ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಸ್. ಎಲ್. ಭೈರಪ್ಪ!

ಬೆಂಗಳೂರು, ಆಗಸ್ಟ್ 25: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸದ್ಯ ಚರ್ಚೆಯ ವಿಚಾರ. ಈ ವಿಚಾರದಲ್ಲಿ ಸಾಹಿತಿ ಎಸ್. ಎಲ್. ಭೈರಪ್ಪ ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರ ಅಕ್ರೋಶಕ್ಕೆ ಕಾರಣವಾಗಿದೆ. ಭೈರಪ್ಪ ಅವರು, 'ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ.

ರಮೇಶ್ ಬಾಬು, ಅಧ್ಯಕ್ಷರು, ಮಾಧ್ಯಮ ಮತ್ತು ಸಂವಹನ ವಿಭಾಗ-ಕೆಪಿಸಿಸಿ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ' ಕರ್ನಾಟಕದ ರಾಜ್ಯಪಾಲರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇರುತ್ತದೆ. ಸಾಹಿತಿ ಎಸ್. ಎಲ್. ಭೈರಪ್ಪನವರು ತಮ್ಮ ಎಂದಿನ ಚಾಳಿಯಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿರುತ್ತದೆ' ಎಂದು ಹೇಳಿದ್ದಾರೆ.

Congress Criticizes Kannada Novelist SL Bhyrappa

'ಕೇಂದ್ರ ಸರ್ಕಾರದಿಂದ ಅವರು ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿರುತ್ತದೆ. ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ' ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರ ಹುದ್ದೆಯ ಆಮಿಷ: 'ಮಾನ್ಯ ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿಯನ್ನು ವ್ಯಕ್ತ ಪಡಿಸಿರುತ್ತದೆ. ಇದೇ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕಗಳನ್ನು ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಛತ್ತೀಸ್‌ಗಢ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರುಗಳ ನಡೆಯನ್ನು ಸರಿ ಅಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿರುತ್ತದೆ' ಎಂದು ತಿಳಿಸಿದ್ದಾರೆ.

'ಮಧ್ಯಪ್ರದೇಶದ ಹೈಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶಗಳನ್ನು ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಬಹಳ ಸ್ಪಷ್ಟವಾಗಿ ಹೇಳಿರುತ್ತದೆ. ಸ್ವಯಂ ಘೋಷಿತ ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಶ್ರೀ ಎಸ್. ಎಲ್. ಭೈರಪ್ಪನವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು?. ಭೈರಪ್ಪನವರು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು!' ಎಂದು ಟೀಕಿಸಿದ್ದಾರೆ.

"ಭೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿ ಅವರು ಇವರ ಆವರಣ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಭೈರಪ್ಪನವರ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಭೈರಪ್ಪನವರು ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ' ಎಂದು ದೂರಿದ್ದಾರೆ.

'ಮೊದಲಿನಿಂದಲೂ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯವನ್ನು ಸಮರ್ಪಣೆಗೊಳಿಸಿಕೊಂಡಿರುವ ಭೈರಪ್ಪನವರು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಬಾರದು ಎಂದು ಹೇಳಿರುವುದು ಅವರ ಮನಸ್ಥಿತಿಗೆ ಅನುಗುಣವಾಗಿ ಇರುತ್ತದೆ. ಭೈರಪ್ಪನವರು ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ ಹೆಚ್ಚು ಚಪ್ಪಾಳೆ ಗಿಟ್ಟಿಸಬಹಹುದು' ಎಂದು ವ್ಯಂಗ್ಯವಾಡಿದ್ದಾರೆ.

'ನಮ್ಮ ದೇಶದಲ್ಲಿ ಬೊಮ್ಮಾಯಿ ಪ್ರಕರಣವನ್ನು ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳನ್ನು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ. ರಾಜ್ಯಪಾಲರು ಚುನಾಯಿತ ಸರ್ಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರಗಳ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯಗಳು ಬಹಳ ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ ವಿಶ್ವ ವಿಖ್ಯಾತ ಸಾಹಿತಿಗಳಿಗೆ ಜಾಣಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ' ಎಂದು ತಿಳಿಸಿದ್ದಾರೆ.

'ಮಾನ್ಯ ಎಸ್. ಎಲ್. ಭೈರಪ್ಪನವರು ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಭಾರತೀಯ ಜನತಾ ಪಕ್ಷದಲ್ಲಿ ಯಾವುದಾದರೂ ಹುದ್ದೆಯನ್ನು ಬೇಡಿ ಪಡೆದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಕೇವಲ ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಾಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪದವಿಯ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಭೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ' ಎಂದು ಹೇಳಿದ್ದಾರೆ.

ಭೈರಪ್ಪ ಹೇಳಿದ್ದೇನು?: ಶನಿವಾರ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಿತ್ತು. ಅದರಲ್ಲಿ ಪಾಲ್ಗೊಂಡಿದ್ದ ಎಸ್. ಎಲ್. ಭೈರಪ್ಪ, "ಆರೋಪ ಹೊತ್ತವರು ಪ್ರಾಮಾಣಿಕರಾಗಿದ್ದರೆ ತನಿಖೆ ಎದುರಿಸಬೇಕೆ ಹೊರತು, ಅದನ್ನು ಬಿಟ್ಟು ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿಸಬಾರದು" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+