ನರ್ಸ್ ಪಾಸ್ ಪೋರ್ಟ್ ಮುಟ್ಟುಗೋಲು; ಮನವಿ ಪರಿಗಣಿಸಲು ಸೂಚನೆ
ಬೆಂಗಳೂರು, ಜೂನ್ 06: ನಿಷೇಧದ ಹೊರತಾಗಿಯೂ ಉದ್ಯೋಗ ನಿಮಿತ್ತ ಯೆಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದರಿಂದ ಪಾಸ್‌ಪೋರ್ಟ್ ಕಳೆದುಕೊಂಡಿದ್ದ ನರ್ಸ್ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ. ವಲಸೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸಬೇಕೆಂಬ ಮಹಿಳೆಯ ಮನವಿ ಪರಿಗಣಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಾಗಾಗಿ ಆ ಮಹಿಳೆಗೆ ಜೀವ ದೊರಕಿದ್ದು, ದುಬೈಗೆ ಮತ್ತೆ ಕೆಲಸಕ್ಕೆ ತೆರಳುವ ಆಸೆ ಕೈಗೂಡುವ ಕನಸು ಗರಿಗೆದರಿದೆ. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಶಾನಿ ಜೋಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿದೇಶದಲ್ಲಿ ಉದ್ಯೋಗ ಹೊಂದಲು ಅರ್ಜಿದಾರರಿಗೆ ಪಾಸ್‌ಪೋರ್ಟ್ ಅವಶ್ಯಕತೆ ಇದೆ. 7 ವರ್ಷಗಳ ಕಾಲ ಪಾಸ್‌ಪೋರ್ಟ್ ಹಸ್ತಾಂತರಿಸದಿದ್ದಲ್ಲಿ ಆಕೆಯ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಂದುವರಿದು ಆದೇಶದ ಪ್ರತಿ ಲಭ್ಯವಾದ 4 ವಾರದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಕಾನೂನಿನ ಅನುಸಾರ ಪಾಸ್‌ಪೋರ್ಟ್ ಹಿಂದಿರುಗಿಸಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಶುಶ್ರೂಷಕಿಯಾಗಿ ಯೆಮನ್ ದೇಶದಲ್ಲಿ ಕೆಲಸದಲ್ಲಿದ್ದರು. ಆಕೆಗೆ ಪ್ರಯಾಣ ನಿಷೇಧದ ಕುರಿತು ಸರ್ಕಾರ ಹೊರಡಿಸಿದ ಅಧಿಸೂಚನೆಯ ಬಗ್ಗೆ ಮಾಹಿತಿ ಇರಲಿಲ್ಲ. 2023ರ ಪ್ರಯಾಣದ ವೇಳೆ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಬಳಿಕ ವಲಸೆ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಅರ್ಜಿದಾರರು ಏಕೆ ಪ್ರಯಾಣ ಬೆಳೆಸಿದ್ದಾಳೆ? ಎನ್ನುವ ಕುರಿತು ವಿಸ್ತಾರವಾದ ವಿವರಣೆ ನೀಡಿದ್ದಾರೆ. ಆದರೂ ಅರ್ಜಿದಾರ ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿದಾರರು ನಿಯಮ ಉಲ್ಲಂಘನೆ ಮಾಡಿ ಯೆಮನ್ ದೇಶದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ 7 ವರ್ಷಗಳವರೆಗೂ ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗುತ್ತದೆ. ಹಾಗಾಗಿ ಪಾಸ್‌ಪೋರ್ಟ್ ಹಸ್ತಾಂತರಿಸಲು ಸಾಧ್ಯವಿಲ್ಲ. ಇವೆಲ್ಲವನ್ನೂ ಪರಿಗಣಿಸಿ ಪಾಸ್‌ಪೋರ್ಟ್ ಪ್ರಾಧಿಕಾರ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದೆ. ಇದೀಗ ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಈ ವಿಚಾರವಾಗಿ ಅರ್ಜಿದಾರೆ ಒಬ್ಬರನ್ನು ದೂಷಿಸುವುದು ಸರಿಯಲ್ಲ. ಪ್ರಕರಣ ಸಂಬಂಧ ಅವರು ಅಧಿಕಾರಿಗಳ ಪ್ರಶ್ನೆಗೆ ಸಮರ್ಪಕವಾಗಿ ಸ್ಪಂದಿಸಿದ್ದಾಳೆ. ಅಷ್ಟೆ ಅಲ್ಲದೆ ಮಹಿಳೆ ಕಾನೂನು ಪಾಲಿಸುವ ನಾಗರೀಕರಾಗಿದ್ದು, ತಿಳಿಯದೆ ಮಾಡಿದ ತಪ್ಪಿಗೆ ಈ ರೀತಿ 7 ವರ್ಷಗಳ ಕಾಲ ಪಾಸ್‌ಪೋರ್ಟ್ ಮುಟ್ಟಗೋಲು ಹಾಕುವುದರಿಂದ ವಿದೇಶದಲ್ಲಿ ಕೆಲಸ ನಿರ್ವಹಿಸಬೇಕೆಂಬ ಆಕೆಯ ಆಸೆಗೆ ಹಿನ್ನಡೆಯಾಗಲಿದೆ. ಹಾಗಾಗಿ ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದರು.
ಪ್ರಕರಣ ಹಿನ್ನೆಲೆ: ಅರ್ಜಿದಾರರಾದ ಶಾನಿ ಜೋಸ್ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ ಡಿಪ್ಲೋಮಾ ಹೊಂದಿದ್ದು, 2011 ರಿಂದ ಯೆಮೆನ್‌ನಲ್ಲಿ ಶ್ರೂಶಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಆಕೆ ಎರಡು ಬಾರಿ ಯೆಮನ್‌ನಿಂದ ಭಾರತಕ್ಕೆ ಮರಳಿ ಭೇಟಿ ನೀಡಿದ್ದರು. ಆಕೆಯ ತಂದೆ ಹೊಟ್ಟೆ ಕ್ಯಾನ್ಸ್‌ರ್‌ನಿಂದ ಬಳಲುತ್ತಿರುವ ಹಿನ್ನಲೆ ತಂದೆ ಯೋಗಕ್ಷೇಮ ವಿಚಾರಿಸುವ ನಿಟ್ಟಿನಲ್ಲಿ 2023ರ ಆಗಸ್ಟ್‌ನಲ್ಲಿ ಯೆಮೆನ್‌ನಿಂದ ಭಾರತಕ್ಕೆ ಹಿಂತಿರುಗಿದಳು.
ಈ ವೇಳೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಆಕೆಯ ಪ್ರಯಾಣ ಕಾನೂನು ಉಲ್ಲಂಘನೆಯಾಗಿದೆ ಎಂದು ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದರು. ಬಳಿಕ ಬಳಿಕ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಅರ್ಜಿದಾರರು ಏಕೆ ಪ್ರಯಾಣ ಬೆಳೆಸಿದ್ದಾಳೆ ಎನ್ನುವ ಕುರಿತು ವಿಸ್ತಾರವಾದ ವಿವರಣೆ ನೀಡಿದ್ದರೂ ಸಹ ಅಧಿಕಾರಿಗಳು ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು.












Click it and Unblock the Notifications