Delhi Elections 2025: 'ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಗುರಿ'
ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೋರಾಟ ಮಾಡುತ್ತಿವೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿತ್ತು. ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಗುರಿ ಎಂದುಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ದೆಹಲಿಯಲ್ಲಿ ಸಾಧನೆ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ನಂತರ ದೆಹಲಿ ವಾಯು ಮಾಲೀನ್ಯ, ಕೊಳೆಗೇರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದೆ. ದೇಶದ ಎಲ್ಲಾ ಭಾಗಗಳಿಂದ ದೆಹಲಿಗೆ ಹೋಗುವ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ. ದೆಹಲಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ಮೋದಿ ಅವರ ಸರ್ಕಾರ ಹಾಗೂ ಆಪ್ ಸರ್ಕಾರ ಪಾಲುದಾರರಾಗಿದ್ದು, ದೆಹಲಿಯ ಸಮಸ್ಯೆಗೆ ಕಾಂಗ್ರೆಸ್ ಪರಿಹಾರವಾಗಿದೆ. ದೆಹಲಿಗೆ ಹೊಸ ಸ್ವರೂಪ ನೀಡಲು ನಾವು ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಪಕ್ಷವಾಗಿ ಜನರಿಗೆ ಉತ್ತಮ ಪರ್ಯಾಯ ಆಯ್ಕೆಯಾಗಿರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡು ಈಗ ದೂರವಾಗಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಪ್ರತಿ ಚುನಾವಣೆಯೂ ಭಿನ್ನ ಚುನಾವಣೆಯಾಗಿದೆ. ಒಂದು ಚುನಾವಣೆಯಲ್ಲಿ ಆಗಿದ್ದೆ ಮತ್ತೊಂದು ಚುನಾವಣೆಯಲ್ಲಿ ಆಗಬೇಕು ಎಂಬುದಿಲ್ಲ. ನಾವು ದೆಹಲಿಯಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತಿದ್ದೇವೆ. ಶೀಲಾ ದೀಕ್ಷಿತ್ ಅವರ ಕಾಲದಲ್ಲಿ ಸಿಕ್ಕ ಆಡಳಿತ ಮತ್ತೆ ಸಿಗಲಿ ಎಂದು ಅಲ್ಲಿನ ಜನ ಕಾಯುತ್ತಿದ್ದಾರೆ ಎಂದು ತಿಳಿಸಿದರು.
ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ. ಜನವರಿ 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧಿಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ.
ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ ಮೇಲೆ ದೌರ್ಜನ್ಯ ನಡೆಸಿದರೆ ನಾವು ಈ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಸಮಾನತೆ ನೀಡುತ್ತಿದ್ದೇವೆ. ಅವರು ಶ್ರೀಮಂತರಿಗೆ ನೆರವು ನೀಡಿದರೆ, ನಾವು ಬಡತನದ ವಿರುದ್ಧ ಹೋರಾಟ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವ್ಯತ್ಯಾಸ ಎಂದರು.
ಇನ್ನೂ ಕರ್ನಾಟಕ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಆರಂಭವಾಗಿದೆಯೇ ಎಂದು ಕೇಳಿದಾಗ, "ಪಕ್ಷದ ಮುಂದಾಳತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನ ನೀಡುತ್ತಾರೆ. ಈ ಬಗ್ಗೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬೇರೆ ಕೆಲಸ ಮಾಡುವುದನ್ನು ಬಿಟ್ಟು ತಮಗೆ ನೀಡಲಾಗಿರುವ ಕೆಲಸ ಮಾತ್ರ ಮಾಡಿ ಎಂದು ಸ್ಪಷ್ಟವಾಗಿ ತೀಳಿಸಿದ್ದಾರೆ. ಇದು ಎಲ್ಲರ ರಾಜಕೀಯ ಭವಿಷ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು.












Click it and Unblock the Notifications