ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಕಲೆಕ್ಷನ್ ಮಾಸ್ಟರ್ ಅಮಿತ್ ಶಾ ಅಣತಿಯಂತೆ 'ಟೋಪಿ ವ್ಯಾಪಾರ' ಎಂದ ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 24: ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಮೂವರು ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲಾಗಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ವ್ಯಾಪಕ ಟೀಕೆ ಮಾಡಿದೆ. 'ಟಿಕೆಟ್ ಹೆಸರಲ್ಲಿ ಕಲೆಕ್ಷನ್ ಮಾಡಿರುವುದು ಅಮಿತ್ ಶಾ ನಿರ್ದೇಶನದಿಂದಲೋ, ಮೋದಿ ನಿರ್ದೇಶನದಿಂದಲೋ' ಎಂದು ಕೆಪಿಸಿಸಿ ಕೇಳಿದೆ.

ಬಿಜೆಪಿ ಅಂದರೆ 'ಭ್ರಷ್ಟ ಜನರ ಪಕ್ಷ' ಎಂಬುದನ್ನು ಪದೇ ಪದೇ ಸಬೀತು ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ವಂಚನೆಯಲ್ಲಿ ಮತ್ತೊಂದು ದೂರು ಕೇಳಿಬಂದಿದೆ, ಸ್ವತಃ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೆಸರು ಈ ವಂಚನೆಯಲ್ಲಿ ಕೇಳಿಬಂದಿದೆ. ಸರ್ಕಾರದಲ್ಲಿ ಒಂದು ಬಗೆಯ ಲೂಟಿ, ಪಕ್ಷದಲ್ಲಿ ಮತ್ತೊಂದು ಬಗೆಯ ಲೂಟಿ. ಲೂಟಿಯೇ ಬಿಜೆಪಿಯ ಮನೆದೇವರು. ಟಿಕೆಟ್ ಹೆಸರಲ್ಲಿ ಕಲೆಕ್ಷನ್ ಮಾಡಿರುವುದು ಅಮಿತ್ ಶಾ ನಿರ್ದೇಶನದಿಂದಲೋ, ಮೋದಿ ನಿರ್ದೇಶನದಿಂದಲೋ? ಎಂದು ಕಾಂಗ್ರೆಸ್ ಕೇಳಿದೆ.
'ದಿನದಿನವೂ ಹೊಸ ಹೊಸ ಬಿಜೆಪಿಯ ಟಿಕೆಟ್ ವಂಚನೆ ಪ್ರಕರಣಗಳು ಹೊರಬರುತ್ತಿವೆ. ಕಲೆಕ್ಷನ್ ಮಾಸ್ಟರ್ ಅಮಿತ್ ಶಾ ಅವರ ಅಣತಿಯಂತೆ ಬಿಜೆಪಿಯ ಕಲೆಕ್ಷನ್ ಏಜೆಂಟ್ ಗಳು ವ್ಯಾಪಕವಾಗಿ 'ಟೋಪಿ ವ್ಯಾಪಾರ' ಮಾಡಿದ್ದಾರೆ. ಸೋಲಿನ ಮುನ್ಸೂಚನೆ ಸಿಕ್ಕಿದ್ದೇ ತಡ, ಅಮಾಯಕ ಆಕಾಂಕ್ಷಿಗಳಲ್ಲಿ ಬಿಜೆಪಿ ಆಮಿಷ ತೋರಿಸಿ ವಂಚನೆ ಮಾಡಿದೆ. ಈ ಎಲ್ಲಾ ವಂಚನೆಗಳು ಬಿಜೆಪಿ ಕಚೇರಿಯಿಂದಲೇ ನಿಯಂತ್ರಣವಾದಂತಿದೆ' ಎಂದು ಕೆಪಿಸಿಸಿ ಗಂಭೀರ ಆರೋಪ ಮಾಡಿದೆ.

'ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಪಕ್ಷದ ಭಿನ್ನಮತಗಳನ್ನು ನಿಭಾಯಿಸುವ ಬದಲು ಟಿಕೆಟ್ ಹೆಸರಲ್ಲಿ ವಸೂಲಿಗೆ ಇಳಿದಿದ್ದಾರೆ. ತನಗೆ ಸಿಕ್ಕಿರುವ ಅಧ್ಯಕ್ಷ ಸ್ಥಾನವನ್ನು ತುಂಬಾ ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸ್ವತಃ ಕಟೀಲ್ ಅವರೇ ಟಿಕೆಟ್ ವಂಚಕರನ್ನು ಮಿಕಗಳನ್ನು ಹಿಡಿಯಲು ಮುಂದೆ ಬಿಟ್ಟಿದ್ದಾರೆ. ವಂಚನೆಗೊಳಗಾದವರ ತಲೆಗೆ ಮಾತಿನ ಬೆಣ್ಣೆ ಸವರಿದ್ದಾರೆ' ಎಂದು ಆರೋಪಿಸಿದೆ.
ಬಿಜೆಪಿಯವರೇ, 224 ಕ್ಷೇತ್ರಗಳಲ್ಲಿ ವಸೂಲಿಯಾದ ಮೊತ್ತವೆಷ್ಟು? ಮೋದಿಗೆ ಪಾಲೆಷ್ಟು? ಅಮಿತ್ ಶಾ ಪಾಲೆಷ್ಟು? ಕಟೀಲ್, ಸಂತೋಷರ ಪಾಲೆಷ್ಟು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications