ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಜಾಗಗಳನ್ನು ಎಸ್‌ಐಟಿಗೆ ತೋರಿಸಿದ ದೂರುದಾರ!
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಾನೇ ಈ ಭಾಗದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ವ್ಯಕ್ತಿ ಹೇಳಿಕೆ ದಾಖಲಿಸಿದ್ದ. ಅದರಂತೆ ಅನುಮತಿ ಕೊಟ್ಟರೆ ತಾನೇ ಆ ಜಾಗಗಳನ್ನು ತೋರಿಸುವುದಾಗಿಯೂ ಹೇಳಿದ್ದ. ಈ ಹಿನ್ನೆಲೆ ಇಂದು ಎಸ್‌ಐಟಿ ತಂಡದೊಂದಿಗೆ ಖುದ್ದಾಗಿ ತೆರಳಿ ಧರ್ಮಸ್ಥಳದ ಅರಣ್ಯ ಭಾಗದ ಹಲವು ಕಡೆ ಜಾಗಗಳನ್ನು ತೋರಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನೇತ್ರಾವತಿ ತಟದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ.
ದಟ್ಟ ಅರಣ್ಯದ ಮಧ್ಯೆ ಸುಮಾರು 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಹಜರು ನಡೆದಿದ್ದು, ಈ ಜಾಗಗಳಲ್ಲಿ ತಾನು ಈ ಹಿಂದೆ ಶವಗಳನ್ನು ಹೂತಿದ್ದಾಗಿ ಸಾಕ್ಷಿ ದೂರುದಾರ ಹೇಳಿದ್ದಾನೆ. ಹಾಗಾಗಿ ಆ ವ್ಯಕ್ತಿ ತೋರಿಸಿದ ಜಾಗಗಳನ್ನು ಎಸ್‌ಐಟಿ ತಂಡ ಗುರುತು ಮಾಡಿದೆ.

ಧರ್ಮಸ್ಥಳ ಭಾಗದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ಚುರುಕಾಗಿದ್ದು, ಇಂದು ಪ್ರಕರಣದ ರಸಹ್ಯ ಪತ್ತೆ ಹಚ್ಚಲು ನೇತ್ರಾವತಿ ಸ್ನಾನಘಟ್ಟದ ಬಳಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದೂರು ಕೊಟ್ಟಿರುವ ಅನಾಮಿಕ ವ್ಯಕ್ತಿಯನ್ನು ಕರೆತಂದು ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಶವಗಳನ್ನು ಹೂತಿಟ್ಟಿದ್ದೆ ಎಂದಿದ್ದ ಜಾಗಗಳನ್ನು ಅಧಿಕಾರಿಗಳ ಸಮ್ಮುಖದಲ್ಲೇ ತೋರಿಸಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಆ ಜಾಗಗಳನ್ನು ಮಾರ್ಕ್ ಮಾಡಿದ್ದಾರೆ. ಸದ್ಯದಲ್ಲೇ ಈ ಜಾಗಗಳನ್ನು ಅಗೆದು ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಕಳೆದ ಎರಡು ದಿನಗಳಿಂದ ಆ ಅನಾಮಿಕ ವ್ಯಕ್ತಿಯನ್ನ ವಿಚಾರಣೆ ನಡೆಸಲಾಗುತ್ತಿದ್ದು, ಇಂದು ಹೇಳಿಕೆ ಆಧರಿಸಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿಗಳು, ಎಫ್‌ಎಸ್‌ಎಲ್ ತಂಡವು ಆ ವ್ಯಕ್ತಿ ತೋರಿಸಿದ ಜಾಗದಲ್ಲಿ ಪರಿಶೀಲನೆ ನಡೆಸುತ್ತಿದೆ. ಆ ಜಾಗಗಳಲ್ಲಿ ಯಾವುದಾದರೂ ಕಳೇಬರ ಸಿಗುತ್ತದೆಯೇ ಎಂದು ಹುಡುಕಾಟ ನಡೆಸಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿತ್ತು ಎನ್ನಲಾದ ಮೃತದೇಹಗಳನ್ನು ಹೂತುಹಾಕಿದ ಕೇಸ್ ಸಂಚಲನ ಸೃಷ್ಟಿಸಿದೆ. ಈ ಕೇಸ್‌ನ ಸಾಕ್ಷಿ ದೂರುದಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಜಾಗವನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ತೋರಿಸಿದ್ದು, ಮುಖಕ್ಕೆ ಮುಸುಕು ಹಾಕಿ ಆತನನ್ನ ಕರೆತರಲಾಗಿತ್ತು. ಅಲ್ಲದೆ ಆ ವ್ಯಕ್ತಿಗೆ ಬಿಗಿ ಪೊಲೀಸ್ ರಕ್ಷಣೆ ಕೂಡ ನೀಡಲಾಗಿತ್ತು. ಮೊದಲಿಗೆ ಎಸ್ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನ ಘಟ್ಟದ ಬಳಿ ಆತನನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಅರಣ್ಯ ಪ್ರದೇಶದಲ್ಲೂ ಹಲವು ಸ್ಥಳಗಳನ್ನು ಗುರುತಿಸಲಾಗಿದೆ.












Click it and Unblock the Notifications