ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ರೈತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ: ಡಿ ಕೆ ಶಿವಕುಮಾರ್
ಹಾವೇರಿ: ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಅವರದೇ ಆದ ಲೆಕ್ಕಾಚಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರವಾಗಿ ಎಕರೆಗೆ 25 ಲಕ್ಷ ದರ ನಿಗದಿ ಮಾಡಲಾಗಿತ್ತು. ನಮ್ಮ ಸರ್ಕಾರದ ಸಚಿವರು ಸೇರಿ ಇತ್ತೀಚೆಗೆ ಸಭೆ ಮಾಡಿ ರೈತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳಿದ್ದೆವು. ನೀವು ನಮಗೆ 6 ಶಾಸಕರನ್ನು ಕೊಟ್ಟಿದ್ದಕ್ಕೆ ನಾವು ಪ್ರತಿ ವರ್ಷ 54 ಸಾವಿರ ಕೋಟಿ ವೆಚ್ಚ ಮಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಈ ಯೋಜನೆಗಳ ಜಾರಿ ಸಾಧ್ಯವೇ ಎಂದು ಬಸವರಾಜ ಬೊಮ್ಮಾಯಿ ಅವರು, ಯಡಿಯೂರಪ್ಪ ಅವರು ಕೇಳಿದರು. ಒಂದು ಕಾಳು ಕಮ್ಮಿ ಕೊಟ್ಟರೂ ಒಪ್ಪುವುದಿಲ್ಲ ಎಂದರು. ಚುನಾವಣೆಗೆ ಸಮಯದಲ್ಲಿ ಬಂದಾಗ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರದಲ್ಲಿ ಇದ್ದದ್ದಕ್ಕೆ ಐದು ಗ್ಯಾರಂಟಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡುತ್ತಿದೆ. ಬೆಲೆ ಏರಿಕೆ ಸಮಸ್ಯೆ ಹೊರೆ ಇಳಿಸಲು ಈ ಯೋಜನೆ ನೀಡಿದೆವು. ಇಂತಹ ತೀರ್ಮಾನವನ್ನು ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಮಾಡಲಿಲ್ಲ ಎಂದರು.

ಈ ಹಿಂದೆ ರೈತರ ಪಂಪ್ ಸೆಟ್ ಗಳಿಗೆ 10 ಹೆಚ್ ಪಿ ವಿದ್ಯುತ್ ಉಚಿತ ನೀಡುತ್ತಾ ಬಂದಿದ್ದೇವೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ 20 ಸಾವಿರ ಕೋಟಿ ವೆಚ್ಚ ನೀಡುತ್ತಿದೆ. ಅನೇಕ ರಾಜ್ಯಗಳಲ್ಲಿ ಇಂತಹ ಯೋಜನೆ ಇಲ್ಲ. ನಮ್ಮ ಸರ್ಕಾರ ವಿವಿಧ ಕಾರ್ಯಕ್ರಮಗಳ ಮೂಲಕ ಸಬ್ಸಿಡಿ ರೂಪದಲ್ಲಿ ರಾಜ್ಯದ ಜನರ ಜೇಬಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ಹಣವನ್ನು ಹಾಕುತ್ತಿದೆ. ಇನ್ನು ನಮ್ಮ ಸರ್ಕಾರ ರಾಜ್ಯದಲ್ಲಿ 500 ಕೆಪಿಎಸ್ ಶಾಲೆ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
ನಮ್ಮ ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ಹಣ ಸಿಎಸ್ಆರ್ ನಿಧಿ ಮೂಲಕ ಸಂಗ್ರಹವಾಗುತ್ತದೆ. ಈ ಹಣವನ್ನು ಬಳಸಿಕೊಂಡು ಈ ನಿಧಿಯನ್ನು ಶಾಲೆಗಳ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಪ್ರತಿ ಮೂರು ಪಂಚಾಯ್ತಿಗೆ ಸೇರಿ ಒಂದು ಕೆಪಿಎಸ್ ಶಾಲೆ ನಿರ್ಮಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಗುವ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.
ನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಈ ನಿರ್ಧಾರಕ್ಕೆ ಬಂದಿದೆ ಗೊತ್ತಿಲ್ಲ. ಇಷ್ಟು ದಿನ ಈ ಯೋಜನೆಯಲ್ಲಿ 90% ಅನುದಾನ ನೀಡುತ್ತಿದ್ದ ಕೇಂದ್ರ ಈಗ ಇದರ ಪಾಲನ್ನು 60:40 ಅನುಪಾತಕ್ಕೆ ಇಳಿಸಿದೆ. ಈ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಜನರಿಗೆ ಮನವರಿಕೆ ಮಾಡಬೇಕು. ನಮ್ಮ ಸರ್ಕಾರ ಉದ್ಯೋಗ, ಆಹಾರ, ಆರೋಗ್ಯ ಭದ್ರತೆ ನೀಡಿದೆ. ರೈತರಿಗೆ ಭೂಮಿ, ಬ್ಯಾಂಕುಗಳ ರಾಷ್ಟ್ರೀಕರಣ, ಮಧ್ಯಾಹ್ನ ಬಿಸಿಯೂಟ, ಸ್ತ್ರೀಶಕ್ತಿ, ಅನ್ನಭಾಗ್ಯ ಯೋಜನೆ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ಈ ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತಿರುವ ಈ ಆರು ಶಾಸಕರನ್ನು ಮತ್ತೆ ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.












Click it and Unblock the Notifications