Karnataka: ಶಕ್ತಿ ಯೋಜನೆಯಿಂದ ಸಾರಿಗೆ ನೌಕರರಿಗೆ ಅರ್ಧ ವೇತನ ಪಾವತಿ
ಬೆಂಗಳೂರು, ಆಗಸ್ಟ್ 02: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಫಲಶೃತಿಯಾಗಿ ರಾಜ್ಯ ಸಾರಿಗೆ ನೌಕರರಿಗೆ ಅರ್ಧ ವೇತನ ಪಾವತಿಸಲಾಗಿದೆ ಎಂದು ಬಿಜೆಪಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತ KSRTC ತನ್ನ ನೌಕರರಿಗೆ ಎಂದಿನಂತೆ ಪೂರ್ಣ ಸಂಬಳ ನೀಡಿರುವುದಾಗಿ ತಿಳಿಸಿದೆ.
ಸಾರಿಗೆ ನಿಗಮದ ನೌಕರರಿಗೆ ವೇನತ ಪಾವತಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಬಿಜೆಪಿ ನಾಯಕರು ಮತ್ತೆ ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಾರೆ. ಗ್ಯಾರಂಟಿ ಯೋಜನಗಳ ವಿರೋಧ ಬಿಜೆಪಿ ಮುಂದುವರಿಸಿದ್ದು, ಬುಧವಾರ ಈ ಕುರಿತು ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

ಶಕ್ತಿ ಯೋಜನೆ ಫಲಶೃತಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡಲಾಗಿದೆ. ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ ಎಂದು ಅವರು ಟೀಕಿಸಿದರು.
ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್ ಗಳನ್ನು ಡಿಸೆಲ್ ಇಲ್ಲದೆ ನಿಲ್ಲಿಸುವಂತಹ ಸ್ಥಿತಿ ಹಾಗೂ ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತಹ ಸ್ಥಿತಿ ಹಾಗೂ ಕೆಟ್ಟಬಸ್ ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದು ಅವರು ಸರ್ಕಾರ ಆಡಳಿತ ಬಗ್ಗೆ ವ್ಯಂಗ್ಯವಾಡಿದರು.
ನಮ್ಮ ಸಿಬ್ಬಂದಿಗೆ ಎಂದಿನಂತೆ ವೇತನ ಪಾವತಿ:KSRTC
ಇತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRC) ನಿಗಮದ ನೌಕರರಿಗೆ ಪ್ರತಿ ತಿಂಗಳು ನೀಡುವಂತೆ ಈ ಬಾರಿಗೆ ಪೂರ್ಣ ವೇತನ ನೀಡಲಾಗಿದೆ. ಇದು ಈ ಒಂದೇ ನಿಗಮಕ್ಕೆ ಸಂಬಂಧಿಸಿದ್ದಾಗಿದ್ದು, ಉಳಿದ ಮೂರು ನಿಗಮಗಳ ನೌಕರರಿಗೆ/ಸಿಬ್ಬಂದಿಗೆ ವೇತನ ಪಾವತಿ ಮೊದಲಿನಿಂದಲೂ ಬೇರೆ ಇದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದರು.

ಜೂನ್ 11ರಂದು ಕರ್ನಾಟಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಸರ್ಕಾರ ತನ್ನ ಮೊದಲ ಗ್ಯಾರಂಟಿಯಾದ 'ಶಕ್ತಿ ಯೋಜನೆ' (Shakti Scheme) ಜಾರಿಗೊಳಿಸಿತು. ಅಂದಿನಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಜನರ ತೆರಿಗೆ ಹಣ ಅಭಿವೃದ್ಧಿ ಪಾಲಾಗದೇ ಅಪಾರ ಪ್ರಮಾಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಭರಿಸಲು ವೆಚ್ಚವಾಗುತ್ತಿದೆ ಎಂದು ಬಿಜೆಪಿ ದೂರಿದೆ.
ಅವೈಜ್ಞಾನಿಕ ಗ್ಯಾರಂಟಿ ಯೋಜನೆ: ಅಭಿವೃದ್ಧಿಗೆ ಹೊಡೆತ
ಮೊದಲಿನಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕದ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳಲಿದೆ ಎಂದರು.
ಇನ್ನೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದವರ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು 11 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕಾಂಗ್ರೆಸ್ ತನ್ನ ಗ್ಯಾರೆಂಟಿ ಯೋಜನೆಗಳ ಜಾರಿಗೆ ಬಳಸುತ್ತಿದೆ ಇದರಿಂದ ಆ ಸಮುದಾಯದವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications