ಗೌರಿ ಬಗ್ಗೆ ಹೇಳಿಕೆ, ಶಾಸಕ ಜೀವರಾಜ್ ವಿರುದ್ಧ ದೂರು
ಶೃಂಗೇರಿ, ಸೆ. 07: ಪತ್ರಕರ್ತೆ ಗೌರಿ ಲಂಕೇಶ್ ವಿರುದ್ಧ ಹೇಳಿಕೆ ನೀಡಿದ ಆರೋಪ ಹೊರೆಸಿ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್.ಜೀವರಾಜ್ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ಜಾಥಾ-ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ಜೀವರಾಜ್ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

'ಚಡ್ಡಿಗಳ ಮಾರಣಹೋಮ ಅಂಥ ಬರೆದಿದ್ದೇ ಗೌರಿ ಲಂಕೇಶ್ ಹತ್ಯೆಗೆ ಕಾರಣ' ಎಂಬ ಅರ್ಥ ಬರುವ ರೀತಿ ಮಾತನಾಡಿದ್ದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಜೀವರಾಜ್ ಅವರ ಹೇಳಿಕೆಯನ್ನು ಗಮನಿಸಿದರೆ ಈ ಹತ್ಯೆಯ ಆರೋಪಿಗಳು ಯಾರು ಎಂಬುದು ಇವರಿಗೆ ಸ್ಪಷ್ಟವಾಗಿ ತಿಳಿದ್ದಂತಿದೆ. ಬಿಜೆಪಿ ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್‍ಕರುಮನಿ ಮುಂತಾದವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೌರಿ ಕೊಲೆಯನ್ನು ಸಮರ್ಥಿಸಿದ್ದಲ್ಲದೆ, ಮತೀಯ ದ್ವೇಷ ಹಾಗೂ ಗುಂಪು ಘರ್ಷಣೆಗೆ ಕಾರಣವಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೀವರಾಜ್ ಅವರು, ನನ್ನ ಭಾಷಣದ ಒಂದೆರಡು ವಾಕ್ಯಗಳನ್ನು ಮಾತ್ರ ಕೇಳಿಸಿಕೊಂಡಿದ್ದರಿಂದ ಅನರ್ಥಕ್ಕೆ ಕಾರಣವಾಗಿದೆ. ಗೌರಿ ಅವರ ಸಾವಿನಿಂದ ನಾನು ಕೂಡಾ ನೊಂದಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಬೇಡಿ. ಕಲಬುರ್ಗಿ ಸೇರಿದಂತೆ ಗೌರಿ ಹಂತಕರನ್ನು ಬಂಧಿಸಬೇಕು. ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.












Click it and Unblock the Notifications