'ಕಾಂಗ್ರೆಸ್ ಸರ್ಕಾರ ಬೊಕ್ಕಸ ಬರಿದು ಮಾಡಿ ಅಭಿವೃದ್ಧಿಯನ್ನು ಮೂಲೆಗೆ ಸರಿಸಿದೆ'
ಬೆಂಗಳೂರು, ಜನವರಿ 20: ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಬಜೆಟ್‌ನಲ್ಲಿ ಸಮುದಾಯ ಹಾಗೂ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿತ್ತು. ಆದರೆ ಇನ್ನೇನು ಎರಡು ತಿಂಗಳಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯವಾಗಲಿದ್ದು, ಈವರೆಗೂ ಹಲವು ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನು ಕೆಲವು ನಿಗಮಗಳಿಗೆ ಅತಿ ಕನಿಷ್ಠ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಂಡಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, 'ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮೂಲೆಗೆ ಸರಿಸಿದೆ' ಎಂದು ಲೇವಡಿ ಮಾಡಿದರು.

'ಅಭಿವೃದ್ಧಿ ಕಾರ್ಯಗಳನ್ನು ಮೂಲೆಗೆ ಸರಿಸಿದ ಕಾಂಗ್ರೆಸ್ ಸರ್ಕಾರ ಚುನಾವಣೆ ಎದುರಿಸಲು ಅಕ್ರಮ ಮಾರ್ಗದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿತ್ತು. ನಿಗಮದ ಖಾತೆಯಿಂದ 187 ಕೋಟಿ ರೂಗಳ ಬಹುದೊಡ್ಡ ಹಗರಣ ಈ ಸರ್ಕಾರದ ಭ್ರಷ್ಟ ಕರಾಳತೆ ಬಯಲು ಮಾಡಿತ್ತು' ಎಂದು ಆರೋಪಿಸಿದರು.
'ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಈಡಿಗ ಅಭಿವೃದ್ಧಿ ನಿಗಮ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳಿಗೆ ಒಂದೇ ಒಂದು ಬಿಡುಗಾಸು ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಇನ್ನುಳಿದ ಹಿಂದುಳಿದ ವರ್ಗಗಳ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿ ಹಂಚಿಕೆಯಾಗಿರುವ ಅನುದಾನದ ಪೈಕಿ ಬಹುತೇಕ ಹಣ ಬಿಡುಗಡೆಯಾಗಿಲ್ಲ'.

'ಹಿಂದುಳಿದ ವರ್ಗದ ನಾಯಕ ಎಂದು ಅಹಿಂದ ವರ್ಗವನ್ನು ಪ್ರತಿನಿಧಿಸುವವರೆಂದು ಸ್ವಯಂ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಆಡಳಿತದಲ್ಲಿ ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ, ಈ ಸಮುದಾಯಗಳ ಜನರ ಆರ್ಥಿಕ ಚೈತನ್ಯ ನೀಡಿ, ಅವರ ಆರ್ಥಿಕ ಔದ್ಯೋಗಿಕ ಅವಕಾಶವನ್ನು ಸೃಷ್ಟಿಸುವುದಕ್ಕಾಗಿ ಇರುವ ನಿಗಮಗಳಿಗೇ ಅನುದಾನ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರ ಇನ್ಯಾವ ಬಗೆಯ ಅಭಿವೃದ್ಧಿ ಮಾಡುತ್ತಿದೆ ಎಂದು ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ' ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದರು.











Click it and Unblock the Notifications