದೆ. ಪಕ್ಷದ ಅಧಿಕ ಸ್ಥಾನದ ಗುರಿ ತಲುಪಲು ಇವೆಲ್ಲ ಯೋಚನೆ ಸಹಕಾರಿಯಾಗಲಿವೆ ಎಂದು ಕಾಂಗ್ರೆಸ್ ನಿರ್ಧರಿಸಿದೆ.

ಫಲಾನುಭವಿಗಳಿಗೆ ನೇರವಾಗಿ ಹಣ ಜಮೆ
ಸರ್ಕಾರವು ಯಾರ ಮಧ್ಯಸ್ಥಿಕೆ ಇಲ್ಲದೇ 38,000 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಿದೆ. ಇದರ ಫಲಾನುಭವಿಗಳಾದ 4.5 ಕೋಟಿ ಜನರಿಗೆ ಸರ್ಕಾರ ಗ್ಯಾರೆಂಟಿ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ತನ್ನ ಸೆಳೆಯಲು ಕಾಂಗ್ರೆಸ್ ಸಜ್ಜಾಗಿದೆ.
ಇನ್ನು ಐದೇನ ಗ್ಯಾರೆಂಟಿ ಯುವನಿಧಿ ಯೋಜನೆಯನ್ನು ಜನವರಿ 12ರಂದು ಸ್ವಾಮಿ ವಿವೇಕಾನಂದ ಜನ್ಮ ದಿನದಂದು ಉದ್ರ್ಘಾಟಿಸಲು ತೀರ್ಮಾನಿಸಿದೆ. ಗ್ಯಾರೆಂಟಿ ಯೋಜನೆ ಸಂಬಂಧ ಜಿಲ್ಲಾ ಮತ್ತು ವಿಧಾನಸಭಾ ಮಟ್ಟದಲ್ಲಿ ಫಲಾನುಭವಿಗಳಿಂದ ಸಭೆ ನಡೆಸಿ ಮಾಹಿತಿ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕ್ಷೇತ್ರಮಟ್ಟದಲ್ಲಿ ಚುನಾವಣೆಗೂ ಸಿದ್ದತೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಸಿಎಂ-ಡಿಸಿಎಂ ಪ್ರತಿಕ್ರಿಯೆ
ಸಭೆ ಬಳಿಕ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನನಗೆ ತೃಪ್ತಿ ತಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ನಾನು ಮತ್ತು ಎಐಸಿಸಿ ನೇತೃತ್ವದಲ್ಲಿ ಪ್ರತ್ಯೇಕ ಸಮೀಕ್ಷೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.
ಗ್ಯಾರೆಂಟಿ ಯೋಜನೆ ಸೇರಿದಂತೆ ಇಷ್ಟೆಲ್ಲ ಮಾಡಿಯೂ ನಾವು ಗೆಲ್ಲದಿದ್ದರೆ, ಅದು ನಮಗೆ ಹಿನ್ನಡೆಯಾಗಲಿದೆ. ಆದ್ದರಿಂದ ಜನರ ನಮ್ಮ ಪರವಾಗಿದ್ದು, ಅಪಪ್ರಚಾರಕ್ಕೆ ಕಿವಿಕೊಡುವುದು, ಹತಾಶರಾಗಬಾರದು. ನಮ್ಮ ಅಭಿವೃದ್ಧಿ ಯೋಜನೆಗಳಿಂದ ನಾವು ಸುಮಾರು 26 ಸೀಟುಗಳನ್ನಾದರೂ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪದಾಧಿಕಾರಿಗಳನ್ನು ಹುರಿದುಂಬಿಸಿದರು.












Click it and Unblock the Notifications