JSW Steel: ಬಿಜೆಪಿ ಸರ್ಕಾರದ ಆದೇಶದಂತೆ ಜಿಂದಾಲ್‌ಗೆ ಭೂಮಿ ಮಾರಾಟ: ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 25: ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಸ್ಟೀಲ್ ಕಂಪನಿಗೆ ಸಾವಿರಾರು ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಿತ್ತು. ಈ ಕುರಿತು ಆಡಳಿತ ಪಕ್ಷ ಹಾಗೂ ವಿಪಕ್ಷ ನಡುವೆ ಸಾಕಷ್ಟು ತಿಕ್ಕಾಟಗಳು ಆರಂಭಗೊಂಡವು. ಇದರ ಬೆನ್ನಲ್ಲೆ ಕಾನೂನು ಪ್ರಕಾರವೇ ಜಿಂಗಾಲ್‌ಗೆ ಜಮೀನು ನೀಡಲಾಗಿದೆ ಎಂದು ತಿಳಿಸಿದ್ದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಇದೀಗ ಮತ್ತೊಮ್ಮೆ ಸಮರ್ಥನೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಂಪುಟವೇ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿತ್ತು. ಅದರಂತೆ ಸರ್ಕಾರಿ ಆದೇಶವನ್ನು 2021ರ ಮೇ 6ರಂದು ಹೊರಡಿಸಿತ್ತು. ಅದೇ ಆದೇಶವನ್ನು ಈಗ ಹೈಕೋರ್ಟ್ ಸೂಚನೆಯಂತೆ (2024ರ ಮಾ.12) ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಬಿಜೆಪಿ ಜೊತೆಗೆ ಒಪ್ಪಂದವಾಗಿರಬೇಕು?
ಈ ವಿಚಾರದಲ್ಲಿ ರಾಜ್ಯ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಅವರ ಆರೋಪ ನಿರಾಧಾರದಿಂದ ಕೂಡಿದೆ. ಆಗೊಂದು ವೇಳೆ ಒಳ ಒಪ್ಪಂದ ಆಗಿದ್ದರೆ ಅದು ಅವರದ್ದೇ ಪಕ್ಷದ ಸರ್ಕಾರದ ಜತೆ ಆಗಿರಬೇಕು ಎಂದು ಸಚಿವರು ತಿರುಗೇಟು ಕೊಟ್ಟರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದ ಆದೇಶ ಜಾರಿಯಾಗದ ಕಾರಣ ಜಿಂದಾಲ್ ಕಂಪನಿ ಹೈಕೋರ್ಟ್ ಗೆ ಹೋಯಿತು. ಬಳಿಕ ಕೋರ್ಟ್ ಆ ಆದೇಶವನ್ನು ಪಾಲಿಸುವಂತೆ ಸೂಚಿಸಿತು. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ ಎಂದು ಅವರು ವಿವರಿಸಿದರು.

ಉದ್ಯೋಗ ನೀಡಿದ ಕಂಪನಿಗೆ ಜಮೀನು ಕೊಡಬೇಕು
ಇಷ್ಟಕ್ಕೂ ಜಿಂದಾಲ್ ಕಂಪನಿ ರಾಜ್ಯದಲ್ಲಿ ₹90 ಸಾವಿರ ಕೋಟಿ ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರದ ಷರತ್ತುಗಳನ್ನು ಪಾಲಿಸಿದ ನಂತರವೂ ಅವರಿಗೆ ಜಮೀನಿನ ಗುತ್ತಿಗೆ ಮಾರಾಟ ಮಾಡದಿದ್ದರೆ ಹೂಡಿಕೆ ವಲಯಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ' ಎಂದು ಅವರು ತಿಳಿಸಿದರು.
ಬಿಜೆಪಿ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೊಟ್ಟ ಹಾಗೆ ನಮ್ಮ ಸರ್ಕಾರ ಜಿಂದಾಲ್ ಕಂಪನಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. 20 ವರ್ಷದ ಹಿಂದೆ ಇದ್ದ ಮಾರುಕಟ್ಟೆ ದರವನ್ನು ಆಧರಿಸಿಯೇ ಭೂಮಿ ದರ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿಗರ ಜಾಣ ಮೌನ ಏಕೆ?
ಹಿಂದಿನ ಬಿಜೆಪಿ ಸರಕಾರವು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ದೇವನಹಳ್ಳಿ ಬಳಿ ಕೆಐಎಡಿಬಿಯ 116 ಎಕರೆ ಜಮೀನನ್ನು ಕೇವಲ 50 ಕೋಟಿ ರೂಪಾಯಿಗೆ ಭಾರಿ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಅದರ ನೈಜ ಬೆಲೆ ಅಂದು 187 ಕೋಟಿ ರೂಪಾಯಿ ಇತ್ತು. ಇದರಲ್ಲಿ 137 ಕೋಟಿ ರೂಪಾಯಿ ಮೇಲ್ನೋಟಕ್ಕೇ ನಷ್ಟವಾಗಿದೆ. ಈ ಹಣ ಇಲ್ಲಿಯವರೆಗೂ ಕೆಐಎಡಿಬಿ ಗೂ ಸಂದಾಯವಾಗಿಲ್ಲ. ಇದರ ಬಗ್ಗೆ ಬೆಲ್ಲದ ಅವರ ಜಾಣಮೌನ ಯಾಕೆ? ಎಂದು ಪಾಟೀಲ್ ಪ್ರಶ್ನಿಸಿದರು.
ಜಿಂದಾಲ್ ಸಂಸ್ಥೆ- ಕರ್ನಾಟಕ ಸರ್ಕಾರ ನಡುವಿನ ಪ್ರಕರಣದ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 10560/2022 ಅನ್ನು ಸಹ ತಿಳಿಸಿ ಕೈಗಾರಿಕೆ ಸಚಿವರು ಸಂಶಯ ವ್ಯಕ್ತಪಡಿಸಿದವರಿಗೂ ಅವರು ತಕ್ಕ ಉತ್ತರ ನೀಡಿದ್ದಾರೆ.












Click it and Unblock the Notifications